ಬೆಳಗಾವಿ :
ಶರಣ ಸಾಹಿತ್ಯದ ಅನುಭಾವ ದರ್ಶನ ಪ್ರಸ್ತುತತೆಗೆ ಬಹುಮೌಲಿಕವೆನಿಸಿದೆ. ಆತ್ಮ ಪರಮಾತ್ಮರ ಅವಿನಾಭಾವ ಸಂಬಂಧವನ್ನು ಅತ್ಯಂತ ತಾರ್ಕಿಕವಾಗಿ ಉಣಬಡಿಸಿದವರು ಶರಣರು. ಲೋಕವನ್ನೇ ಪ್ರಸಾದಮಯವನ್ನಾಗಿ ನೋಡಿ ಜೀವನದ ಮೌಲ್ಯವನ್ನು ಹೆಚ್ಚಿಸಿದ ಹೆಗ್ಗಳಿಕೆ ಶರಣರದೆಂದು ಶಿಕ್ಷಕಿ ಕಮಲಾ ಗಣಾಚಾರಿ ಹೇಳಿದರು.
ಅವರು ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಆಯೋಜಿಸಿದ್ದ ದೀಪಾವಳಿ ನಿಮಿತ್ತ ಅನುಭಾವ ಚಿಂತನೆಯ ಗೋಷ್ಠಿಯಲ್ಲಿ ‘ಅಂಗಬೋಗ ಅನರ್ಪಿತ, ಲಿಂಗಬೋಗ ಪ್ರಸಾದ’ ವಿಷಯ ಕುರಿತು ಮಾತನಾಡಿದರು. ಶರಣರು ಗುರು-ಲಿಂಗ-ಜಂಗಮಕ್ಕೆ ತನು-ಮನ-ಧನಗಳನ್ನು ಅರ್ಪಿಸಬೇಕೆಂಬುವುದರ ಮೂಲಕ ಜೀವನ ಸಿದ್ಧಾಂತಗಳಿಗೆ ವ್ಯಾಖ್ಯಾನವನ್ನು ಹಾಕಿಕೊಟ್ಟರು. ನಾವು ಅನುಭವಿಸುವ ಪ್ರತಿಯೊಂದು ವಸ್ತು ಆಹಾರ ಮೊದಲ್ಗೊಂಡು ಪ್ರಕೃತಿಯ ಚರಾಚರದಲ್ಲಿಯೂ ಪ್ರಸಾದ ಸಿದ್ಧಾಂತವು ಹಾಸುಹೊಕ್ಕಾಗಿದೆ ಎಂಬುದೇ ಶರಣರ ಆಲೋಚನಾಕ್ರಮ. ನಾನು ನನ್ನದು ಎಂಬಂತಹ ಅಹಂಗಳನ್ನು ತೊರೆದು ಬಯಸಿ ಬಂದ ಅಂಗಬೋಗವನ್ನು ಲಿಂಗಕ್ಕೆ ಅರ್ಪಿಸುವ ಮೂಲಕ ಜೀವನ್ಮುಕ್ತರಾಗಬೇಕೆಂಬ ಸಂದೇಶವನ್ನು ಶರಣರ ನೀಡಿದರೆಂದು ಹೇಳಿದರು.
ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿದ್ದ ಕಾರಂಜಿಮಠದ ಪೂಜ್ಯ ಗುರುಸಿದ್ಧ ಮಹಾಸ್ವಾಮೀಜಿಯವರು ಆಶೀರ್ವಚನ ನೀಡುತ್ತ, ಇಂದಿನ ಒತ್ತಡದ ಬದುಕಿನಲ್ಲಿ ಶರಣರ ಚಿಂತನೆಗಳು ದಿವ್ಯ ಔಷಧಿಗಳಾಗಿವೆ. ಜೀವ ಮತ್ತು ಪರಮಾತ್ಮರ ದರ್ಶನವನ್ನು ಅತ್ಯಂತ ಸರಳವಾಗಿ ನಿರೂಪಿಸುವ ಅವರ ವಚನಗಳನ್ನು ವಿಶ್ಲೇಷಿಸಿ ಅರಿಯಬೇಕಾಗಿದೆ. ನಾವು ಜೀವನದ ಬಹುಭಾಗವನ್ನು ಭೋಗದ ಆಶೆಗಳಿಗಾಗಿಯೇ ಕಳೆಯುತ್ತೇವೆ ಆದರೆ ಅವು ಯಾವವು ಚಿರಂತನವಾದ ಸುಖವನ್ನು ನೀಡಲಾರವು, ಬದುಕಿನ ಆತ್ಮ ಚಿಂತನೆಗೆ ಶರಣರ ಹಾಕಿಕೊಟ್ಟ ದಿವ್ಯಪಥದಲ್ಲಿ ಮುನ್ನಡೆಯಲು ಮನಸ್ಸನ್ನು ಗಟ್ಟಿಗೊಳಿಸಬೇಕೆಂದು ನುಡಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಮಹಾಸಭೆಯ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಅವರು ಮಾತನಾಡಿ, ಮಹಾಸಭೆ ತನ್ನ ರಚನಾತ್ಮಕ ಚಟುವಟಿಕೆಗಳಿಂದ ಅನೇಕ ಪ್ರತಿಭಾಸಂಪನ್ನರಿಗೆ ವೇದಿಕೆಯನ್ನು ಕಲ್ಪಿಸಿಕೊಡುತ್ತಿದೆ. ಎಲ್ಲಿಯೋ ಒಂದಷ್ಟು ಸಮಯವನ್ನು ವ್ಯರ್ಥವಾಗಿ ಕಳೆಯುವುದರ ಮೂಲಕ ನಮ್ಮ ಜೀವನದ ಬಹುಭಾಗ ಕಳೆದಿದ್ದೇವೆ. ಆಧ್ಯಾತ್ಮಿಕ ಸುಖದಿಂದ ದೂರಸರಿಯುತ್ತಿದ್ದೇವೆ. ಶರಣ ಸತ್ಸಂಗದಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಮನಸ್ಸನ್ನು ಹಗುರಗೊಳಿಸಲು ಸಾಧ್ಯವೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಹಾಸಭೆಯ ಭೂದಾನಿಗಳಾದ ಲಿಂಗೈಕ್ಯ ಈಶ್ವರಪ್ಪಾ ರೇವಣಸಿದ್ಧಪ್ಪ ಚೊಣ್ಣದ ಹಾಗೂ ಲಿಂಗೈಕ್ಯ ಶ್ರೀಮತಿ ಗೌರಮ್ಮಾ ಜಾವೂರ ಅವರ ನಿಧನಕ್ಕೆ ಕಂಬನಿಗೈದು ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.
ಬೈಲಹೊಂಗಲದಲ್ಲಿ ಜರುಗಿದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಮಟ್ಟದ ಎರಡನೇ ಕದಳಿ ಮಹಿಳಾ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಖ್ಯಾತ ಸಾಹಿತಿ ಡಾ.ಗುರುದೇವಿ ಹುಲೆಪ್ಪನವರಮಠ, ವೀರಶೈವವಾಣಿ ಪತ್ರಿಕೆಯ ಸಂಪಾದಕ ಡಾ.ಮಹೇಶ ಗುರನಗೌಡರ ಅವರನ್ನು ಸತ್ಕರಿಸಲಾಯಿತು.
ಆಶಾ ಯಮಕನಮರಡಿ ಪ್ರಾರ್ಥಿಸಿ ಸ್ವಾಗತಿಸಿದರು. ಅಕ್ಕಮಹಾದೇವಿ ಹುಲಗಬಾಳಿ ವಚನ ವಿಶ್ಲೇಷಣೆ ಮಾಡಿದರು. ಶೈಲಾ ಸಂಸುದ್ಧಿ ಅತಿಥಿ ಪರಿಚಯ ಮಾಡಿದರು. ಪೂರ್ಣಿಮಾ ಚಿಕ್ಕೋಡಿ ನಿರೂಪಿಸಿದರು.
ಡಾ.ಎಫ್.ವ್ಹಿ.ಮಾನ್ವಿ, ಚಂದ್ರಶೇಖರ ಬೆಂಬಳಗಿ, ಪ್ರೊ.ಆರ್.ಎಂ.ಕರಡಿಗುದ್ದಿ, ನ್ಯಾಯವಾದಿ ವಿ.ಕೆ.ಪಾಟೀಲ, ಸುನಂದಾ ಎಮ್ಮಿ, ಸ.ರಾ.ಸುಳಕೂಡೆ ಮೊದಲಾದವರು ಉಪಸ್ಥಿತರಿದ್ದರು.