ಬೆಂಗಳೂರು :
ಆದಾಯ ಮೀರಿ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಿಗ್ ಶಾಕ್ ನೀಡಿದ್ದಾರೆ.
ಈ ಹಿಂದೆ ಸರ್ಕಾರ CBI ತನಿಖೆಗೆ ನೀಡಿದ್ದ ಅನುಮತಿಯನ್ನು ಕ್ಯಾಬಿನೆಟ್ ಸಭೆಯಲ್ಲಿ ಹಿಂಪಡೆಯಲು ನಿರ್ಧರಿಸಿತ್ತು. ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಯತ್ನಾಳ್ ಹೈಕೋರ್ಟ್ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಹೈಕೋರ್ಟ್ ನೀಡಿರುವ ತೀರ್ಪನ್ನು ನಿಷ್ಪಲಗೊಳಿಸಲು ಕ್ಯಾಬಿನೆಟ್ ಸಂಚು ರೂಪಿಸಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.
ನಮ್ಮ ಜಾಹೀರಾತಿನಲ್ಲಿ ಮತ ಯಾಚನೆ ಮಾಡಿಲ್ಲ, ಹೀಗಾಗಿ ನೀತಿ ಸಂಹಿತೆ ಉಲ್ಲಂಘನೆ ಅಲ್ಲ: ಡಿಸಿಎಂ :
ನಮ್ಮ ಸರ್ಕಾರದ ಜಾಹೀರಾತಿನಲ್ಲಿ ನಮ್ಮ ಸಾಧನೆಗಳನ್ನು ಹೇಳಿಕೊಂಡಿದ್ದೇವೆಯೇ ಹೊರತು ಮತಯಾಚನೆ ಮಾಡಿಲ್ಲ. ಹೀಗಾಗಿ ಇದು ನೀತಿ ಸಂಹಿತೆ ಉಲ್ಲಂಘನೆ ಆಗುವುದಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಉತ್ತರಿಸಿದರು.
ತೆಲಂಗಾಣದ ಪತ್ರಿಕೆಗಳಲ್ಲಿ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಜಾಹಿರಾತಿನ ವಿಚಾರವಾಗಿ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಶಿವಕುಮಾರ್ ಅವರು ಈ ರೀತಿ ಉತ್ತರಿಸಿದರು.
“ಜಾಹೀರಾತಿನಲ್ಲಿ ಸರ್ಕಾರದ ಕೆಲಸದ ಬಗ್ಗೆ ಮಾಹಿತಿ ಇದೆ. ಕಾಂಗ್ರೆಸ್ ಪಕ್ಷಕ್ಕೆ ಅಥವಾ ಇಂತಹ ಅಭ್ಯರ್ಥಿಗಳಿಗೆ ಮತ ಹಾಕಿ ಎಂದು ಜಾಹಿರಾತಿನಲ್ಲಿ ತಿಳಿಸಿಲ್ಲ. ಇದು ಉಲ್ಲಂಘನೆ ಹೇಗೆ ಆಗುತ್ತದೆ? ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿಲ್ಲ ಎಂದು ಅವರು ಅಲ್ಲಿ ಪ್ರಚಾರ ಮಾಡುತ್ತಿದ್ದಾರೆ.
ನಾವು ಪತ್ರಿಕೆ ಹಾಗೂ ಮ್ಯಾಗಜಿನ್ ಗಳಲ್ಲಿ ನೀಡುವ ಜಾಹೀರಾತು ಕೆಲವೊಮ್ಮೆ ತೆಲಂಗಾಣ, ತಮಿಳುನಾಡು ಸೇರಿದಂತೆ ಬೇರೆ ರಾಜ್ಯಗಳಿಗೂ ಹೋಗುತ್ತದೆ. ನಾವು ಮತ ಯಾಚನೆ ಮಾಡಿದ್ದರೆ ಆಗ ನಿಯಮ ಉಲ್ಲಂಘನೆ ಆಗುತ್ತಿತ್ತು. ಚುನಾವಣಾ ಆಯೋಗದ ನೊಟೀಸ್ ಗೆ ಉತ್ತರ ನೀಡುತ್ತೇವೆ” ಎಂದು ತಿಳಿಸಿದರು.
ನಿಗಮ ಮಂಡಳಿ ನೇಮಕ ಸಭೆ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ಈಗಾಗಲೇ ಎರಡು ಮೂರು ಸುತ್ತಿನ ಸಭೆಗಳು ನಡೆದಿವೆ. ಇಂದು ಕೂಡ ಸಭೆ ಮಾಡಿ ಪಟ್ಟಿಯನ್ನು ದೆಹಲಿಗೆ ರವಾನಿಸುತ್ತೇವೆ” ಎಂದು ತಿಳಿಸಿದರು.
ನ್ಯಾಯಾಲಯದ ಮೊರೆ ಹೋಗಲು ಎಲ್ಲರಿಗೂ ಹಕ್ಕಿದೆ : ಸಿದ್ದರಾಮಯ್ಯ
ಸರ್ಕಾರದ ತೀರ್ಮಾನವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಲು ಎಲ್ಲರಿಗೂ ಹಕ್ಕಿದೆ. ಆದರೆ ಅಂತಿಮತೀರ್ಮಾನ ನ್ಯಾಯಾಲಯದ್ದೇ ಆಗಿರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಬೆಂಗಳೂರಿನಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ಡಿ ಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಅನುಮತಿ ವಾಪಸ್ ಪಡೆದಿರುವುದಕ್ಕೆ ಶಾಸಕ ಬಸವರಾಜ ಯತ್ನಾಳ್ ಅವರು ಉಚ್ಛನ್ಯಾಯಾಲಯದಲ್ಲಿ ದಾವೆ ಹೂಡಿರುವ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡುತ್ತಾ ರಾಜ್ಯ ಸರ್ಕಾರ ಡಿಕೆಶಿವಕುಮಾರ್ ಅವರ ವಿರುದ್ಧ ತನಿಖೆಗೆ ನೀಡಿರುವ ಅನುಮತಿ ಕಾನೂನು ಬಾಹಿರವಾಗಿದ್ದು, ಆದೇಶವನ್ನು ವಾಪಸ್ಸು ಪಡೆದಿದೆ ಎಂದರು.
*ನಿಗಮಮಂಡಳಿ ಅಧ್ಯಕ್ಷರ ಆಯ್ಕೆ ಅಂತಿಮಗೊಂಡಿಲ್ಲ:*
ನಿಗಮಮಂಡಳಿಗಳ ಅಧ್ಯಕ್ಷ ಸ್ಥಾನದ ನೇಮಕಾತಿ ಬಗ್ಗೆ ಗೃಹ ಸಚಿವರು ಅಸಮಧಾನಗೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಅಧ್ಯಕ್ಷರ ನೇಮಕಾತಿಯಲ್ಲಿ ಯಾರ ಅಭಿಪ್ರಾಯವನ್ನು ಪಡೆಯಲಾಗಿಲ್ಲ. ಆಯ್ಕೆ ಪ್ರಕ್ರಿಯೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಆಯ್ಕೆ ಪಟ್ಟಿ ಇನ್ನೂ ಅಂತಿಮವಾಗಿಲ್ಲದಿರುವುದರಿಂದ ಈ ಬಗ್ಗೆ ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಎಂದರು.
*ಗುಣಮಟ್ಟದ ಹಾಲು ಪೂರೈಕೆಯಾಗುತ್ತಿದೆ:*
ಶಾಲೆಗಳಿಗೆ ಗುಣಮಟ್ಟದ ಹಾಲಿನ ಪೂರೈಕೆಯಾಗುತ್ತಿಲ್ಲ ಎಂದು ಆರೋಪದ ಹಿನ್ನಲೆಯಲ್ಲಿ ಉತ್ತರಿಸುತ್ತಾ, ಸರ್ಕಾರ ಕೆಎಂಎಫ್ ನ ನಂದಿನಿ ಗುಣಮಟ್ಟದ ಹಾಲನ್ನು ಪೂರೈಸುತ್ತಿದೆ ಎಂದರು.
ತೆಲಂಗಾಣದಲ್ಲಿ ಕರ್ನಾಟಕದ ಸಾಧನೆ ಬಗ್ಗೆ ಮಾಡಿದ ಪ್ರಚಾರದ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಆಕ್ಷೇಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆಗಳ ಪ್ರಚಾರಕ್ಕೆ ಕೇಂದ್ರ ಚುನಾವಣಾ ಆಯೋಗ ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರಚಾರವನ್ನು ಕೈಬಿಡಲಾಗಿದೆ ಎಂದರು.