ಬೆಳಗಾವಿ :” ಈ ಬಾರಿ ಏನು ವ್ಯವಸ್ಥೆ ಮಾಡಿಲ್ಲ, ಕಳೆದ ಸಲ ಮಂಚವಾದರೂ ಕೊಟ್ಟಿದ್ರು, ಈ ಸಲ ನೆಲ ಕೊಟ್ಟು ಮಲಗಿಸಿದ್ರು. ಬಟ್ಟೆ ಇಡಲು ಸಹಾ ಸ್ಥಳ ಇಲ್ಲ. ನಮ್ಮದೆಲ್ಲವೂ ಬಿಳಿ ಬಟ್ಟೆ. ಏನು ಮಾಡಲಿ ?”
ಇದು ವಿಧಾನ ಮಂಡಲದ ಚಳಿಗಾಲದ ವಿಶೇಷ ಅಧಿವೇಶನಕ್ಕೆ ಬೆಳಗಾವಿಗೆ ಆಗಮಿಸಿರುವ ಮಾರ್ಷಲ್ ಗಳ ಕಥೆ-ವ್ಯಥೆ.
ಬೆಳಗಾವಿಯ ಯುವಜನಸೇವೆ ಮತ್ತು ಕ್ರೀಡಾ ಇಲಾಖೆಯ ವಸತಿ ವಸತಿ ನಿಲಯದಲ್ಲಿ ಈ ಬಾರಿ ಮಾರ್ಷಲ್ ಗಳಿಗೆ ವ್ಯವಸ್ಥೆ ಮಾಡಲಾಗಿದೆ. ಇಷ್ಟು ವರ್ಷ ಕೆಎಲ್ ಇ ಸಂಸ್ಥೆಯ ಕಟ್ಟಡದಲ್ಲಿ ವ್ಯವಸ್ಥೆ ಮಾಡಿಕೊಡಲಾಗುತ್ತಿತ್ತು. ಆದರೆ, ಆಡಳಿತ ಈ ಬಾರಿ ಕೆಎಲ್ ಇ ಸಂಸ್ಥೆಯವರನ್ನು ಕೇಳಲೇ ಇಲ್ಲ. ಕೇಳಿದ್ರೆ ಅವರು ಖಂಡಿತವಾಗಿಯೂ ಕೊಡುತ್ತಿದ್ದರು. ಆಡಳಿತದ ನಿರ್ಲಕ್ಷ್ಯದಿಂದ ಮಾರ್ಶಲ್ ಗಳು ಈ ಬಾರಿ ಕೋವಿಡ್ ಕಾಲದಲ್ಲಿ ನೀಡಿದಂತಹ ಬೆಡ್ ಮೇಲೆ ಅಧಿವೇಶನವನ್ನು ಕಳೆಯುವಂತಾಗಿದೆ ಎಂದು ಮಾರ್ಷಲ್ ಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪೊಲೀಸರಿಗೆ ಜರ್ಮನ್ ಟೆಂಟ್ :
ಅಧಿವೇಶನದ ಬಂದೋಬಸ್ತಿಗೆ ವಿವಿಧ ಜಿಲ್ಲೆಗಳಿಂದ ದೊಡ್ಡ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿ ಆಗಮಿಸಿದ್ದಾರೆ. ಅವರಿಗೆ ಉಳಿದುಕೊಳ್ಳಲು ಜರ್ಮನ್ ಟೆಂಟ್ ಗಳಿಂದ ಟೌನ್ ಶಿಪ್ ನಿರ್ಮಿಸಲಾಗಿದೆ.
ವಿಧಾನ ಮಂಡಲದ ಅಧಿವೇಶನದ ಈ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಚಳಿ ಇರುವುದರಿಂದ ಅವರು ಸಹಜವಾಗಿ ಚಳಿಯ ಸಮಸ್ಯೆಯಿಂದ ಬಳಲುವ ಆತಂಕವಿದೆ.
ಸುವರ್ಣ ವಿಧಾನಸೌಧದ ಬಳಿಯ ಅಲಾರವಾಡದ ಹೊರವಲಯದಲ್ಲಿ ಎರಡು ಕೋಟಿಗೂ ಅಧಿಕ ವೆಚ್ಚದಲ್ಲಿ ಟೌನ್ಶಿಪ್ ನಿರ್ಮಿಸಿದ್ದು ನಾಲ್ಕು ದೊಡ್ಡ ಜರ್ಮನ್ ಟೆಂಟ್ ಹಾಕಲಾಗಿದೆ. ಒಂದು ಸಣ್ಣ ಟೆಂಟ್ ನಿರ್ಮಿಸಲಾಗಿದೆ. ಅವರಿಗೆ ಕಾಟ್ , ತಲೆದಿಂಬು, ಬೆಡ್ ಶೀಟ್ ವ್ಯವಸ್ಥೆ ಮಾಡಲಾಗಿದೆ.