ಬೆಂಗಳೂರು :
ಬೆಳಗಾವಿಯಲ್ಲಿ ಮಹಿಳೆ ಬೆತ್ತಲು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಉಚ್ಚ ನ್ಯಾಯಾಲಯ ಇದೀಗ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕ್ರಮಕ್ಕೆ ರಿಜಿಸ್ಟರ್ ಜನರಲ್ ಅವರಿಗೆ ಆದೇಶಿಸಿದೆ.
ಬೆಳಗಾವಿ ಬಳಿಯ ಹೊಸವಂಟಮುರಿ ಗ್ರಾಮದ ಮಹಿಳೆಯನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿ ಥಳಿಸಿರುವ ಘಟನೆ ಸಂಬಂಧ ನ್ಯಾಯಾಲಯ ಪತ್ರಿಕೆಗಳು ಹಾಗೂ ದೃಶ್ಯಮಾಧ್ಯಮಗಳು ಮಾಡಿರುವ ವರದಿಗೆ ಸಂಬಂಧಿಸಿ ಪ್ರಕರಣ ದಾಖಲು ಮಾಡಿಕೊಂಡಿದೆ.
ದೇಶ 76ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದ್ದರೆ ಮತ್ತೊಂದೆಡೆ ಕಡೆ ಇಂತಹ ಘಟನೆ ನಡೆದಿರುವುದು ಎಲ್ಲರೂ ತಲೆತಗ್ಗಿಸುವ ಘಟನೆ. ಇದು ಹೃದಯ ಮಿಡಿಯುವ ಘಟನೆ ಎಂದು ವಿಷಾದ ವ್ಯಕ್ತಪಡಿಸಿದೆ.
ಸಂತ್ರಸ್ತೆಯನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಂತೈಸುತ್ತಿರುವ ಚಿತ್ರ ದಿನಪತ್ರಿಕೆಗಳಲ್ಲಿ ಪ್ರಕಟವಾಗಿರುವುದನ್ನು ಉಲ್ಲೇಖ ಮಾಡಿರುವ ನ್ಯಾಯಪೀಠ, ಈ ಬಗ್ಗೆ ಎಲೆಕ್ಟ್ರಾನಿಕ್ ಮಾಧ್ಯಮಗಳು ಅತ್ಯಂತ ಬೇಜವಾಬ್ದಾರಿಯಿಂದ ನಡೆದುಕೊಂಡಿವೆ. ಸಂತ್ರಸ್ಥೆಯ ವೈಯಕ್ತಿಕ ಘನತೆ ಕಾಪಾಡಬೇಕು. ಇನ್ನು ಮುಂದೆ ರಾಷ್ಟ್ರೀಯ, ರಾಜ್ಯ ಮತ್ತು ಯಾವುದೇ ಸ್ತರದ ಮಾಧ್ಯಮಗಳು ಸಂತ್ರಸ್ತೆಯ ಸಂದರ್ಶನ ಮತ್ತು ವಿಡಿಯೋ ಪ್ರಸಾರ ಮಾಡಬಾರದು. ಈಗಾಗಲೇ ಮಾಡಿದ್ದರೆ ಅದನ್ನು ತೆಗೆದು ಹಾಕುವಂತೆ ಸೂಚಿಸಿದ ನ್ಯಾಯಾಲಯ ಸುದ್ದಿ ಪ್ರಸಾರಕ್ಕೆ ಮಾಧ್ಯಮಗಳ ಮೇಲೆ ನಿಷೇಧ ಹೇರುತ್ತಿಲ್ಲ, ನ್ಯಾಯಾಲಯ ಮಾಧ್ಯಮದ ಸ್ವಾತಂತ್ರ್ಯವನ್ನು ಸದಾ ಮನಿಸುತ್ತದೆ. ಬೆಳಗಾವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಡ್ವಕೇಟ್ ಜನರಲ್ ಕೆ. ಕಿರಣ್ ಶೆಟ್ಟಿ ಅವರಿಗೆ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ನಿರ್ದೇಶಿಸಿತು.