ಬೆಳಗಾವಿ :
ಅಕ್ರಮ ನೇಮಕಾತಿ ವಿರುದ್ಧ ತನಿಖೆ ನಡೆಸುತ್ತಿರುವ ಸಿಬಿಐ ಇದೀಗ ಬೆಳಗಾವಿಯಲ್ಲಿ ಕಳೆದ ನಾಲ್ಕು ದಿನಗಳಿಂದ ಬೀಡು ಬಿಟ್ಟು ತನಿಖೆ ನಡೆಸುತ್ತಿದೆ.
ಖಚಿತ ಮಾಹಿತಿ ಮೇರೆಗೆ ಆಗಮಿಸಿರುವ ಸಿಬಿಐ ತಂಡ ಕ್ಯಾಂಪು ಪ್ರದೇಶದ ದಂಡು ಮಂಡಳಿ ಕಚೇರಿಗೆ ದಾಳಿ ನಡೆಸಿದೆ. ಅಕ್ರಮ ನೇಮಕಾತಿ ವಿರುದ್ಧ ತನಿಖೆ ನಡೆಸುತ್ತಿದೆ. ಅಕ್ರಮವಾಗಿ ನಡೆದಿರುವ ಈ ನೇಮಕಾತಿ ಸಂಬಂಧ ಅತ್ಯಂತ ಸೂಕ್ಷ್ಮವಾಗಿ ಸಿಬಿಐ ತಂಡ ಪ್ರತಿಯೊಂದು ನೇಮಕಾತಿ ಹಿಂದಿನ ರಹಸ್ಯವನ್ನು ಬಯಲಿಗೆಳೆಯುತ್ತಿದೆ.
ನೇಮಕಗೊಂಡ ಅಭ್ಯರ್ಥಿಗಳು ಬಾಯಿ ಬಿಡದೆ ಇದ್ದರೆ ಅವರಿಗೆ ಚಡಿ ಏಟಿನ ಶಿಕ್ಷೆ ನೀಡಿ ಹರಸಾಹಸ ಮಾಡಿ ಅವರಿಂದ ಎಳೆ ಎಳೆಯಾಗಿ ಇಡೀ ಪ್ರಕರಣವನ್ನು ಹೊರತರುವಲ್ಲಿ ಸಿಬಿಐ ಇದೀಗ ಕಾರ್ಯನಿರತವಾಗಿರುವುದು ಗೊತ್ತಾಗಿದೆ.
2021 ರಲ್ಲಿ ಕ್ಲರ್ಕ್, ಸ್ಟೆನೋಗ್ರಾಫರ್ ಸೇರಿದಂತೆ 19 ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ಆರೋಪದ ಹಿನ್ನೆಲೆಯಲ್ಲಿ ಸಿಬಿಯ ಇದೀಗ ದಾಳಿ ನಡೆಸಿದೆ.
ದೂರು ನೀಡಿದ್ದ ಕ್ಲೇಟನ್ ಕೊಯ್ಲಿಲೊ ಪತ್ರಕರ್ತರ ಜೊತೆಗೆ ಮಾತನಾಡಿ ದಂಡು ಮಂಡಳಿಯಲ್ಲಿ ಕಳೆದ 10 ವರ್ಷಗಳಿಂದ ವಿವಿಧ ಹುದ್ದೆಗಳಲ್ಲಿ ಅಕ್ರಮವಾಗಿ ನೇಮಕ ಮಾಡಿಕೊಳ್ಳುತ್ತಿದ್ದಾರೆ ಎಂದು ಹಲವಾರು ಬಾರಿ ದೂರು ನೀಡಿದ್ದರೂ ಪ್ರಯೋಜನ ಆಗಿರಲಿಲ್ಲ. ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದರು.