ಬೆಳಗಾವಿ :
ಬೆಳಗಾವಿ ಸಂಸದೆ ಮಂಗಲಾ ಸುರೇಶ ಅಂಗಡಿಯವರು ಇಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ ಅವರನ್ನು ನವದೆಹಲಿಯ ರೈಲು ಭವನದಲ್ಲಿ ಭೇಟಿ ಮಾಡಿ ಬೆಳಗಾವಿ ಲೋಕಸಭಾ ವ್ಯಾಪ್ತಿಗೆ ಸಂಬಂಧಿಸಿದಂತೆ ರೇಲ್ವೆ ಇಲಾಖೆಯ ಹಲವು ಅಭಿವೃದ್ಧಿ ವಿಷಯಗಳನ್ನು ಚರ್ಚಿಸಿದರು.
ಬೆಳಗಾವಿ-ಕಿತ್ತೂರು-ಧಾರವಾಡ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಕಾಮಗಾರಿ ಪ್ರಾರಂಭಗೊಂಡಿದ್ದು ಇದನ್ನು ತೀವ್ರಗತಿಯಲ್ಲಿ ಪೂರ್ಣಗೊಳಿಸುವ ಬಗ್ಗೆ ಕ್ರಮ ಜರುಗಿಸಲು ಕೋರಿದರು.
ಬೆಳಗಾವಿ ನಗರದ ಟಿಳಕವಾಡಿ ಲೆವಲ್ ಕ್ರಾಸಿಂಗ್ 381 ಹತ್ತಿರ ನಿರ್ಮಾಣವಾಗಬೇಕಾದ ರಸ್ತೆ ಮೇಲ್ಸೇತುವೆ ಎರಡನೇ ಹಂತ ಲೇನ್ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡು ಹಲವಾರು ತಿಂಗಳು ಗತಿಸಿದ್ದು, ಇದರಿಂದಾಗಿ ನಗರದಲ್ಲಿ ಸುಗಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಇದನ್ನು ಪುನರ್ ಆರಂಭಿಸಿ ಬೇಗನೆ ಪೂರ್ಣಗೊಳಿಸಲು ವಿನಂತಿಸಿದರು.
ಅದರಂತೆ ಲೆವಲ್ ಕ್ರಾಸಿಂಗ್ 382/383 ಹತ್ತಿರ ರಸ್ತೆ ಮೇಲ್ಸೇತುವೆ ನಿರ್ಮಾಣಕ್ಕೆ ಸಹ ರೈಲ್ವೆ ಸಚಿವಾಲಯದಿಂದ ಅನುಮೋದನೆ ದೊರೆತಿದ್ದು, ಅವುಗಳ ಕಾಮಗಾರಿಯ ಶೀಘ್ರ ಪ್ರಾರಂಭಕ್ಕೆ ರೈಲ್ವೆ ಅಧಿಕಾರಿಗಳಲ್ಲಿ ಸೂಚಿಸಲು ಸಚಿವರಲ್ಲಿ ವಿನಂತಿಸಿದರು.
ಮುಂಬರುವ ದಿನಗಳಲ್ಲಿ ಬೆಳಗಾವಿ ನಗರದಿಂದ ಅಯೋಧ್ಯೆಗೆ ಶ್ರೀ ರಾಮ ಮಂದಿರ ಸುಕ್ಷೇತ್ರಕ್ಕೆ ಭೇಟಿ ನೀಡಿ ದರ್ಶನ ಪಡೆಯಲು ಮತ್ತು ಪಂಡರಪುರಕ್ಕೆ ಶ್ರೀ ವಿಠಲ-ರುಕ್ಮಿಣಿ ಮಂದಿರದ ಪ್ರವಾಸಕ್ಕೆ ಅನುಕೂಲವಾಗುವಂತೆ ಹಾಗೂ ಶ್ರೀ ಶಬರಿಮಲೆ ಸುಕ್ಷೇತ್ರಕ್ಕೆ ಪ್ರಯಾಣಿಸಲು ಬೆಳಗಾವಿ-ಕೊಚ್ಚಿ ಹಾಗೂ ಬೆಳಗಾವಿ-ಪುಣೆ ನಡುವೆ ನೂತನ ರೈಲು ಸಂಚಾರ ಪ್ರಾರಂಭಿಸಿ ಬೆಳಗಾವಿ ಲೋಕಸಭಾ ಕ್ಷೇತ್ರ ಜನರ ಬಹುದಿನಗಳ ಬೇಡಿಕೆ ಈಡೇರಿಸುವಂತೆ ಪ್ರಸ್ತಾಪಿಸಿದರು.
ಇನ್ನೂ ಅಂಚೆ ಇಲಾಖೆಗೆ ಸಂಬಂಧಿಸಿದಂತೆ ಬೆಳಗಾವಿ ಉದ್ಯಮಬಾಗದಲ್ಲಿರುವ ಅಂಚೆ ಇಲಾಖೆಯ 5೦೦೦ ಚ.ಅಡಿ ಜಮೀನಿನಲ್ಲಿ ಇಲಾಖೆಗೆ ಸ್ವಂತ ಕಟ್ಟಡ ನಿರ್ಮಿಸಲು ಅಗತ್ಯ ಅನುದಾನ ಒದಗಿಸುವಂತೆ ಕೋರಿ ಮನವಿ ಸಲ್ಲಿಸಿದರು.
ಎಲ್ಲ ಬೇಡಿಕೆಗಳನ್ನು ರೈಲ್ವೆ ಸಚಿವರು ಸಹಾನುಭೂತಿಯಿಂದ ಆಲಿಸಿ ಮನವಿಯಲ್ಲಿರುವ ಎಲ್ಲ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸುವ ಕುರಿತು ತಿಳಿಸಿರುವುದಾಗಿ ಸಂಸದೆ ಮಂಗಲ ಅಂಗಡಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.