ಬೆಳಗಾವಿ :
ಕಿತ್ತೂರು ಅರಣ್ಯ ಶಾಖೆಯ ಕುಲವಳ್ಳಿ ಗ್ರಾಮ ಸೇರಿ 8ಹಳ್ಳಿಗಳ ಜನರ ಜಮೀನಿನ ಹಕ್ಕುಪತ್ರ ಪಡೆಯುವ ಕಾದಾಟ ಹಲವು ದಶಕಗಳಿಂದ ನಡೆದಿದ್ದು, ಶುಕ್ರವಾರ ರಾಜ್ಯ ಸರಕಾರದೊಂದಿಗೆ ಘರ್ಷಣೆಗೇ ಇಳಿಯುವ ಹಂತಕ್ಕೆ ತಲುಪಿತು.
ಚಳಿಗಾಲ ಅಧಿವೇಶನದಲ್ಲಿ ಶತಾಯಗಥಾಯ ಸರಕಾರದ ಗಮನ ಸೆಳೆಯಲೆಬೇಕು ಎಂದು 9 ಹಳ್ಳಿಗಳ ಜನರು ಚಕ್ಕಡಿ, ಟ್ರ್ಯಾಕ್ಟರ್, ಲಾರಿ, ದನಗಳು ಹಾಗೂ ಶಾಲಾ ಮಕ್ಕಳೊಂದಿಗೆ ಆಗಮಿಸಿ ಕಿತ್ತೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಸರಕಾರದ ಗಮನ ಸೆಳೆದರು.
ಈ ನಡುವೆ ಪೊಲೀಸರು ಮತ್ತು ರೈತ ಕುಟುಂಬಗಳ ನಡುವೆ ನೂಕಾಟ- ತಳ್ಳಾಟದ ಘರ್ಷಣೆಯೂ ನಡೆದು ಈಗ ರಾಜ್ಯಾದ್ಯಂತ ಗಮನ ಸೆಳೆದಿದೆ. ಶುಕ್ರವಾರ ನಡೆದ ರೈತರು ಮತ್ತು ಪೊಲೀಸರ ನಡುವಿನ ಘರ್ಷಣೆಯಲ್ಲಿ ಕೆಲ ಶಾಲಾ ಮಕ್ಕಳು ಹಾಗೂ ಮಹಿಳೆಯರು ಗಾಯಗೊಂಡು ಕಿತ್ತೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ.
*ಕೆರಳಿದ ಎಸ್ಪಿ ಸೆಡ್ಡು ಹೊಡೆದರು:*
ರೈತರು ರಾಷ್ಟ್ರೀಯ ಹೆದ್ದಾರಿ ತಡೆಹಿಡಿದಿರುವುದನ್ನು ಅರಿತ ಜಿಲ್ಲಾ ಎಸ್ಪಿ ಡಾ. ಭೀಮಾಶಂಕರ ಗುಳೇದ ಅವರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾ ನಿರತ ರೈತರನ್ನು ರಾಷ್ಟ್ರೀಯ ಹೆದ್ದಾರಿಯಿಂದ ಚದುರಿಸುವಲ್ಲಿ ಸಫಲರಾದರು. ಒಂದು ಹಂತದಲ್ಲಿ ಅವರು ತಾಳ್ಮೆ ಮೀರಿ ತಮಗರಿವಿಲ್ಲದಂತೆ ರೈತರಿಗೆ ಸೆಡ್ಡು ಹೊಡೆದ ದೃಶ್ಯ ನೋಡುಗರಿಗೆ ಕಸಿವಿಸಿ ಉಂಟು ಮಾಡಿದೆ.
ಕಳೆದ 7ದಶಕಗಳಿಂದ ತಾವು ಕುಲವಳ್ಳಿ ಸುತ್ತಲಿನ 8 ಹಳ್ಳಿಗಳಲ್ಲಿ ಉಳುಮೆ ಮಾಡಿಕೊಂಡು ವಾಸವಿದ್ದೇವೆ, ನಮ್ಮನ್ನು ಒಕ್ಕಲೆಬ್ಬಿಸಿ ಓಡಿಸುವ ಹುನ್ನಾರ ನಡೆದಿದೆ, ಸರಕಾರ ನಮಗೆ ಹಕ್ಕುಪತ್ರ ನೀಡಬೇಕು ಎಂಬುವುದು 9ಹಳ್ಳಿಗಳ ರೈತ ಕುಟುಂಬಗಳ ಪಿತ್ತ ನೆತ್ತುಗೇರಿದ ಹೋರಾಟದ ತಿರುಳು.
*ಅದು ಈಗ ಖಾಸಗಿ ಆಸ್ತಿಯಂತೆ…!?:* ಆದರೆ ರೈತರ ಬೇಡಿಕೆ ಮತ್ತು ವಾಸ್ತವ ಬೇರೆಯೇ ಇದೆ. ರೈತರು ತಿಳಿದಂತೆ ಜಮೀನು ಸರಕಾರ ಇಲ್ಲವೇ ಅರಣ್ಯ ಇಲಾಖೆಯದ್ದಲ್ಲ.
ನಂಬಲರ್ಹ ಮೂಲಗಳ ಪ್ರಕಾರ ಕುಲವಳ್ಳಿ, ಮಾಚಿ, ಸಾಗರ, ಗಂಗ್ಯಾನಟ್ಟಿ, ಕತ್ರಿದಡ್ಡಿ, ಗದಗಿನಮಠ, ದಿಂಡಿಲಕೊಪ್ಪ, ನಿಂಗಾನಟ್ಟಿ ಗ್ರಾಮಗಳ ಸುಮಾರು ಹತ್ತು ಸಾವಿರ ಎಕರೆ ಜಮೀನು ಖಾಸಗಿ ಒಡೆತನದ್ದು ಎನ್ನಲಾಗಿದೆ.
ರಾಜೇಂದ್ರ ಇನಾಮದಾರ ಮತ್ತು ಇನ್ನಿಬ್ಬರು ಕುಟುಂಬಗಳ ಒಡೆತನಕ್ಕೆ ಜಮೀನು ಸೇರುತ್ತದೆ, ಸರ್ವೋಚ್ಚ ನ್ಯಾಯಾಲಯ ಆದೇಶದಂತೆ ಕಾನೂನು ಬದ್ಧವಾಗಿ ಖಾಸಗಿ ಜಮೀನು ಎಂದು ಬಲ್ಲ ಮೂಲಗಳಿಂದ ತಿಳಿಯಲಾಗಿದೆ. ಇದು ನೇರವಾಗಿ ಅರಣ್ಯ ಇಲಾಖೆ ಇಲ್ಲವೇ ಕಂದಾಯ ಇಲಾಖೆ ಸುಪರ್ಧಿಗೆ ಇಲ್ಲ ಎನ್ನುವುದು ತಿಳಿದುಬಂದಿದೆ. ಈ ಪ್ರದೇಶದಲ್ಲಿ ವಾಸಿಸುತ್ತ ಬಂದಿರುವ ಜನರ ಪ್ರದೇಶಗಳು ಗ್ರಾಮಗಳಾಗಿದ್ದು, ಇವರೆಲ್ಲ ಹಕ್ಕುಪತ್ರ ಬೇಡುತ್ತಿದ್ದಾರೆ.
ಕಂದಾಯ ಇಲಾಖೆ ಇಲ್ಲವೇ ಅರಣ್ಯಾಧಿಕಾರಿಗಳು ಈ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ.
ರೈತರು ತಾವು ಬದುಕಿ ಬಾಳಿದ ಜಮೀನಿನ ಹಕ್ಕು ನಮಗೆ ಸಿಗಬೇಕು, ನಮ್ಮನ್ನು ಒಕ್ಕಲೆಬ್ಬಿಸುವ ಹುನ್ನಾರ ನಿಲ್ಲಬೇಕು ಎಂದು ಸರಕಾರದ ಗಮನ ಸೆಳೆದಿದ್ದಾರೆ. ಈ ನಡುವೆ ಸರಕಾರವಂತೂ ಖಚಿತ ಪರಿಹಾರ ಸೂಚಿಸಲೆಬೇಕು ಎಂಬುವುದು ದಿಟ.
ರೈತರು ಮತ್ತು ಪೊಲೀಸ್ ಸಂಘರ್ಷ, ಸೆಡ್ಡು ಹೊಡೆದ ಎಸ್ಪಿ ನಡೆ ಸೋಮವಾರ ಸದನದಲ್ಲಿ ಪ್ರತಿಪಕ್ಷಗಳ ಗಲಾಟೆಗೆ ಕಾರಣವಾಗಲಿದೆ.
ರಾಜ್ಯ ಸರಕಾರ, ಜಿಲ್ಲಾಧಿಕಾರಿ ಈ ಸಮಸ್ಯೆ ಹೇಗೆ ಬಗೆಹರಿಸುವರು ಕಾಯ್ದು ನೋಡಬೇಕಿದೆ.
*ಎಸ್ಪಿ ತಾಳ್ಮೆ ವಹಿಸಲಿ:*
ರೈತರ ಆಕ್ರೋಶಿತ ನಡೆಯನ್ನು ಜಿಲ್ಲಾ ಎಸ್ಪಿ ಡಾ. ಭೀಮಾಶಂಕರ ಗುಳೇದ ಬಹು ತಾಳ್ಮೆಯಿಂದ ನಿರ್ವಹಿಸಬೇಕಿದೆ. ರೈತರ ಮೇಲೆ ಬಲ ಪ್ರಯೋಗ ಇಲ್ಲವೇ ಸೆಡ್ಡು ಹೊಡೆದು ಹೊಸ ಪ್ರಸಂಗ ಸೃಷ್ಟಿಸಿ ರಾಜ್ಯ ಸರಕಾರ & ಜಿಲ್ಲಾಡಳಿತವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಮೇಲಾಗಿ ಶುಕ್ರವಾರ ನಡೆದ ಒಟ್ಟಾರೆ ಪ್ರಹಸನ ಘಟನೆಗೆ ಸಂಬಂಧಿಸಿ ರೈತರ ಮೇಲೆ ಸರಕಾರಿ ಕೆಲಸಕ್ಕೆ ಅಡ್ಡಿ, ಪೊಲೀಸ್ ಸಿಬ್ಬಂಧಿ ಮೇಲೆ ರೈತರಿಂದ ಹಲ್ಲೆ, ಪ್ರತಿಭಟನೆಗೆ ಮಕ್ಕಳ ಬಳಕೆ, ಸಾರ್ವಜನಿಕ ಜನಜೀವನಕ್ಕೆ ಅನಾನುಕೂಲ ಸೇರಿ ಹಲವು ಬಗೆಯ ಕೇಸ್ ರೈತ ಕುಟುಂಬಗಳ ಮೇಲೆ ಹಾಕಲು ಪೊಲೀಸರು ಅಣಿಯಾಗಿದ್ದು, ಅವರೇ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ಸಹ ನೀಡಿದ್ದಾರೆ.
*ಜಿಲ್ಲಾಡಳಿತ ಪ್ರಬುದ್ಧವಾಗಲಿ:*
ಜಿಲ್ಲಾಡಳಿತ ಹೋರಾಟಗಳ ಮಾರ್ಮಿಕ ಉದ್ದೇಶ ಮತ್ತು ವಾಸ್ತವ ಸಮಸ್ಯೆಗಳನ್ನು ಅರಿತು ಪರಿಹಾರ ಸೂಚಿಸಬೇಕೆ ಹೊರತು, ಅಧಿಕಾರ ಇದೆ ಎಂದು ಕಾನೂನುಗಳ ಬಳಕೆಯಿಂದ ಹೋರಾಟ ಹತ್ತಿಕ್ಕಿದರೆ ಕಾನೂನು ಸುವ್ಯವಸ್ಥೆಯ ಮತ್ತೊಂದು ಸಮಸ್ಯೆ ಮೈಮೇಲೆ ಹಾಕಿಕೊಳ್ಳಲು ಕಾರಣವಾಗುತ್ತದೆ ಎನ್ನುವುದು ಗಮನಾರ್ಹ, ತಾಳ್ಮೆ ಇಲ್ಲದ ತನ್ನ ಅಧಿಕಾರಿಗಳ ನಡೆಯಿಂದ ರಾಜ್ಯ ಸರಕಾರ ಪ್ರತಿಪಕ್ಷಗಳ ಹಾಗೂ ಸಾಮಾಜಿಕ ಸಂಘಟನೆಗಳ ಆಕ್ರೋಶ ಎದುರಿಸಬೇಕಾಗಲಿದೆ.