ಬೆಳಗಾವಿ :
ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರಿಂದಿಲ್ಲಿ ನಗರದ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸಾ ವ್ಯವಸ್ಥೆ ಕುರಿತು ಶ್ಲಾಘಿಸಿದರು.
ನಂತರ ಕ್ಯಾನ್ಸರ್ ಆಸ್ಪತ್ರೆಗೆ ಭೇಟಿ ನೀಡಿ, ಅತ್ಯಾಧುನಿಕ ವೈದ್ಯಕೀಯ ಉಪಕರಣ ಮತ್ತು ಚಿಕಿತ್ಸಾ ವಿಧಾನಗಳ ವಿವಿಧ ವಿಭಾಗಗಳಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ನಿರ್ದೇಶಕ ಡಾ.ವಿ. ಎಸ್.ಸಾಧುನವರ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ( ಕರ್ನಲ್) ಎಂ. ದಯಾನಂದ, ಕ್ಯಾನ್ಸರ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಂ.ವಿ. ಜಾಲಿ, ಕಾಹೆರ ಕುಲಸಚಿವ ಡಾ.ಎಂ.ಎಸ್. ಗಣಾಚಾರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಡಾ. ಪ್ರಭಾಕರ ಕೋರೆ ಅವರು, ರಾಜ್ಯ ಸರಕಾರವು ಈಗಾಗಲೇ ವಿವಿಧ ಅಂಗಾಂಗಗಳ ಕಸಿಗಾಗಿ ಆಯುಷ್ಯಮನ್ ಭಾರತ – ಆರೋಗ್ಯ ಕರ್ನಾಟಕ ಯೋಜನೆಯಡಿ ಧನಸಹಾಯ ನೀಡುತ್ತಿದ್ದು, ಲಿಂಗ ಕಸಿಗಾಗಿಯೂ ಯೋಜನೆಯಡಿ ಧನಸಹಾಯ ಒದಗಿಸುವಂತೆ ಡಾ. ಶರಣಪ್ರಕಾಶ ಪಾಟೀಲ ಅವರಿಗೆ ಮನವಿ ಮಾಡಿಕೊಂಡರು.
ಆಯುಷ್ಯಮನ್ ಭಾರತ – ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ಪಡೆಯಲು ಸರಕಾರಿ ಆಸ್ಪತ್ರೆಗಳಿಂದ ರೆಫೆರಲ್ ಲೆಟರ್ ( ಸೂಚನಾ ಪತ್ರ) ತರದೇ ರೋಗಿಗಳು ನೇರವಾಗಿ ಬಂದು ಯೋಜನೆಯಡಿ ಚಿಕಿತ್ಸೆ ಪಡೆದುಕೊಳ್ಳಲು ಅನುಕೂಲ ಕಲ್ಪಿಸಬೇಕೆಂದು ಕೋರಿದರು.