ಗೋಕಾಕ:
ರಾಜ್ಯದೆಲ್ಲೆಡೆ, ಅದರಲ್ಲೂ ವಿಶೇಷವಾಗಿ ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ವಿರೋಧಿ ಅಲೆ ಬೀಸುತ್ತಿದ್ದು, ಇಡೀ ಜಿಲ್ಲೆಯಲ್ಲಿ ಈ ಬಾರಿ ಕಾಂಗ್ರೆಸ್ ಜಯಭೇರಿ ಭಾರಿಸಲಿದೆ ಎಂದು ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.
ಕೌಜಲಗಿ ಗ್ರಾಮದಲ್ಲಿ ಶನಿವಾರ ಗೋಕಾಕ ಹಾಗೂ ಅರಭಾವಿ ಮತಕ್ಷೇತ್ರ ವ್ಯಾಪ್ತಿಯ ಭಾರತ ಜೋಡೋ ಪಾದಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈಗಾಗಲೇ ರಾಹುಲ್ ಗಾಂಧಿ ಅವರ ನೇತ್ರತ್ವದಲ್ಲಿ ಆರಂಭವಾಗಿರುವ ಭಾರತ ಜೋಡೋ ಪಾದಯಾತ್ರೆ ಭರ್ಜರಿ ಯಶಸ್ಸಿನೊಂದಿಗೆ ಮುನ್ನಡೆಯುತ್ತಿದೆ. ರಾಜ್ಯದಲ್ಲಿ ಒಟ್ಟೂ 21 ದಿನ ನಡೆಯಲಿರುವ ಯಾತ್ರೆಯಲ್ಲಿ ನಾವೆಲ್ಲರೂ ಪಾಲ್ಗೊಳ್ಳೋಣ ಎಂದು ಅವರು ಕರೆ ನೀಡಿದರು.
ಭಾರತ ಜೋಡೋ ಪಾದಯಾತ್ರೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಬಿಜೆಪಿ ಕಂಗಾಲಾಗಿ ಹೋಗಿದೆ. ಹಾಗಾಗಿ ಅನಗತ್ಯವಾಗಿ ಟೀಕೆ ಟಿಪ್ಪಣಿ ಮಾಡುತ್ತಿದೆ. ದೇಶದ ಜನ ಬುದ್ದಿವಂತರಿದ್ದು ಬರುವ ದಿನಗಳಲ್ಲಿ ವಿಪಕ್ಷಗಳಿಗೆ ಸರಿಯಾದ ಪಾಠವನ್ನು ಕಲಿಸಲಿದ್ದಾರೆ. ಈಗಾಗಲೇ ಡಬಲ್ ಇಂಜಿನ್ ಬಿಜೆಪಿ ಸರ್ಕಾರ 40% ಕಮಿಷನ್ ಮೂಲಕ ದೇಶವನ್ನು ಕೊಳ್ಳೆ ಹೊಡೆಯುತ್ತಿದೆ. ಇಂತಹ ಭ್ರಷ್ಟ ಸರ್ಕಾರಗಳಿಗೆ ತಕ್ಕ ಪಾಠ ಕಲಿಸಲು ಕಾಂಗ್ರೆಸ್ ಪಕ್ಷ ಭಾರತ ಜೋಡೋ ಪಾದಯಾತ್ರೆಯನ್ನು ಹಮ್ಮಿಕೊಂಡಿದೆ ಎಂದು ಚನ್ನರಾಜ ತಿಳಿಸಿದರು.
ಈ ಸಮಯದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಈಶ್ವರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ಅರಭಾವಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೂರ್ಯಕಾಂತ ಮಗದುಮ್, ಕೌಜಲಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ ಅರಳಿ, ಅರಭಾವಿ ಬ್ಲಾಕ್ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಗುರುನಾಥ ಉಪ್ಪಾರ, ಕೌಜಲಗಿ ಬ್ಲಾಕ್ ಕಾಂಗ್ರೆಸ್ ಸೇವಾದಳ ಅಧ್ಯಕ್ಷ ಮಲಿಕ್ ಲಾಡಖಾನ್ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.