ಜನ ಜೀವಾಳ ಸರ್ಚ್ ಲೈಟ್ :ಬೆಳಗಾವಿ
ಬೆಳಗಾವಿ ಮಹಾನಗರ ಸ್ಮಾರ್ಟ್ ಸಿಟಿ ಯೋಜನೆಗೆ ಸಂಬಂಧಿಸಿದ ಮತ್ತೊಂದು ಪ್ರಹಸನ ರವಿವಾರ ನಡೆದಿದೆ. ಬೆಳಗಾವಿಯ ವಿಶ್ವೇಶ್ವರಯ್ಯ ನಗರ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ ನಲ್ಲಿ ರವಿವಾರ ಸಂಜೆ ನಿಗದಿಪಡಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ಕಾರಣಾಂತರಗಳಿಂದ ರದ್ದುಗೊಳಿಸಲಾಗಿದೆ ಎಂದು ಸ್ಮಾರ್ಟ್ ಸಿಟಿ ಅಧಿಕಾರಿಗಳು ನೀಡಿರುವ ಹೇಳಿಕೆ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ವ್ಯವಹಾರ ಸಚಿವಾಲಯದ ವತಿಯಿಂದ ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿರುವ ಕಾಮಗಾರಿಗಳ ವೀಕ್ಷಣೆಗೆ ವಸತಿ ಮತ್ತು ನಗರಭಿವೃದ್ಧಿ ವ್ಯವಹಾರಗಳ ಸಚಿವಾಲಯದ ಎಡಿಜಿ (ಮೀಡಿಯಾ) ರಾಜೀವ ಜೈನ್ ಅವರ ನೇತೃತ್ವದಲ್ಲಿ ರಾಷ್ಟ್ರ ಮಟ್ಟದ ಪತ್ರಕರ್ತರ ತಂಡ ಆಗಮಿಸಿತ್ತು. ನಂತರ ಪತ್ರಿಕಾಗೋಷ್ಠಿ ನಡೆಸಲು ಮುಂದಾಗಿದ್ದರೂ ಕೊನೆಯ ಕ್ಷಣದಲ್ಲಿ ಅದು ರದ್ದುಗೊಂಡಿರುವುದು ಏಕೆ ಎಂಬ ಅನುಮಾನ ಎಲ್ಲರನ್ನು ಕಾಡುತ್ತಿದೆ.
ಬೆಳಗಾವಿಯಲ್ಲಿ ನಡೆದಿರುವ ಸ್ಮಾರ್ಟ್ ಸಿಟಿ ಕಾಮಗಾರಿಗೆ ಕೇಂದ್ರ ತಂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ, ಸಾರ್ವಜನಿಕರು ಬಹುದೊಡ್ಡ ಪ್ರಮಾಣದಲ್ಲಿ ಸ್ಮಾರ್ಟ್ ಸಿಟಿ ಕೇಂದ್ರ ತಂಡದ ಎದುರು ತಮ್ಮ ನೋವು-ಸಂಕಟಗಳನ್ನು ತೋಡಿಕೊಂಡಿದ್ದರಿಂದ ಸ್ಮಾರ್ಟ್ ಸಿಟಿ ತಂಡ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ಮೊಟಕುಗೊಳಿಸಿದೆ.
ನಗರದಲ್ಲಿ ನಡೆದಿರುವ ಸ್ಮಾರ್ಟ್ ಸಿಟಿ ಕಾಮಗಾರಿ ಅವೈಜ್ಞಾನಿಕದಿಂದ ಕೂಡಿದೆ ಹಾಗೂ ಭ್ರಷ್ಟಾಚಾರ ಆರೋಪ ದೊಡ್ಡ ಮಟ್ಟದಲ್ಲಿ ನಾಗರಿಕರ ದೂರಿನ ಸುರಿಮಳೆಯನ್ನು ಕೇಂದ್ರ ತಂಡ ಕೇಳಬೇಕಾದ ಪ್ರಸಂಗ ಸೃಷ್ಟಿಯಾಯಿತು.
ನಗರದ ಬ್ಯಾಂಕ್ ಆಫ್ ಇಂಡಿಯಾದಿಂದ ಪಿಬಿ ರಸ್ತೆವರೆಗೆ ನಡೆದಿರುವ ಕಾಮಗಾರಿಯಿಂದ ಅನೇಕರು ಮನೆ ಕಳೆದುಕೊಳ್ಳಬೇಕಾದ ಪ್ರಸಂಗ ಎದುರಾಗಿದೆ. ಅವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ನ್ಯಾಯಾಲಯ ಈಗಾಗಲೇ ಆದೇಶಿಸಿದೆ. ಇದನ್ನು ನಾಗರಿಕರು ಕೇಂದ್ರ ತಂಡದ ಎದುರು ವಿವರಿಸಿದರು.
ಬೆಳಗಾವಿಯ ಸ್ಮಾರ್ಟ್ ಸಿಟಿ ಯೋಜನೆಯನ್ನು ಜಾರಿಗೊಳಿಸಿದ ಅಧಿಕಾರಿಗಳು ಹಾಗೂ ರಾಜಕಾರಣಿಗಳೇ ಇದಕ್ಕೆ ನೇರ ಹೊಣೆ ಎಂದು ನಾಗರಿಕರು ಹಾಗೂ ಸಾಮಾಜಿಕ ಕಾರ್ಯಕರ್ತರು ಆರೋಪ ಮಾಡಿದರು. ಇದರಿಂದ ವಿಚಲಿತಗೊಂಡ ಕೇಂದ್ರ ತಂಡ ಹೇಗಾದರೂ ಮಾಡಿ ಬೆಳಗಾವಿಯಿಂದ ಪಾರಾದರೆ ಸಾಕು ಎಂಬ ರೀತಿಯಲ್ಲಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ನಿಯೋಜಿಸಿದ ಪತ್ರಿಕಾಗೋಷ್ಠಿಯನ್ನೇ ರದ್ದುಗೊಳಿಸಿತು.
ಸ್ಮಾರ್ಟ್ ಸಿಟಿ ಕಾಮಗಾರಿಗೆ ವೀಕ್ಷಣೆಗೆ ಕೇಂದ್ರ ತಂಡವನ್ನು ಕರೆಸಿಕೊಂಡು ಬಿಜೆಪಿಗೆ ಮುಂದಿದ ಲೋಕಸಭಾ ಚುನಾವಣೆಯಲ್ಲಿ ಲಾಭ ತಂದು ಕೊಡುವ ನಿಟ್ಟಿನಲ್ಲಿ ವರದಿ ಪ್ರಕಟವಾಗಬೇಕು ಎಂಬ ನಿಟ್ಟಿನಲ್ಲಿ ಬಿಜೆಪಿ ವ್ಯವಸ್ಥಿತ ಯೋಜನೆ ಮೂಲಕ ತಂಡವನ್ನು ಕರೆಸಿಕೊಂಡಿತ್ತು. ಆದರೆ ಇದೀಗ ಸ್ಮಾರ್ಟ್ ಸಿಟಿ ನಾಗರಿಕರ ತೀವ್ರ ಆಕ್ಷೇಪಕ್ಕೆ ವಾಪಸ್ ಆಗಿರುವುದು ಬೆಳಗಾವಿ ಬಿಜೆಪಿ ಪಾಲಿಗೆ ದೊಡ್ಡ ಗರ್ವಭಂಗವಾದಂತಾಗಿದೆ.