ಬೆಳಗಾವಿ:
ಎಲ್ಲ ಮಠಗಳ ಮಧ್ಯೆ ಆತ್ಮೀಯತೆ ಬಂದರೆ, ಎಲ್ಲ ಧಾರ್ಮಿಕ ಸಂಪ್ರದಾಯಗಳೂ ಒಂದಾದರೆ ದೇಶ ಅಖಂಡವಾಗುತ್ತದೆ, ದೇಶದ ಎಲ್ಲ ಸಮಸ್ಯೆಗಳೂ ಪರಿಹಾರವಾಗುತ್ತವೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಹಾಗೂ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯ ಪಟ್ಟಿದ್ದಾರೆ.
ಹುಕ್ಕೇರಿ ಹಿರೇಮಠದ ಬೆಳಗಾವಿ ಶಾಖೆಯಲ್ಲಿ ಮಂಗಳವಾರ ಹಿರೇಮಠದ ವತಿಯಂದ ಸ್ವರ್ಣವಲ್ಲೀ ಶ್ರೀಗಳನ್ನು ಸತ್ಕರಿಸಿ, ಗೀತಾಭಿಯಾನಾರ್ಣವ ಬಿರುದು ಪ್ರದಾನ ಮಾಡಲಾಯಿತು. ಈ ವೇಳೆ ಮೊದಲ ಮಾತನಾಡಿದ ಚಂದ್ರಶೇಖರ ಶಿವಾಚಾರ್ಯರು, ಜಗದ್ಗುರು ರೇಣುಕಾಚಾರ್ಯರು ಮತ್ತು ಜಗದ್ಗುರು ಶಂಕರಾಚಾರ್ಯರು ಹಿಂದೆ ಒಟ್ಟಾಗಿ ಕೆಲಸ ಮಾಡಿದ್ದರೇನೋ ಎನ್ನುವ ಭಾವನೆ ನಮಗೆ ಬರುತ್ತಿದೆ. ಜಾತಿ ಮೀರಿ ಎರಡೂ ಮಠಗಳು ಕೆಲಸ ಮಾಡುತ್ತಿವೆ. ಮಠಗಳ ಮಧ್ಯೆ ಸಾಮರಸ್ಯ ಮೂಡಬೇಕು ಎನ್ನುವುದು ನಮ್ಮ ಭಾವನೆ. ಸ್ವರ್ಣವಲ್ಲೀ ಮಠ ಪೂರ್ಣ ಸುಖ ನೀಡುವ ಮಠವಾಗಿದೆ ಎಂದರು.
ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಮಠದ ಮಠಾಧೀಶ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅವರು ಭಗವದ್ಗೀತೆಯ ಅಭಿಯಾನವನ್ನು ಕರ್ನಾಟಕದ ತುಂಬ ಮಾಡುವ ಮೂಲಕ ಮನೆ ಮಾತಾಗಿದ್ದಾರೆ. ಶ್ರೀಗಳು ನಮ್ಮ ಸನಾತನ ಧರ್ಮದ ಬಗ್ಗೆ ಸಮಾಜಕ್ಕೆ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
2007 ರಿಂದಲೂ ರಾಜ್ಯದಲ್ಲಿ ಸಂಚಲನ ಮೂಡಿಸುತ್ತಿದ್ದಾರೆ. ಹಿಂದು ಧರ್ಮದಲ್ಲಿರುವ ಎಲ್ಲ ಸಂಪ್ರದಾಯ ಮಠ, ಮಾನ್ಯಗಳು ಒಂದಾಗಿ ಸನಾತನ ಸಂಸ್ಕೃತಿ ಎತ್ತಿ ಹಿಡಿದಾಗ ಮಾತ್ರ ಭಾರತಕ್ಕೆ ಭವಿಷ್ಯ ಇದೆ. ಈ ನಿಟ್ಟಿನಲ್ಲಿ ನಮ್ಮದ್ದು ವೀರಶೈವ ಮಠ, ರೇಣುಕಾಚಾರ್ಯರ ಪರಂಪರೆಯ ಮಠ, ಸ್ವರ್ಣವಲ್ಲಿ ಜಗದ್ಗುರುಗಳದ್ದು ಶಂಕರಾಚಾರ್ಯರ ಪಂರಪರೆಯ ಮಠವಾಗಿದೆ. ಇತಿಹಾಸದಲ್ಲಿ ಜಗದ್ಗುರು ರೇಣುಕಾಚಾರ್ಯರು ಮತ್ತು ಶಂಕರಾಚಾರ್ಯರು ಒಂದಾಗಿದ್ದರು ಎನ್ನುವ ಮಾತು ಇದೆ ಎಂದರು.
ಸ್ವರ್ಣವಲ್ಲೀ ಶ್ರೀಗಳು ಮಾತನಾಡಿ, ಎಲ್ಲ ಸಂಪ್ರದಾಯದ ಮಠಗಳೂ ಒಂದಾಗಬೇಕು, ಅದೇ ಸಮನ್ವಯ. ಧರ್ಮಗಳು, ಆಧ್ಯಾತ್ಮಿಕ ಚಿಂತನೆಗಳು ಭಾರತದಲ್ಲಿ ಹುಟ್ಟಿದಷ್ಟು ಬೇರೆಲ್ಲೂ ಹುಟ್ಟಿಲ್ಲ. ಭಾರತ ಅಖಂಡವಾಗಬೇಕಾದರೆ, ಇಲ್ಲಿನ ಸಮಸ್ಯೆಗಳು ನಿವಾರಣೆಯಾಗಬೇಕಾದರೆ ಎಲ್ಲ ಧಾರ್ಮಿಕ ಸಂಪ್ರದಾಯಗಳೂ ಒಂದಾಗಬೇಕು
ಎಂದರು.
ಭಗವದ್ಗೀತೆ ಅಭಿಯಾನಕ್ಕೆ ವೀರಶೈವ ಮಠಗಳಿಂದ ಉತ್ತಮ ಸಹಕಾರ ಸಿಗುತ್ತಿದೆ. ಅದರಲ್ಲೂ ಹುಕ್ಕೇರಿ ಮಠದಿಂದ ಪರಮೋಚ್ಛ ಸಹಕಾರ ಇದೆ. ಇಲ್ಲಿ ಒಂದು ಮಠದಿಂದ ಇನ್ನೊಂದು ಮಠದ ಸ್ವಾಮಿಗಳನ್ನು ಸತ್ಕರಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಯಾಗಿದೆ. ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಸಾಮಾಜಿಕ, ಧಾರ್ಮಿಕ ಕಾರ್ಯದಲ್ಲಿ ಇತಿಹಾಸವನ್ನೆ ಸೃಷ್ಟಿಸಿದ್ದಾರೆ. ಬೆಲ್ಲದಂತೆ ತಾನಾಗಿಯೇ ಉಕ್ಕೇರುವ ಸಿಹಿ ಹುಕ್ಕೇರಿ ಶ್ರೀಗಳು. ಅವರು ನೀಡಿರುವ ಗೀತಾಭಿಯಾನಾರ್ಣವ ಪ್ರಶಸ್ತಿ ಶಂಕರಾಚಾರ್ಯರಿಗೆ ಸಲ್ಲಬೇಕು ಎಂದು ಸ್ವರ್ಣವಲ್ಲೀ ಶ್ರೀಗಳು ಹೇಳಿದರು.
ಭಗವದ್ಗೀತೆಯನ್ನು ಜನರ ಬಾಯಿಂದ ಹೇಳಿಸಬೇಕು. ಅವರಿಗೆ ತಿಳಿಸಬೇಕು ಎನ್ನುವುದೇ ಭಗವದ್ಗೀತೆ ಅಭಿಯಾನದ ಉದ್ದೇಶವಾಗಿದೆ. ಇದೇ 23ರಂದು ಬೆಳಗಾವಿಯಲ್ಲಿ ನಡೆಯಲಿರುವ ಭಗವದ್ಗೀತೆ ಅಭಿಯಾನದ ಮಹಾಸಮರ್ಪಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸ್ವರ್ಣವಲ್ಲೀ ಶ್ರೀಗಳು ಕರೆ ನೀಡಿದರು.
ಶ್ರೀ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠ ಗುರುಕುಲದ ಸುಮಾರು 150 ವೇದ ವಟುಗಳು ಹಾಗೂ 50 ಜನ ಮಹಿಳೆಯರು ಒಟ್ಟಿಗೆ ಭಗವದ್ಗೀತೆ ಪಠಣ ಮಾಡಿದರು. ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು. ಅಭಿಯಾನ ಸಮಿತಿಯ ಕಾರ್ಯಾಧ್ಯಕ್ಷ ಪರಮೇಶ್ವರ ಹೆಗಡೆ, ಕಾರ್ಯದರ್ಶಿ ಎಂ.ಕೆ.ಹೆಗಡೆ, ಗಣೇಶ ಹೆಗಡೆ, ವೆಂಕಟ್ರಮಣ ಹೆಗಡೆ ಮೊದಲಾದವರು ಇದ್ದರು.
ಕಾರ್ಯಕ್ರಮಕ್ಕೆ ಸಂದೇಶ ನೀಡಿರುವ ತುಮಕೂರಿನ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಭಗವದ್ಗೀತೆಯನ್ನು ಮನೆ ಮನೆಗೆ ತಲುಪಿಸುವ ಮತ್ತು ಮನ ಮನಕ್ಕೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ. ನಾಡಿನ ತುಂಬೆಲ್ಲ ಅದ್ಭುತ ಕ್ರಾಂತಿಯನ್ನು ಮಾಡಿದ್ದಾರೆ. ಅವರ ಗೀತಾ ಅಭಿಯಾನ ನೂರಕ್ಕೆ ನೂರು ಯಶಸ್ವಿಯಾಗಿದೆ. ಗೀತಾ ಅಭಿಯಾನದ ಸಮುದ್ರದಂತಿರುವ ಪೂಜ್ಯರಿಗೆ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಗೀತಾಭಿಯಾನಾರ್ಣವ ಅಭಿನಂದನಾ ಗೌರವ ಸಲ್ಲಿಸಿದ್ದು ನಿಜಕ್ಕೂ ಸೂಕ್ತ ಮತ್ತು ಸಮಯೋಚಿತ ಎಂದು ತಿಳಿಸಿದ್ದಾರೆ.