ಕಾಮರೆಡ್ಡಿ :
ಕರ್ನಾಟಕ ರಾಜ್ಯದಲ್ಲಿ ನಾವು ಐದು ಗ್ಯಾರಂಟಿಗಳನ್ನು 100 ದಿನಗಳಲ್ಲಿ ಜಾರಿ ಮಾಡಿದ್ದೇವೆ. ತೆಲಂಗಾಣದಲ್ಲೂ ಒಂದು ಬೋನಸ್ ಸೇರಿ ಆರು ಗ್ಯಾರಂಟಿಗಳು 100 ದಿನಗಳಲ್ಲಿ ಜಾರಿ ಆಗುತ್ತವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಕಾಮರೆಡ್ಡಿ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ “ಹಿಂದುಳಿದ ವರ್ಗಗಳ ನಿರ್ಣಯ” ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳು ಜಾರಿಯೇ ಆಗಿಲ್ಲ ಎಂಬ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರ ಸರಣಿ ಸುಳ್ಳುಗಳಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಕೆ.ಸಿ.ಆರ್ ಅವರೇ ಕರ್ನಾಟಕ ರಾಜ್ಯಕ್ಕೆ ಬನ್ನಿ. 5 ಗ್ಯಾರಂಟಿ ಯೋಜನೆಗಳ ಸಕ್ಸಸ್ ನೋಡಿ ಬಳಿಕ ಚರ್ಚೆಗೆ ಬನ್ನಿ ಎಂದು ಪಂಥಾಹ್ವಾನ ನೀಡಿದರು.
BJP ಮತ್ತು BRC ಎರಡೂ ಒಂದೇ. BRS ತೆಲಂಗಾಣದಲ್ಲಿ BJP ಯ ಬಿ ಟೀಮ್ ಆಗಿ ಕೆಲಸ ಮಾಡುತ್ತಿದೆ. ತೆಲಂಗಾಣದ ಜನತೆ ಕೆ.ಸಿ.ಆರ್ ಮತ್ತು ಮೋದಿಯವರ ಮಕ್ಮಲ್ ಟೋಪಿಗೆ ಈ ಬಾರಿ ತಲೆ ಕೊಡುವುದಿಲ್ಲ ಎಂದರು.
ಪ್ರಧಾನಿ ಮೋದಿಯವರು ಹಿಂದುಳಿದವರ ಉದ್ದಾರಕ್ಕೆ ಅವತಾರ ಎತ್ತಿದವರಂತೆ ಭಾಷಣ ಮಾಡುತ್ತಾರೆ. ಆದರೆ ಅವರು ಪ್ರಧಾನಿ ಆದ 9 ವರ್ಷಗಳಲ್ಲಿ ಹಿಂದುಳಿದವರಿಗೆ, ದಲಿತರ ಉದ್ದಾರಕ್ಕೆ ಯಾವ ಕಾರ್ಯಕ್ರಮಗಳನ್ನೂ ಜಾರಿ ಮಾಡಲಿಲ್ಲ. ಬದಲಿಗೆ ಹಿಂದುಳಿದವರು ಇನ್ನಷ್ಟು ಹಿಂದುಳಿಯುವಂತೆ ಮಾಡಿದ್ದಾರೆ ಎಂದು ಟೀಕಿಸಿದರು.
ಮೋದಿಯವರು ದೇಶದ ಶೇ4 ರಷ್ಟು ಮೇಲ್ವರ್ಗದ ಜನರ ಉದ್ದಾರಕ್ಕೆ ಮಾತ್ರ ಕೆಲಸ ಮಾಡುತ್ತಾರೆ. ನಾಗಪುರ ಈ ಶೇ4 ಜನರ ಪರವಾಗಿ ಹೇಳಿಕೊಟ್ಟ ಕಾರ್ಯಕ್ರಮವನ್ನು ಜಾರಿ ಮಾಡುವುದಷ್ಟೆ ಮೋದಿಯವರ ಕೆಲಸ ಎಂದು ವ್ಯಂಗ್ಯವಾಡಿದರು.
ಕೆ.ಸಿ.ಆರ್ ಹತ್ತು ವರ್ಷ ಅಧಿಕಾರದಲ್ಲಿದ್ದೂ ತೆಲಂಗಾಣವನ್ನು ಅಭಿವೃದ್ಧಿ ಮಾರ್ಗದಲ್ಲಿ ಕೊಂಡೊಯ್ಯದೆ ಭ್ರಷ್ಟಾಚಾರದಲ್ಲಿ ಮುಳುಗಿದರು. ಪ್ರಧಾನಿ ಮೋದಿಯವರು ಈ ಹತ್ತು ವರ್ಷಗಳಲ್ಲಿ ದೇಶದ ಆರ್ಥಿಕತೆಯನ್ನು ಹಳ್ಳ ಹಿಡಿಸಿದರು. ಇದನ್ನು ಕರ್ನಾಟಕದ ಜನತೆ ಅರ್ಥ ಮಾಡಿಕೊಂಡರು. ಜಾಗೃತರಾದರು. ತೆಲಂಗಾಣದ ಜನತೆಯೂ ಅರ್ಥ ಮಾಡಿಕೊಳ್ಳಬೇಕು ಎಂದರು.
ಮೋದಿಯವರು ಜಾರಿಗೆ ತಂದಿರುವ ಎಲ್ಲಾ ಜನದ್ರೋಹಿ, ಜನ ವಿರೋಧಿ ಯೋಜನೆಗಳಿಗೆ ಕೆ.ಸಿ.ಆರ್ ಮತ್ತು ಬಿ.ಆರ್.ಎಸ್ ಬೆಂಬಲ ನೀಡಿ ತಾವೂ ಜನವಿರೋಧಿ ಆಗಿದ್ದಾರೆ ಎಂದರು.
TPCC ಅಧ್ಯಕ್ಷರಾದ ರೇವಂತ್ ರೆಡ್ಡಿ ಸೇರಿ ಹಲವು ನಾಯಕರು ವೇದಿಕೆಯಲ್ಲಿದ್ದರು.
*ಭಾಷಣದ ಇತರೆ ಹೈಲೈಟ್ಸ್*
*ಕೆ.ಸಿ.ಆರ್ ಚುನಾವಣೆಯಲ್ಲಿ ಖರ್ಚು ಮಾಡುವ ಹಣ ಪಾಪದ ಹಣ. ಆದರೆ ತೆಲಂಗಾಣ ಜನತೆ BRC ಯನ್ನು ಸೋಲಿಸಲು ಸ್ಪಷ್ಟ ತೀರ್ಮಾನ ಮಾಡಿದ್ದಾರೆ*
*BJP ತೆಲಂಗಾಣದಲ್ಲಿ 5 ಸೀಟು ಗೆದ್ದರೆ ಅದೇ ಹೆಚ್ಚು*
*ನರೇಂದ್ರ ಮೋದಿ ನೂರು ಬಾರಿ ತೆಲಂಗಾಣಕ್ಕೆ ಪ್ರಚಾರಕ್ಕೆ ಬಂದರೂ ಇಲ್ಲಿ ಬಿಜೆಪಿ ಗೆಲ್ಲಲ್ಲ. ಬಿಜೆಪಿ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳುತ್ತಾರೆ*
*ನರೇಂದ್ರ ಮೋದಿ ಅವರು ಕರ್ನಾಟಕಕ್ಕೂ 48 ಬಾರಿ ಚುನಾವಣಾ ಪ್ರಚಾರಕ್ಕೆ ಬಂದಿದ್ದರು. ಅವರು ಪ್ರಚಾರ ಮಾಡಿದ ಜಾಗಗಳಲ್ಲೆಲ್ಲಾ ಬಿಜೆಪಿ ಹೀನಾಯವಾಗಿ ಸೋತಿದೆ*