ಕರ್ನಾಟಕದಲ್ಲಿ ಬಂದು ಕಬ್ಬಿನ ಟ್ರಾಕ್ಟರ್ ಗೆ ಬೆಂಕಿ ಹಚ್ಚಿದ ಮಹಾರಾಷ್ಟ್ರ ಪುಂಡರು..!
ಬೆಳಗಾವಿ ಗಡಿಬಾಗದ ಕಬ್ಬು ಸಾಗಿಸುವ ಟ್ರ್ಯಾಕ್ಟರ್ ಸುಟ್ಟು ಹಾಕಿದ ಶೇತಕರಿ ಸಂಘಟನೆ ಸೈತಾನರು..?
ಬೆಳಗಾವಿ: ಬೆಳಗಾವಿ ಗಡಿಯಲ್ಲಿರುವ ಮಹಾರಾಷ್ಟ್ರ ಗ್ರಾಮದ ರೈತರು ಟ್ರ್ಯಾಕ್ಟರ್ ನಲ್ಲಿ ಕಬ್ಬು ತುಂಬಿಕೊಂಡು ಬೆಳಗಾವಿ ನಿಂಗ್ಯಾನಟ್ಟಿ ಗ್ರಾಮದ ಗಡಿ ಭಾಗದಲ್ಲಿ ಅಂಟಿಕೊಂಡಿರುವ ಮಹಾರಾಷ್ಟ್ರದ ಓಲಮ್ (ಹೇಮರಸ್) ಸಕ್ಕರೆ ಕಾರ್ಖಾನೆಗೆ ಹೋಗುತ್ತಿದ್ದ ಟ್ರ್ಯಾಕ್ಟರ್ಗೆ ಕರ್ನಾಟಕದಲ್ಲಿ ಬಂದು ಬೆಂಕಿ ಹಚ್ಚಿ ದುಷ್ಕರ್ಮಿಗಳು ದುಷ್ಕೃತ್ಯ ಮೆರೆದಿದ್ದಾರೆ.
ಮಹಾರಾಷ್ಟ್ರದ ಚಂದಗಡ ತಾಲೂಕಿನ ತಾವರೆವಾಡಿ ಗ್ರಾಮದ ಉತ್ತಮ ಅರ್ಜುನ್ ಕಾಗಣಕರ ಎಂಬುವರು ತಮ್ಮ ಹೊಲದಲ್ಲಿ ಬೆಳೆದಿದ್ದ ಕಬ್ಬನ್ನು ಸ್ವಂತ ಟ್ರ್ಯಾಕ್ಟರ್ ನಲ್ಲಿ ತುಂಬಿಕೊಂಡು ಸಕ್ಕರೆ ಕಾರ್ಖಾನೆಗೆ ಸಾಗಿಸುತ್ತಿದ್ದರು. ಈ ವೇಳೆ ಬೆಳಗಾವಿ ತಾಲೂಕಿನ ಬೋಡಕೆನಟ್ಟಿ ಗ್ರಾಮದಲ್ಲಿ ಇಂದು(ಶುಕ್ರವಾರ) ನಸುಕಿನ ಜಾವ 1 ಗಂಟೆ ಸುಮಾರಿಗೆ 10 ರಿಂದ 12 ಜನರ ಗುಂಪೊಂದು ಬಂದು ಟ್ರ್ಯಾಕ್ಟರ್ ತಡೆದು ಚಾಲಕನನ್ನು ಹೆದರಿಸಿ ಕೆಳಗೆ ಇಳಿಸಿದ್ದಾರೆ. ಟ್ರಾಯಲಿಯಲ್ಲಿದ್ದ ಕಬ್ಬನ್ನು ಕೆಳಗೆ ಚೆಲ್ಲಿ, ಇಂಜಿನ್ ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಸುರಿದ ಪೆಟ್ರೋಲ್ ಹಾಗೂ ವಾಹನದಲ್ಲಿ ಡಿಸೇಲ್ ತಂಬಿದ್ದರಿಂದ ಟ್ರ್ಯಾಕ್ಟರ್ ಬೆಂಕಿಗಾಹುತಿಯಾಗಿ ಸಂಪೂರ್ಣ ಸುಟ್ಟು ಹೋಗಿದೆ.
ಇದರ ಹಿಂದೆ ಮಹಾರಾಷ್ಟ್ರದ ದುಂಡಿಗೆ ಗ್ರಾಮದ ರೈತರು ಹಾಗೂ ಶೇತಕರಿ ಸಂಘಟನೆಗಳ ಕೈವಾಡ ಇರುವುದಾಗಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಮಹಾರಾಷ್ಟ್ರದಲ್ಲಿ ಕಬ್ಬಿನ ದರಕ್ಕಾಗಿ ಪ್ರತಿಭಟನೆಗಳು ನಡೆದಿವೆ. ಈ ಮಧ್ಯದಲ್ಲಿ ಕೇಲ ಬಡಪಾಯಿ ರೈತರು ಹಣದ ಅವಶ್ಯಕತೆಗಾಗಿ ಕರ್ನಾಟಕ ರಸ್ತೆಗಳ ಮೂಲಕ ಕಬ್ಬು ಸಾಗಿಸುತ್ತಿದ್ದಾರೆ. ಅದಕ್ಕಾಗಿ ಆ ಸಂಘಟನೆಗಳು ಇವರ ಮೇಲೆ ಈ ರೀತಿ ದೌರ್ಜನ್ಯ ಮಾಡುತ್ತಿರುವಾಗಿ ಹೇಳಲಾಗುತ್ತಿದೆ.
ಈ ಘಟನೆ ಬೆಳಗಾವಿ ಗಡಿ ಗ್ರಾಮಗಳಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದು,ರೈತರು ಕಬ್ಬು ಕಳಿಸಲು ಹಿಂದೇಟು ಹಾಕುತ್ತಿದ್ದಾರೆ.
ಈ ಕುರಿತು ಓಲಮ್ ಸಕ್ಕರೆ ಕಾರ್ಖಾನೆ ಹಾಗೂ ಟ್ರ್ಯಾಕ್ಟರ್ ಮಾಲೀಕ ಕಾಕತಿ ಪೊಲೀಸ ಠಾಣೆಯಲ್ಲಿ ದೂರು ನೀಡಿದ್ದಾರೆ. ಘಟನೆ ಸ್ಥಳಕ್ಕೆ ಕಾಕತಿ ಎಎಸ್ಐ ಬಸವರಾಜ ಲಮಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.