ಬೆಳಗಾವಿ :
ಆದಷ್ಟು ಬೇಗ ಚಿಕ್ಕೋಡಿ ಜಿಲ್ಲೆಯನ್ನು ರಚಿಸುವಂತೆ ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ವಿಧಾನ ಪರಿಷತ್ ನಲ್ಲಿ ಈ ಬೇಡಿಕೆ ಮುಂದಿಟ್ಟ ಅವರು, ಆಡಳಿತಾತ್ಮಕ ದೃಷ್ಟಿಯಿಂದ ಚಿಕ್ಕೋಡಿ ಜಿಲ್ಲೆ ರಚನೆ ಅತ್ಯಂತ ಸೂಕ್ತವಾಗಿದೆ ಎಂದು ಪ್ರತಿಪಾದಿಸಿದರು. ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸುವ ನಿಟ್ಟಿನಲ್ಲಿ ಚಿಕ್ಕೋಡಿ ಜಿಲ್ಲೆ ರಚನೆ ಅತ್ಯಂತ ಅನಿವಾರ್ಯವಾಗಿದೆ.
ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸುವ ಸಲುವಾಗಿ ಅವಿಭಜಿತ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಯಾಗಿ ಘೋಷಣೆ ಮಾಡುವಂತೆ ಪ್ರಕಾಶ ಹುಕ್ಕೇರಿ ಆಗ್ರಹಿಸಿ, 47 ಲಕ್ಷ ಜನಸಂಖ್ಯೆ ಹೊಂದಿರುವ ಬೆಳಗಾವಿ ಜಿಲ್ಲೆಯ ಗಡಿ ಗ್ರಾಮಗಳ ಜನರಿಗೆ ಸರಕಾರಿ ಕಚೇರಿ ಕೆಲಸ, ಪತ್ರ ವ್ಯವಹಾರ ನಡೆಸಲು ಬೆಳಗಾವಿಗೆ ಬರುವುದು ಕಷ್ಟವಾಗುತ್ತಿದೆ. ಒಂದು ದಿನವೇ ಹೋಗುತ್ತದೆ ಎಂದು ಬೆಳಗಾವಿ ಜಿಲ್ಲಾ ಕೇಂದ್ರದಲ್ಲಿರುವ ಅಧಿಕಾರಿಗಳು ಭೇಟಿ ನೀಡುತ್ತಿಲ್ಲ. ಇದರಿಂದಾಗಿ ಈ ಭಾಗ ನಿರೀಕ್ಷಿತ ಅಭಿವೃದ್ಧಿ ಕಾಣುತ್ತಿಲ್ಲ. ಜಿಲ್ಲಾಸ್ಪತ್ರೆ ಹಾಗೂ ಮಾರುಕಟ್ಟೆ ದೂರ ಎನ್ನುವ ಕಾರಣಕ್ಕೆ ಅಥಣಿ, ಕಾಗವಾಡ ಭಾಗದ ಜನರು ಮಹಾರಾಷ್ಟ್ರವನ್ನೇ ಅವಲಂಬಿಸಿದ್ದಾರೆ. ಇದರಿಂದಾಗಿ ಕರ್ನಾಟಕದ ಆದಾಯ ನೆರೆಯ ರಾಜ್ಯದ ಪಾಲಾಗುತ್ತಿದೆ ಎಂದು ವಿವರಿಸಿದರು.
ರಾಜ್ಯದ ಗಡಿಭಾಗದ ಅಭಿವೃದ್ಧಿ ದೃಷ್ಟಿಯಿಂದ ಚಿಕ್ಕೋಡಿ ಜಿಲ್ಲೆ ರಚನೆ ಆಗಬೇಕು ಎಂದು ಅವರು ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ ತಕ್ಷಣವೇ ಚಿಕ್ಕೋಡಿಯನ್ನು ಜಿಲ್ಲಾ ಕೇಂದ್ರವಾಗಿ ಘೋಷಣೆ ಮಾಡುವಂತೆ ಒತ್ತಾಯಿಸಿದರು.