ನಾಗನೂರ ಪಿ.ಕೆ.: ಎಲ್ಲೆಡೆ ಚಿತ್ತಾಕರ್ಷಕ ವಿದ್ಯುತ್ ದೀಪಗಳು, ಡೊಳ್ಳು, ನೃತ್ಯ ವಾದ್ಯಗಳ ಅಬ್ಬರ, ಫಲ-ಪುಷ್ಪ ತಳಿರು ತೋರಣಗಳಿಂದ ಶೃಂಗಾರಗೊಂಡ ಶ್ರೀ ಲಕ್ಷ್ಮೀದೇವಿ ದೇವಸ್ಥಾನ, ಮೆನೆ ಮನಗಳಲ್ಲಿ ಮನೆ ಮಾಡಿದ ಹಬ್ಬದ ಸಂಭ್ರಮ. ಮೊಳಗಿದ ಜಯಘೋಷ, ಖ್ಯಾತ ನಟರು, ಗಾಯಕರ ಮನಮೋಹಕ ಗಾನ ಲಹರಿ, ಶಿಳ್ಳೆ ಕೇಕೆ ಹೊಡೆಯುತ್ತ ಕುಣಿದು ಕುಪ್ಪಳಿಸಿದ ಯುವಮನಸ್ಸುಗಳು, ಎಲ್ಲೆಲ್ಲೂ ಜನವೋ ಜನ. ಸಂಭ್ರಮವೋ ಸಂಭ್ರಮ..
ಇವು ಮಂಗಳವಾರ (ಅ.03.22) ರಾತ್ರಿ ನಾಗನೂರ ಪಿ.ಕೆ. ಗ್ರಾಮದಲ್ಲಿನ ದಸರಾ ಉತ್ಸವದಲ್ಲಿ ಕಂಡು ಬಂದ ದೃಶ್ಯಗಳು. ಹೌದು, ಮಾಜಿ ಡಿಸಿಎಂ, ವಿ.ಪ. ಸದಸ್ಯರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸಂ. ಸವದಿಯವರ ಹುಟ್ಟೂರಾದ ಅಥಣಿ ತಾಲೂಕಿನ ನಾಗನೂರ ಪಿ.ಕೆ. ಗ್ರಾಮದಲ್ಲಿ ಗ್ರಾಮದೇವತೆ ಶ್ರೀ ಲಕ್ಷ್ಮೀದೇವಿ ಜಾತ್ರೆ, ನವರಾತ್ರಿ ಹಾಗೂ ದಸರಾ ಅಂಗವಾಗಿ ಗ್ರಾಮದಲ್ಲಿ ದಿ. ೨೬-೦೯-೨೨ರಿಂದ ೦೫-೧೦-೨೨ರ ವರೆಗೆ ಆಯೋಜಿಸಿರುವ ವಿವಿಧ ಕಾರ್ಯಕ್ರಮಗಳು ಜನಮನ ಸೆಳೆಯುವುದರೊಂದಿಗೆ ಯಶಸ್ವಿಯಾಗಿ ಜರುಗುತ್ತಿದ್ದು, ಮಂಗಳವಾರ ರಾತ್ರಿ ವಿವಿಧ ವಿಶೇಷತೆಗಳೊಂದಿಗೆ ಅಪಾರ ಜನ ಸಾಗರದ ಮಧ್ಯೆ ಜರುಗಿದ ದಸರಾ ಉತ್ಸವದ ವೈಭವ ನೆರೆದಿದ್ದವರಿಗೆ ಮೈಸೂರು ದಸರಾ ಉತ್ಸವದಲ್ಲಿ ಪಾಲ್ಗೊಂಡಿದ್ದೇವೆನೋ ಎನ್ನುವ ಭಾವ ಮೂಡುವಂತಿತ್ತು. ಈ ಮೂಲಕ ಹಿಂದೆಂದೂ ಕಾಣದಂತಹ ಹಲವು ಸಂಭ್ರಮದ ಕ್ಷಣಗಳಿಗೆ ಗ್ರಾಮವು ಸಾಕ್ಷಿಯಾಯಿತು.
ಖ್ಯಾತ ಚಲನಚಿತ್ರ ನಟರಾದ ಶ್ರೀ ವಿಜಯರಾಘವೇಂದ್ರ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶ್ರೀ ಲಕ್ಷ್ಮಣ ಸವದಿಯವರು ತಮ್ಮ ಸರಳ ನಡೆ, ದಾನ, ಸ್ನೇಹ ಗುಣದಿಂದ ಜನ ಸೇವೆ ಮಾಡುತ್ತ ಬಂದಿದ್ದಾರೆ. ಹೀಗಾಗಿ ಅವರು ರಾಜಕೀಯದಲ್ಲಿ ಇಷ್ಟೊಂದು ಸಾಧನೆ ಮಾಡಲು ಸಾಧ್ಯವಾಗಿದೆ. ದೂರ ದೂರದ ನಮ್ಮ ಕಲಾವಿದರು, ಗಾಯಕರನ್ನು, ಪ್ರತಿಭಾವಂತರನ್ನು ಇಂತಹ ಒಂದು ಸುಂದರ ಕಾರ್ಯಕ್ರಮಕ್ಕೆ ಆಹ್ವಾನಿಸಿ ನಿಮಗೆ ಮತ್ತಷ್ಟು ಪರಿಚಯಿಸುವ ಕೆಲಸ ಮಾಡಿದ್ದಾರೆ. ಆದ್ದರಿಂದ ಶ್ರೀ ಲಕ್ಷ್ಮಣ ಸಂ. ಸವದಿ ಹಾಗೂ ಅವರ ಪುತ್ರರಾದ ಶ್ರೀ ಚಿದಾನಂದ ಲ. ಸವದಿಯವರಿಗೆ ತುಂಬಾ ಧನ್ಯವಾದಗಳನ್ನು ತಿಳಿಸುವುದಾಗಿ ಹೇಳಿದರು. ಈ ನಾಯಕರು ಕಲಾವಿದರು, ಪ್ರತಿಭಾವಂತರಿಗೆ ಎಷ್ಟೊಂದು ಪ್ರೋತ್ಸಾಹಿಸಿ ಗೌರವ ನೀಡುತ್ತಾರೆ ಎನ್ನುವುದು ಇದರಿಂದ ತಿಳಿಯುತ್ತದೆ.
ನಮ್ಮಂತಹ ಕಲಾವಿದರಿಗಾಗಿ, ಜನ ಸೇವೆಗಾಗಿ ಮಿಡಿಯುವ ಲಕ್ಷ್ಮಣ ಸವದಿಯವರ ಹೃದಯವಂತಿಕೆಯ ಮನೋಭಾವ, ಅವರ ನಿಸ್ವಾರ್ಥ ಗುಣ ನನ್ನ ಮನಕಲಕುವಂತೆ ಮಾಡಿದೆ. ಅವರ ಸೇವೆ, ದಾನ ಗುಣದ ಪ್ರತಿಫಲವಾಗಿ ಪ್ರಭಾವಿ ರಾಜಕಾರಣಿಯಾಗಿ ಹೆಸರು ಮಾಡಿದ್ದಲ್ಲದೇ, ಉಪಮುಖ್ಯಮಂತ್ರಿಯಂತಹ ಉನ್ನತ ಸ್ಥಾನಕ್ಕೇರಿದ್ದರೂ ಅವರು ಸರಳತೆಯ ನಡೆ ಮಾತ್ರ ಮರೆತಿಲ್ಲ. ಇದರಿಂದ ಅವರಿಗೆ ರಾಜಕೀಯದಲ್ಲಿ ಜನ ಸೇವೆಗಾಗಿ ಇನ್ನಷ್ಟು ಉನ್ನತ ಸ್ಥಾನ ಮಾನ ದೊರಕಲಿ, ಅವರು ಮುಂದಿನ ಮುಖ್ಯಮಂತ್ರಿಯಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.
ಇದಕ್ಕೂ ಪೂರ್ವ ಮಾಜಿ ಡಿಸಿಎಂ, ವಿ.ಪ. ಸದಸ್ಯರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸಂ. ಸವದಿಯವರು ಮಾತನಾಡಿ, ನಮ್ಮ ಉತ್ತರ ಕರ್ನಾಟಕದ ಜನತೆಗೆ ಕಲೆ, ಕಲಾವಿದರೆಂದರೆ ಎಲ್ಲಿಲ್ಲದ ಪ್ರೀತಿ, ಅಭಿಮಾನ. ಕಲೆ, ಕಲಾವಿದರು, ಪ್ರತಿಭಾವಂತರನ್ನು ಪ್ರೋತ್ಸಾಹಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆ. ಹೀಗಾಗಿ ನಮ್ಮ ರಾಜ್ಯದ ಕಲಾವಿದರು ರಾಷ್ಟ್ರಮಟ್ಟದಲ್ಲೂ ಕೀರ್ತಿ ತರುವಂತವರಾಗಬೇಕು ಎಂಬುವುದೇ ನಮ್ಮ ಆಶಯ. ಡಾ. ರಾಜ್ಕುಮಾರ್ ಅವರ ಪುತ್ರ ಖ್ಯಾತ ನಟರಾದ ಪುನೀತ್ ರಾಜ್ಕುಮಾರ್ ಅವರ ಅಗಲಿಕೆಯ ನೋವು ಇನ್ನೂ ನಮ್ಮ ಮನದಿಂದ ಮಾಸಿಲ್ಲ. ಅವರೊಬ್ಬ ಅದ್ಭುತ ಕಲಾವಿದ ಹಾಗೂ ಮಾನವೀಯತೆಗೆ ಹೆಸರಾದ ನಟ. ತಮ್ಮ ದುಡಿಮೆಯ ಬಹುಪಾಲು ಹಣವನ್ನು ವೃದ್ಧಾಶ್ರಮಗಳು, ಬಡ ಮಕ್ಕಳ ಶಿಕ್ಷಣಕ್ಕೆ ನೀಡುತ್ತ ಬಂದಿದ್ದರು. ಇವರೊಬ್ಬ ಮಾದರಿ ನಟ. ಪುನೀತ್ ರಾಜ್ಕುಮಾರ್ ಎಂದೆಂದೂ ಜನಮನದಲ್ಲಿ ಅಜರಾಮರ ಎಂದು ಸ್ಮರಿಸುವ ಮೂಲಕ ನಮನ ಸಲ್ಲಿಸಿದರು.
ಕಿತ್ತೂರ ಶಾಸಕರಾದ ಶ್ರೀ ಮಹಾಂತೇಶ ದೊಡ್ಡಗೌಡರ, ಖಾನಾಪುರ ಮಾಜಿ ಶಾಸಕರಾದ ಶ್ರೀ ಅರವಿಂದ ಪಾಟೀಲ, ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಮಾರುತಿ ಅಷ್ಟಗಿಯವರು ಮಾತನಾಡಿದರು. ಬಿಜೆಪಿ ಯುವ ನಾಯಕರಾದ ಶ್ರೀ ಚಿದಾನಂದ ಲ. ಸವದಿ ಸೇರಿದಂತೆ ಹಲವು ಗಣ್ಯಮಾನ್ಯರು, ಗ್ರಾಮದ ಹಿರಿಯರು, ಗ್ರಾಮಸ್ಥರು, ಅಥಣಿ ತಾಲೂಕಿನ ವಿವಿಧೆಡೆಯಿಂದ ಅಪಾರ ಜನರು ದಸರಾ ಉತ್ಸವದಲ್ಲಿ ಪಾಲ್ಗೊಂಡಿದ್ದರು.
ದಸರಾ ಉತ್ಸವದಲ್ಲಿ ಖ್ಯಾತ
ಗಾಯಕರ ಗಾನ ಲಹರಿ :
ಸರಿಗಮಪ ಖ್ಯಾತಿಯ ವಿನ್ನರ್ಸ್ ಸೇರಿದಂತೆ ಹಲವು ಖ್ಯಾತ ಗಾಯಕರ ಗಾಯನ ಹಾಗೂ ನೃತ್ಯ ಪ್ರದರ್ಶನ ಜನಮನಸೂರೆಗೊಳ್ಳುವಂತೆ ಮಾಡಿತು. ಪ್ರಾರಂಭದಲ್ಲಿ ಶ್ರೀ ಹರ್ಷ ಅವರ ಶಾರದೆ ದಯೆ ತೋರಿದೆ ಎಂಬ ಪ್ರಾರ್ಥನೆ ಗೀತೆಯೊಂದಿಗೆ ಗಾನಸುಧೆ ಹರಡಿತು. ಗಾಯಕರಾದ ಶ್ರೀ ಚನ್ನಪ್ಪ ಹುದ್ದಾರ, ಶ್ರೀ ವಿಶ್ವಪ್ರಸಾದ ಗಾಣಿಗ ಹಾಗೂ ಸುಹಾನಾ ಸೈಯದ್, ಸಾಕ್ಷಿ ಕಲ್ಲೂರ ಅವರು ತಮ್ಮ ಮನಮೋಹಕ ಗಾಯನದಿಂದ ಜನಮನ ರಂಜಿಸಿದರು.
ಕಾರ್ಯಕ್ರಮದುದ್ದಕ್ಕೂ ಖ್ಯಾತ ನಟರಾದ ಶ್ರೀ ವಿಜಯರಾಘವೇಂದ್ರ ಅವರು ತಮ್ಮ ಗಾಯನ ಹಾಗೂ ನೃತ್ಯ, ಭಾವನಾತ್ಮಕ ಮಾತುಗಳಿಂದ ಜನಮನ ಮುಟ್ಟಿದರು.
ಅಪ್ಪುಗೆ ನಮನ:
ಖ್ಯಾತ ನಟ ಡಾ. ಪುನೀತ್ ರಾಜ್ಕುಮಾರ್ಗೆ ನಮನ ಸಲ್ಲಿಸಲಾಯಿತು. ನಟ ಶ್ರೀ ವಿಜಯರಾಘವೇಂದ್ರ ನೇತೃತ್ವದಲ್ಲಿ ಗಾಯಕರು ಹಾಡಿದ ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ..ಹಾಡಿಗೆ ನೆರೆದಿದ್ದವರೆಲ್ಲರೂ ದನಿಯಾಗಿ ನಮನ ಸಲ್ಲಿಸಿದರು. ತಮ್ಮ ಮೊಬೈಲ್ಗಳ ಟಾರ್ಚ್ ಆನ್ ಮಾಡಿ ಅಭಿಮಾನ ಪ್ರದರ್ಶಿಸಿದರು.