ಬೆಳಗಾವಿ :
ಬೆಳಗಾವಿ ಜಿಲ್ಲೆಯಲ್ಲೂ ಇದೀಗ ಡೀಪ್ ಫೇಕ್ ಪ್ರಕರಣ ಬೆಳಕಿಗೆ ಬಂದಿದೆ.
ಈ ಬಗ್ಗೆ ಎಸ್ಪಿ ಡಾ.ಭೀಮಾಶಂಕರ್ ಗುಳೇದ ಅವರು ಪ್ರತಿಕ್ರಿಯೆ ನೀಡಿ, ಫೋಟೋ ಎಡಿಟ್ ಮಾಡಿ ಯುವತಿಯರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದ ಸಂಬಂಧ ಖಾನಾಪುರ ಪೊಲೀಸ್ ಠಾಣೆಯಲ್ಲಿ ಮಂಥನ್ ಪಾಟೀಲ(22) ಎಂಬ ಯುವಕನ ಮೇಲೆ ಪ್ರಕರಣ ದಾಖಲಾಗಿತ್ತು. ಯುವತಿ ಆತನನ್ನು ಪ್ರೀತಿಸಲು ಒಪ್ಪಿರಲಿಲ್ಲ, ಇದರಿಂದ ನಿನ್ನ ಮಾನ ಹರಾಜು ಹಾಕುತ್ತೇನೆ ಎಂದು ಬ್ಲಾಕ್ ಮೇಲ್ ಮಾಡಿದ್ದ. ನಂತರ ಯುವತಿಯ ಹೆಸರಿನ ನಕಲಿ ಅಕೌಂಟ್ ತೆರೆದು ಡಿಪ್ ಫೇಕ್ ತಂತ್ರಜ್ಞಾನ ಬಳಸಿ ಫೋಟೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಎಂದು ವಿವರಿಸಿದರು.
ಯುವತಿಯ ಮೇಲೆ ಒತ್ತಡ ಹೇರಲು ಆಕೆಯ ಮೂರು ಜನ ಸ್ನೇಹಿತೆಯರ ಫೋಟೋ ಎಡಿಟ್ ಮಾಡಿ ಅಪ್ಲೋಡ್ ಮಾಡಿದ್ದ. ಈ ಬಗ್ಗೆ ಯುವತಿಯರು ಪೊಲೀಸ್ ಠಾಣೆಗೆ ಆಗಮಿಸಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿ ಈಗ ಮಂಥನ್ ಪಾಟೀಲನನ್ನು ಬಂಧಿಸಲಾಗಿದೆ. ಯಾರೇ ಆದರೂ ಇಂತಹ ಫೋಟೋ ಎಡಿಟ್ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದರೆ ದೂರು ನೀಡಬಹುದು ಅವರು ತಿಳಿಸಿದರು.
ಘಟನೆ ಹಿನ್ನಲೆ :
ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಆರೋಪಿ ಮಂಥನ್ ಪಾಟೀಲ( 22) ಮತ್ತು ಯುವತಿ ಒಂದೇ ಊರಿನವರಾಗಿದ್ದರು. ಮಂಥನ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆತ ಪ್ರೀತಿಸುವಂತೆ ಯುವತಿಗೆ ಒತ್ತಾಯಿಸಿದ್ದ. ಆದರೆ ಯುವತಿ ಅವನ ಪ್ರೀತಿಗೆ ಬಲಿಯಾಗಿರಲಿಲ್ಲ. ಇದರಿಂದ ಸಿಟ್ಟುಗೊಂಡ ಆತ ಸಾಮಾಜಿಕ ಜಾಲತಾಣದಿಂದ ಯುವತಿಯ ಫೋಟೋ ತೆಗೆದು ಮಾಡಿ ವೈರಲ್ ಮಾಡುತ್ತೇನೆ ಎಂದು ಬ್ಲಾಕ್ ಮೇಲ್ ಮಾಡಿದ್ದ. ಆದರೂ ಯುವತಿ ಪ್ರೀತಿಗೆ ಒಪ್ಪಿರಲಿಲ್ಲ. ಯುವತಿಯ ಮೇಲೆ ಮತ್ತಷ್ಟು ಒತ್ತಡ ಹೇರುವ ತಂತ್ರವಾಗಿ ಮಂಥನ್ ಆಕೆ ಮತ್ತು ಅವಳ ಗೆಳತಿಯರು ಇರುವ ಭಾವಚಿತ್ರ ತೆಗೆದುಕೊಂಡು ಬೇರೆಯವರ ನಗ್ನ ಚಿತ್ರವನ್ನು ಇವರ ಮುಖಕ್ಕೆ ಅಳವಡಿಸಿದ್ದ. ನಂತರ dram-quen-arati8 ಎಂದು ನಕಲಿ ಖಾತೆ ತೆರೆದು ಎಡಿಟ್ ಮಾಡಿದ್ದ. ಇವರ ಭಾವಚಿತ್ರವನ್ನು ಅಪ್ಲೋಡ್ ಮಾಡಿದ್ದರಿಂದ ಯುವತಿಯರು ಖಾನಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಅವರ ಪೋಷಕರು ಸಹ ಧರಣಿ ನಡೆಸಿದ್ದರು.
ಡೀಪ್ ಫೇಕ್ ವ್ಯಕ್ತಿತ್ವಕ್ಕೆ ಧಕ್ಕೆ ತಂದ್ರೆ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಡೀಪ್ಫೇಕ್ ತಂತ್ರಜ್ಞಾನಕ್ಕೆ ಮಹಿಳೆಯರೇ ಬಲಿಪಶುಗಳು ಅವರೇ ಗುರಿ. ಭಾರತದ ಮಟ್ಟಿಗೆ ಈ ತಂತ್ರಜ್ಞಾನವು ಹೊಸತಾಗಿ ತೋರುತ್ತಿರಬಹುದು. ಆದರೆ, ಅಮೆರಿಕ, ಯೂರೋಪ್ನಲ್ಲಿ ಇದೊಂದು ದೊಡ್ಡ ಸಮಸ್ಯೆಯಾಗಿ ಈಗಾಗಲೇ ಪರಿಣಮಿಸಿದೆ. ಇದಕ್ಕಾಗಿ ಕಾನೂನುಗಳನ್ನು ರಚಿಸಲಾಗುತ್ತಿದೆ. ಮನೋರಂಜನಾ ಮಾಧ್ಯಮದಲ್ಲಿರುವ ಮಹಿಳೆಯರು, ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳು… ಒಟ್ಟಾರೆ, ಸಾಮಾಜಿಕ ಜೀವನದಲ್ಲಿ ಗುರುತಿಸಿಕೊಂಡಿರುವ ಮಹಿಳೆಯರೇ ಈ ತಂತ್ರಜ್ಞಾನದಿಂದ ಹೆಚ್ಚಿನ ಸಮಸ್ಯೆ ಎದುರಿಸುತ್ತಿರುವುದು ಆತಂಕದ ವಿಷಯ.