ಬೆಂಗಳೂರು :
ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ, ಬೆಂಗಳೂರು ಉತ್ತರ ಸಂಸದ ಸದಾನಂದ ಗೌಡರು ಹೇಳಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ಮುಂದಿನ ಲೋಕಸಭಾ ಚುನಾವಣೆಗೆ ಸದಾನಂದ ಗೌಡರಿಗೆ ಟಿಕೆಟ್ ದೊರೆಯುವುದು ಬಹುತೇಕ ಅನುಮಾನವಾಗಿತ್ತು. ಅದಕ್ಕೂ ಮುನ್ನವೇ ಅವರು ಇದೀಗ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡುವ ಮೂಲಕ ಇತರ ರಾಜಕಾರಣಿಗಳಿಗೆ ಮೇಲ್ಪಂಕ್ತಿ ಹಾಕಿದ್ದಾರೆ. ವಿಧಾನಸಭಾ ಚುನಾವಣೆ ವೇಳೆ ಈಶ್ವರಪ್ಪ, ಹಾಲಾಡಿ ಶ್ರೀನಿವಾಸ ಶೆಟ್ಟಿ ಸೇರಿದಂತೆ ಕೆಲವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿತ್ತು. ಅವರು ಸಹ ಬಿಜೆಪಿ ನಾಯಕತ್ವದ ವಿರುದ್ಧ ಬಂಡೇಳದೆ ಪಕ್ಷ ನಿಷ್ಠೆ ಮೆರೆದಿದ್ದರು. ಇದೀಗ ಸದಾನಂದ ಗೌಡರು ಸಹ ಬಿಜೆಪಿ ಲೋಕಸಭಾ ಟಿಕೆಟ್ ನೀಡುವುದಿಲ್ಲ ಎಂಬ ವಿಷಯ ಗೊತ್ತಿದ್ದರೂ ಬಂಡೇಳದೆ ಮಾದರಿಯಾದ ನಡೆ ಅನುಸರಿಸಿರುವುದು ಇಂದಿನ ಪಕ್ಷಾಂತರ ರಾಜಕಾರಣಕ್ಕೆ ಪಾಠ ಮಾಡಿದಂತಿದೆ. ಕೆಲ ದಿನಗಳ ಹಿಂದೆ ಸದಾನಂದ ಗೌಡರು ಬಿಜೆಪಿ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿರುವ ನಡೆಯನ್ನು ಖಂಡಿಸಿದ್ದರು. ಆಗ ಅವರು ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿ ಹಬ್ಬಿತ್ತು. ಆದರೆ ತಾನು ಯಾವುದೇ ಕಾರಣಕ್ಕೆ ಪಕ್ಷಾಂತರ ಮಾಡುವುದಿಲ್ಲ, ತಮ್ಮ ನಿಷ್ಠೆ ಬಿಜೆಪಿಗೆ ಎಂದು ಬಲವಾಗಿ ಪ್ರತಿಪಾದಿಸಿದ್ದರು. ಇದೀಗ ಚುನಾವಣೆಗೆ ಕೆಲ ತಿಂಗಳು ಇರುವಂತೆ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿರುವುದು ಬಿಜೆಪಿ ಪಾಲಿಗೆ ಉತ್ತಮ ಬೆಳವಣಿಗೆ ಎನ್ನಬಹುದು.