ಬೆಂಗಳೂರು:
ಬೆಳಗಾವಿಯಲ್ಲಿ ವಿಧಾನ ಮಂಡಲದ ಉಭಯ ಸದನಗಳ ಚಳಿಗಾಲದ ವಿಶೇಷ ಅಧಿವೇಶನಕ್ಕೆ ಕೊನೆಗೂ ರಾಜ್ಯ ಸರಕಾರ ಮುಹೂರ್ತ ಫಿಕ್ಸ್ ಮಾಡಿದೆ. ಈ ಮೂಲಕ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರಕಾರ ಈ ಭಾಗದ ಜನತೆಯ ಬೇಡಿಕೆಗೆ ಸ್ಪಂದಿಸಿದೆ. ವಿಶೇಷವಾಗಿ ಕಾಂಗ್ರೆಸ್ ಪಕ್ಷ ಬೆಳಗಾವಿ ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಅತಿ ಹೆಚ್ಚಿನ ಸ್ಥಾನ ಪಡೆದು ಪಾರಮ್ಯ ಸಾಧಿಸಿತ್ತು. ಈ ನಿಟ್ಟಿನಲ್ಲಿ ಈ ಬಾರಿಯ ಅಧಿವೇಶನದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಗಾಢವಾಗಿ ಕಾಡುತ್ತಿರುವ ಸಮಸ್ಯೆಗಳಿಗೆ ಮುಕ್ತಿ ದೊರೆಯುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಸರಕಾರ ಯಾವ ರೀತಿ ಸ್ಪಂದಿಸುತ್ತದೆ ಕಾದು ನೋಡಬೇಕಿದೆ.
ವಿಧಾನ ಮಂಡಲದ ಚಳಿಗಾಲದ ಅಧಿವೇಶನವನ್ನು ಡಿ.4 ರಿಂದ ಹತ್ತು ದಿನಗಳ ಕಾಲ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಕಳೆದ ಸಚಿವ ಸಂಪುಟ ಸಭೆಯಲ್ಲಿ ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಕುರಿತು ಚರ್ಚಿಸಿ ದಿನಾಂಕ ನಿಗದಿ ಬಗ್ಗೆ ಸಿಎಂಗೆ ಅಧಿಕಾರ ವಹಿಸಲಾಗಿತ್ತು. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದ್ದು, ಡಿ.4 ರಿಂದ 10 ದಿನಗಳ ಕಾಲ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ. ಡಿ.4 ರಿಂದ 15 ರವರೆಗೆ ಅಧಿವೇಶನ ನಡೆಯಲಿದ್ದು, ಆ ಭಾಗದ ಜನರ ಸಮಸ್ಯೆಗಳನ್ನು ಆದ್ಯತೆ ಯಿಂದ ಚರ್ಚೆ ನಡೆಸಬೇಕಾಗಿದೆ. ಹೀಗಾಗಿ ಅನಗತ್ಯ ವಿವಾದಗಳು ಮುನ್ನೆಲೆಗೆ ಬಾರದಂತೆ ಸಹಕರಿಸಬೇಕು ಎಂದು ಎಚ್.ಕೆ.ಪಾಟೀಲ ಮನವಿ ಮಾಡಿದರು.