ಬೆಳಗಾವಿ:ಡಿ. ಕೆ. ಶಿವಕುಮಾರ ಒಬ್ಬ ಮೋಸಗಾರ, ಬ್ಲ್ಯಾಕ್ ಮೇಲ್ ರಾಜಕಾರಣಿ, ಆತನಿಗೆ ನಾನು ಯಾವಾಗಲೂ ಹೆದರೊಲ್ಲ ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಇಂದು ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಗೋಷ್ಠಿಯ ಉದ್ದಕ್ಕೂ ಡಿ. ಕೆ. ಶಿವಕುಮಾರ ವಿರುದ್ಧವೇ ಹರಿಹಾಯ್ದರು.
ಡಿ. ಕೆ. ಶಿವಕುಮಾರ ಹೋರಾಟದ ರಾಜಕಾರಣಿಯಲ್ಲ, ಆತ ಅಡ್ಜಸ್ಟಮೆಂಟ್ ರಾಜಕಾರಣಿ. ತಾನು ಯಾವಾಗಲೂ ನೇರ ರಾಜಕಾರಣ ಮಾಡಿ ಚುನಾವಣೆ ಗೆದ್ದಿಲ್ಲ ಜೊತೆಗೆ ಹೋರಾಟದ ರಾಜಕಾರಣ ಮಾಡಿಲ್ಲ ಎಂದರು.
ಆಪರೇಷನ್ ಕಮಲ ಎಂಬುವುದು ಸುಳ್ಳು, ಜನರ ಹಾದಿ ತಪ್ಪಿಸಲು ಕಾಂಗ್ರೆಸ್ ಈ ಆರೋಪ ಮಾಡುತ್ತಿದೆ. ಕಾಂಗ್ರೆಸ್ ಸರಕಾರ ಸುಭದ್ರವಾಗಿ ನಡೆಯಲಿ, ಅಷ್ಟೂ ಗ್ಯಾರಂಟಿ ಜಾರಿ ಮಾಡಲಿ ಎಂದು ನಾನು ಆಶಿಸುತ್ತೇನೆ ಎಂದರು.
ಆಪರೇಷನ್ ಕಮಲ ಮಾಡುವುದು ಪ್ರಾಯೋಗಿಕ ಸಾಧ್ಯವೇ ಇಲ್ಲ. ನಂಬರ್ ಗೇಮಗೆ ಬೇಕಾದಷ್ಟು ಅಷ್ಟೊಂದು ಶಾಸಕರನ್ನು ನಾವು ಸೆಳೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು. ಕಳೆದ ಸಲ ಸಮ್ಮಿಶ್ರ ಸರಕಾರ ಬಿದ್ದಾಗ ಬಹಳ ಶಾಸಕರ ಅಗತ್ಯತೆ ಇರಲಿಲ್ಲ, ಆಗ ಆಪರೇಷನ್ ಮಾಡಲಾಯಿತು. ಸದ್ಯ ಪೂರ್ಣ ಬಹುಮತ ಇರುವ ಸರಕಾರ ಕೆಡವಲು, ಶಾಸಕರನ್ನು ಸೆಳೆಯಲು ಸಾಧ್ಯವಿಲ್ಲ. ನಾನಂತೂ ಅದನ್ನು ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
*ಡಿಕೆಶಿ ಬ್ಲ್ಯಾಕ್ ಮೇಲ್:*
ಡಿ. ಕೆ. ಶಿವಕುಮಾರ ಕೊಳ್ಳೇಗಾಲದ ಮಾಜಿ ಎಂಎಲ್ ಎ ನಾಗರಾಜ ಮತ್ತು ನೆಲಮಂಗಲ ಎಂಎಲ್ ಎ ಅವರಿಗೆ ಬ್ಲ್ಯಾಕ್ ಮೇಲ್ ಮಾಡಿ ಬೆದರಿಸಲು ಯತ್ನಿಸುತ್ತಿದ್ದಾನೆ. ಈ ಬೆದರಿಕೆಗಳಿಗೆ ಯಾರೂ ಬಗ್ಗೊಲ್ಲ.
*ಸಿಬಿಐ ತನಿಖೆಗೆ ಒಪ್ಪಿಸಿ:*
ನನ್ನನ್ನು ಸಿಡಿ ಹಗರಣದಲ್ಲಿ ಸಿಗಿಸಲು ಯತ್ನಿಸಿದ ಆದರೆ ನಾನು ಹೆದರಲಿಲ್ಲ. ಇಂತಹ ನೂರು ಸಿಡಿ ಬಂದರೂ ನಾನು ಹೆದರೊಲ್ಲ. ನನ್ನ ಎರಡೂ ಪ್ರಕರಣಗಳನ್ನು ಎಸ್ ಐಟಿ ಬದಲು ಸಿಬಿಐ ತನಿಖೆಗೆ ಕೊಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ. ಪರಮೇಶ್ವರ ಅವರನ್ನು ಭೇಟಿಯಾಗಿ ಆಗ್ರಹಿಸುತ್ತೇನೆ ಎಂದರು.
ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಸುಮ್ಮನೆ ಕೂರಬಾರದು. ಕಾಂಗ್ರೆಸ್ ಸರಕಾರವನ್ನು ಎಚ್ಚರಿಸಿ ಗುತ್ತಿಗೆ ಬಿಲ್ ಬಾಕಿ ವಸೂಲಿ ಮಾಡಲಿ, ಅವರಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಆಗ್ರಹಿಸಿದರು.
ರಾಜ್ಯಕ್ಕೆ ಬರೀ ಬಸವಣ್ಣ ಅಲ್ಲ, ಅವರ ಬದಲು, ಡಾ. ಅಂಬೇಡ್ಕರ್ ಕರ್ನಾಟಕ ಎಂದು ಕರೆಯಬೇಕು ಎಂದು ಪ್ರಶ್ನೆಯೊಂದಕ್ಕೆ ಹೇಳಿಕೆ ನೀಡಿದರು.
ನಾನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜೊತೆಗೆ ಯಾವುದೇ ರಾಜಕೀಯ ಸಖ್ಯ ಹೊಂದಿಲ್ಲ. ಅವರೊಂದಿಗಿನ ಸಹಜ ಭೇಟಿಯನ್ನೇ ಡಿಕೆಶಿ ಅನರ್ಥ ಕಲ್ಪಿಸುತ್ತಿದ್ದಾನೆ. ನನ್ನ ಮಾಡು ಕೇಳಲು ಕುಮಾರಸ್ವಾಮಿ ಚಿಕ್ಕ ಮಗುವೇ. ಎರಡಿ ಬಾರಿ ಮುಖ್ಯಮಂತ್ರಿ ಆದ ಎಚ್ಡಿಕೆ ನನ್ನ ಮಾತು ಕೇಳಿ ರಾಜಕೀಯ ಮಾಡುತ್ತಾರೆಯೇ ಎಂದರು.