ಬೆಳಗಾವಿ:
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರಕ್ಕೆ ತಗಲುವ ಖರ್ಚು-ವೆಚ್ಚಗಳನ್ನು ಲೆಕ್ಕಾಚಾರ ಮಾಡಲು ಅನುಕೂಲವಾಗುವಂತೆ ವಿವಿಧ ಸೇವೆಗಳಿಗೆ ನಿಗದಿಪಡಿಸಲಾದ ಮಾರುಕಟ್ಟೆ ದರಗಳನ್ನು ಆಧರಿಸಿಯೇ ವೆಚ್ಚವನ್ನು ಲೆಕ್ಕ ಮಾಡಲಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಎಸ್.ಆರ್. ದರ ನಿಗದಿಪಡಿಸುವ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಸ್.ಆರ್. ದರಗಳನ್ನು ಆರು ತಿಂಗಳ ಹಿಂದೆಯೇ ನಡೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಿಗದಿಪಡಿಸಲಾಗಿರುತ್ತದೆ. ಆದಾಗ್ಯೂ ಪ್ರಸ್ತುತ ಮಾರುಕಟ್ಟೆ ದರಗಳು ಮತ್ತು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಲಹೆಗಳನ್ನು ಆಧರಿಸಿ ದರಗಳಲ್ಲಿ ಅಗತ್ಯ ಪರಿಷ್ಕರಣೆ ಮಾಡಲಾಗುವುದು ಎಂದು ಹೇಳಿದರು.
ಚುನಾವಣಾ ಪ್ರಚಾರ ಸಂದರ್ಭದಲ್ಲಿ ಬಳಕೆ ಮಾಡುವ ಹೂವುಗಳ ದರವನ್ನು ಕಡಿಮೆಗೊಳಿಸಬೇಕು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಪ್ರತಿನಿಧಿಗಳು ಸಲಹೆ ನೀಡಿದರು.
ನಗರದಲ್ಲಿರುವ ಪುಷ್ಪ ಹರಾಜು ಕೇಂದ್ರದಿಂದ ಸಗಟು ಮಾರುಕಟ್ಟೆ ದರಗಳನ್ನು ಪಡೆದುಕೊಂಡು ದರಗಳನ್ನು ಪರಿಷ್ಕರಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ಇನ್ನೂ ಸಾಕಷ್ಟು ಕಾಲವಕಾಶ ಇರುವುದರಿಂದ ದರ ಪರಿಷ್ಕರಣೆ ಹಾಗೂ ಹೊಸ ಸಾಮಗ್ರಿಅಥವಾ ಸೇವೆಗಳ ಸೇರ್ಪಡೆಯನ್ನು ಮಾಡಲಾಗುತ್ತದೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳು ತಮ್ಮ ಸಲಹೆ-ಅಭಿಪ್ರಾಯಗಳನ್ನು ತಿಳಿಸಬೇಕು ಎಂದು ಹೇಳಿದರು.
ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆ:
ಜನವರಿ 1 ರಂದು ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು. ಅಲ್ಲಿಯವರೆಗೂ ಚುನಾವಣಾ ಆಯೋಗದ ಮಾರ್ಗಸೂಚಿ ಮತ್ತು ನಿರ್ದೇಶನದ ಪ್ರಕಾರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
27 ಅಕ್ಟೋಬರ್ ನಿಂದ ಡಿಸೆಂಬರ್ 9 ರವರೆಗಿನ ಅವಧಿಯಲ್ಲಿ ಕೈಗೊಳ್ಳಲಾಗಿರುವ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಮಾಹಿತಿಯನ್ನು ಒದಗಿಸಲಾಯಿತು.
ಮತದಾರರ ಪಟ್ಟಿಯಲ್ಲಿ ಹೊಸದಾಗಿ ಹೆಸರುಗಳ ಸೇರ್ಪಡೆ, ತೆಗೆದುಹಾಕುವಿಕೆ, ತಿದ್ದುಪಡಿ ಮತ್ತಿತರ ಪರಿಷ್ಕರಣೆ ಒಳಗೊಂಡ ಮತದಾರರ ಪಟ್ಟಿಯನ್ನು ನೀಡಲಾಯಿತು.
ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ, ಜಿಲ್ಲಾ ಪಂಚಾಯತಿ ಮುಖ್ಯ ಲೆಕ್ಕಾಧಿಕಾರಿ ಪರಶುರಾಮ್ ದುಡಗುಂಟಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ್ ಕಂಕಣವಾಡಿ, ಮಹಾನಗರ ಪಾಲಿಕೆಯ ಉಪ ಆಯುಕ್ತೆ ರೇಷ್ಮಾ ತಾಳಿಕೋಟೆ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.