ಸುವರ್ಣಸೌಧ ಬೆಳಗಾವಿ : ಸರ್ಕಾರ ಡ್ರಗ್ಸ್ ಹಾಗೂ ಮಾದಕ ಪದಾರ್ಥಗಳ ಮಾರಾಟವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಆರೋಗ್ಯ, ಆಹಾರ ಇಲಾಖೆಗಳೊಂದಿಗೆ ಚರ್ಚಿಸಿ ಶೀಘ್ರವೇ ಹುಕ್ಕಾ ಬಾರ್ ನಿಯಂತ್ರಣಕ್ಕೆ ಕಾನೂನು ರೂಪಿಸುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ಮಂಗಳವಾರ ವಿಧಾನ ಸಭೆಯಲ್ಲಿ ಶಾಸಕ ಸಿ.ಕೆ.ರಾಮಮೂರ್ತಿ ಅವರ ಚುಕ್ಕೆ ಪ್ರಶ್ನೆಗೆ ಅವರು ಉತ್ತರಿಸಿದರು.
ಹುಕ್ಕಾ ಬಾರ್ ಸ್ಥಾಪನೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಯಾವುದೇ ರೀತಿಯ ವ್ಯಾಪಾರ ಪರವಾನಿಗೆ ನೀಡುವುದಿಲ್ಲ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(FSSAI) ದಿಂದ ಪರವಾನಿ ಪಡೆದು ವ್ಯಾಪಾರಿಗಳು ಹುಕ್ಕಾ ಬಾರ್ಗಳನ್ನು ನಡೆಸುತ್ತಿದ್ದಾರೆ. ನ್ಯಾಯಲಯವು ಸಹ ಹುಕ್ಕಾ ಸೇದುವವರಿಗೆ ಪ್ರತ್ಯೇಕ ಸ್ಥಳ ನಿಗದಿ ಪಡಿಸಬೇಕು ಎಂದು ಹೇಳಿದೆ. ನಿಯಂತ್ರಣದ ಬಗ್ಗೆ ಹೇಳಿಲ್ಲ. ಆದರೂ ಯುವ ಜನಾಂಗದ ಸ್ವಾಥ್ಯದ ದೃಷ್ಠಿಯಿಂದ ಹುಕ್ಕಾ ಬಾರ್ ನಿಯಂತ್ರಣಕ್ಕೆ ಕಾನೂನೂ ರೂಪಿಸಲಾಗುವುದು ಎಂದರು.
ಅಕ್ಟೋಬರ್ 19ರಂದು ಬೆಂಗಳೂರಿನ ಕೋರಮಂಗಲದಲ್ಲಿ ಹುಕ್ಕಾಬಾರ್ನಲ್ಲಿ ಜರುಗಿದ ಅಗ್ನಿ ಅವಘಡದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಅದೃಷ್ಟವಶಾತ್ ಕಟ್ಟದಿಂದ ಜಿಗಿದ ವ್ಯಕ್ತಿಗೆ ಪ್ರಾಣಾಪಾಯವಾಗಿಲ್ಲ. ಮೂರನೇ ಮಹಡಿಯಲ್ಲಿ ಇದ್ದ ಹುಕ್ಕಾ ಬಾರ್ನಲ್ಲಿ 14 ಸಿಲೆಂಡರ್ಗಳನ್ನು ಸಂಗ್ರಹಿಸಲಾಗಿತ್ತು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.
ಶಾಸಕ ಸುರೇಶ್ ಕುಮಾರ್ ಮಾತನಾಡಿ ಹುಕ್ಕಾ ಸೇದುವುದು ಸಿಗರೇಟ್ ಸೇದುವುದಕ್ಕಿಂತಲ್ಲೂ 200 ಪಟ್ಟು ಹೆಚ್ಚು ಹಾನಿ ಎಂಬುದು ಸಾಬೀತಾಗಿದೆ. ಪಂಜಾಬ್, ರಾಜಸ್ಥಾನ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ಹುಕ್ಕಾ ಬಾರ್ಗಳನ್ನು ನಿಷೇಧಿಸಲಾಗಿದೆ. ಆರೋಗ್ಯ ಸಚಿವ ದಿನೇಶ್ಗುಂಡೂರಾವ್ ಅವರು ಸಹ ಹುಕ್ಕಾ ಬಾರ್ ನಿಷೇಧಕ್ಕೆ ಒಲವು ವ್ಯಕ್ತಪಿಸಿದ್ದರು. ಸರ್ಕಾರ ಕೂಡಲೇ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದರು.
ಶಾಸಕ ಸಿ.ಕೆ.ರಾಮಮೂರ್ತಿ ಮಾತನಾಡಿ ಯುವ ಜನಾಂಗದ ಹಾದಿ ತಪ್ಪಿಸುತ್ತಿರುವ ಹುಕ್ಕಾ ಬಾರ್ಗಳನ್ನು ಸರ್ಕಾರ ನಿಷೇಧಿಸಲು ಆಗ್ರಹಿಸಿದರು.