ಬೆಂಗಳೂರು:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ‘ಕೆಎಸ್ಆರ್ಟಿಸಿ’ ಸಂಕ್ಷೇಪಣಾ ಗುರುತು ಬಳಸಬಾರದು ಎಂದು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಲ್ಲಿಸಿದ ಮನವಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ. ಹಾಗೂ ಕೆಎಸ್ಆಆರ್ಟಿಸಿ ಹೆಸರು ಬಳಕೆಗೆ ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ‘ಕೆಎಸ್ಆರ್ ಟಿ ಸಿ’ಕಾನೂನು ಹೋರಾಟದಲ್ಲಿ ಕರ್ನಾಟಕಕ್ಕೆ ಜಯ ಸಿಕ್ಕಿದೆ, ಕೇರಳಕ್ಕೆ ಹಿನ್ನಡೆಯಾಗಿದೆ.
ಕರ್ನಾಟಕವು 1973ರಿಂದ ಕೆಎಸ್ಆರ್ಟಿಸಿ ಲೋಗೊ ಬಳಸುತ್ತಿರುವ ಬಗ್ಗೆ ದಾಖಲೆಗಳನ್ನು ಚೆನ್ನೈ ಟ್ರೇಡ್ ಮಾರ್ಕ್ ನೋಂದಣಿ ಅಧಿಕಾರಿಗೆ ಸಲ್ಲಿಸಿ 2013ರಲ್ಲಿ ಟ್ರೇಡ್ ಮಾರ್ಕ್ ಪ್ರಮಾಣ ಪತ್ರವನ್ನು ಪಡೆದಿತ್ತು. ಭಾರತ ಸರ್ಕಾರದ ರಿಜಿಸ್ಟ್ರಾರ್ ಆಫ್ ಕಾಪಿ ರೈಟ್ಸ್, ಅವರಿಂದ ‘KSRTC’ ಲೋಗೋ ಮತ್ತು ‘ಗಂಡಭೇರುಂಡ ಗುರುತು’ ಬಳಕೆಗಾಗಿ ಕಾಪಿ ರೈಟ್ ಅನ್ನು ಸಹ ಪಡೆಯಲಾಗಿದೆ. ಆದರೆ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಚೆನ್ನೈನಲ್ಲಿರುವ ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿಯ (ಇಂಟಲೆಕ್ಚುವಲ್ ಪ್ರಾಪರ್ಟಿ ಅಪೀಲ್ ಬೋರ್ಡ್) ಮುಂದೆ ಇದನ್ನು ಪ್ರಶ್ನಿಸಿತ್ತು.
ತಿರುವಾಂಕೂರು ರಾಜ್ಯ ಸಾರಿಗೆ 1937ರಿಂದ ಇತ್ತು. ಕೇರಳ ರಾಜ್ಯ ಉದಯವಾದ ಮೇಲೆ 1965ರಿಂದ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ ಆರಂಭವಾಯಿತು. ಕೆಎಸ್ಆರ್ಟಿಸಿ ಲೋಗೊ ಬಳಕೆ ಆರಂಭಿಸಲಾಯಿತು. ಕರ್ನಾಟಕ ರಾಜ್ಯವೂ ‘ಕೆಎಸ್ಆರ್ಟಿಸಿ’ ಎಂದೇ ಬಳಸುತ್ತಿದೆ ಎಂದು ಕೇರಳವು ಆಕ್ಷೇಪಿಸಿತ್ತು.42 ವರ್ಷಗಳಿಂದ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ‘ಕೆಎಸ್ಆರ್ಟಿಸಿ’ ಬಳಸುತ್ತಿರುವುದರಿಂದ ಕರ್ನಾಟಕದ ಟ್ರೇಡ್ ಮಾರ್ಕ್ ಪ್ರಮಾಣ ಪತ್ರವನ್ನು ಅಮಾನ್ಯಗೊಳಿಸಬೇಕು ಎಂದು ಅದು ವಾದಿಸಿತ್ತು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಲೋಗೊದಲ್ಲಿ ‘ಗಂಡ ಭೇರುಂಡ’ ಗುರುತು ಬಳಕೆಗೆ ಹಕ್ಕುಸ್ವಾಮ್ಯ ಪಡೆಯಲಾಗಿದೆ. ಕೇರಳದ ಲೋಗೊ ‘ಆನೆ’ ಗುರುತು ಪ್ರತ್ಯೇಕ ಟ್ರೇಡ್ ಮಾರ್ಕ್ ಹೊಂದಿದೆ ಎಂದು ಕರ್ನಾಟಕವು ವಾದಿಸಿತ್ತು.
ಕೇಂದ್ರ ಸರ್ಕಾರವು ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿಯನ್ನು ರದ್ದುಗೊಳಿಸಿ, ಅಲ್ಲಿರುವ ಪ್ರಕರಣಗಳನ್ನು ಮದ್ರಾಸ್ ಹೈಕೋರ್ಟ್ಗೆ ವರ್ಗಾಯಿಸಿತ್ತು.
ಇದನ್ನು ‘ವಿಶೇಷ ಪ್ರಕರಣ’ ಎಂದು ಪರಿಗಣಿಸಿದ ಮದ್ರಾಸ್ ಹೈಕೋರ್ಟ್ ಕೇರಳ ಹಾಗೂ ಕರ್ನಾಟಕ ರಾಜ್ಯಗಳ ವಾದ-ಪ್ರತಿವಾದ ಆಲಿಸಿ, ಕೇರಳದ ಅರ್ಜಿಯನ್ನು ಡಿಸೆಂಬರ್ 12ರಂದು ವಜಾಗೊಳಿಸಿತು.
‘ಕೇರಳ ರಾಜ್ಯದವರೂ ‘ಕೆಎಸ್ಆರ್ಟಿಸಿ’ ಎಂದೇ ಬಳಕೆ ಮಾಡುವುದನ್ನು ನಾವು ಆಕ್ಷೇಪಿಸಿಲ್ಲ. ಆದರೆ ಕೇರಳವು ಕರ್ನಾಟಕ ಇದನ್ನು ಬಳಕೆ ಮಾಡುತ್ತಿರುವುದಕ್ಕೆ ಆಕ್ಷೇಪಣೆ ಸಲ್ಲಿಸಿದ್ದು, ಹೈಕೋರ್ಟ್ ಅರ್ಜಿಯನ್ನು ವಜಾ ಮಾಡಿದೆ. ಇನ್ನು ಮುಂದೆಯೂ ನಮಗೆ ಕೆಎಸ್ಆರ್ಟಿಸಿ ಎಂದು ಬಳಸಲು ನಮಗೆ ಯಾವುದೇ ಕಾನೂನಿನ ಅಭ್ಯಂತರವಿಲ್ಲ’ ಎಂದು ಕರ್ನಾಟಕ ರಾಜ್ಯ ಸಾರಿಗೆ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.