ಬೆಳಗಾವಿ :
ಹಿಂದಿನ ಕಾಲದಲ್ಲಿ ಶಿಕ್ಷಣ ಪಡೆಯಲು ಯಾವುದೇ ಸೌಲಭ್ಯಗಳು ಇರಲಿಲ್ಲ. ಕಾಲಕ್ರಮೇಣ ಬದಲಾವಣೆಯಾದಂತೆ ಶಿಕ್ಷಣದ ಮಹತ್ವ ಅರಿವಾಯಿತು. ಸದ್ಯ ಸರಕಾರ ಈಗ ಉಚಿತ ಶಿಕ್ಷಣ, ಪಠ್ಯ ಪುಸ್ತಕ, ಸಮವಸ್ತ್ರ ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡುತ್ತಿದ್ದು, ಎಲ್ಲರೂ ಇದರ ಸದುಪಯೋಗ ಪಡೆದುಕೊಂಡು ವಿದ್ಯಾವಂತರಾಗಬೇಕು ಎಂದು ಮಾಜಿ ಸಚಿವ ಆರ್. ವಿ.ದೇಶಪಾಂಡೆ ಹೇಳಿದರು.
ವಿಧಾನ ಮಂಡಳ ಚಳಿಗಾಲ ಅಧಿವೇಶನದ ಕಲಾಪ ವೀಕ್ಷಣೆಗೆ ಆಗಮಿಸಿದ್ದ ಶಾಲಾ- ಕಾಲೇಜು ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ದೈನಂದಿನ ಅಭ್ಯಾಸದ ಜತೆಗೆ ಮಕ್ಕಳು ಪ್ರತಿದಿನ ಪತ್ರಿಕೆ ಓದುವ ಮೂಲಕ ದೇಶ-ವಿದೇಶಗಳ ಮಾಹಿತಿ ಮತ್ತು ಸಾಮಾನ್ಯ ಜ್ಞಾನವನ್ನು ಸಹ ಬೆಳೆಸಿಕೊಳ್ಳಬೇಕು ಎಂದು ಮಕ್ಕಳಿಗೆ ಸಲಹೆ ನೀಡಿದರು.
ಬಡ ಮಕ್ಕಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಟ್ಟು, ಸರಕಾರದ ವಿವಿಧ ಸೌಲಭ್ಯಗಳನ್ನು ಬಳಸಿಕೊಂಡು ಉನ್ನತ ಸ್ಥಾನ ಪಡೆಯವುದರ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಬೇಕು ಎಂದರು.
ಬದಲಾಗುತ್ತಿರುವ ಸನ್ನಿವೇಶದಲ್ಲಿ ಪ್ರತಿಯೊಬ್ಬ ಮಕ್ಕಳು, ಛಲ, ಮನಸ್ಸು, ಇಚ್ಛಾಶಕ್ತಿ, ಏಕಾಗ್ರತೆ ಇಟ್ಟುಕೊಂಡು ಓದಿದರೆ ನಿಗದಿತ ಸಮಯಕ್ಕೆ ತಮ್ಮ ಗುರಿ ತಲುಪಲು ಸಾಧ್ಯ ಎಂದು ಆರ್.ವಿ.ದೇಶಪಾಂಡೆ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಮತ್ತಿತರರು ಉಪಸ್ಥಿತರಿದ್ದರು ಹಾಗೂ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.