ಬೆಂಗಳೂರು :
ನಿಗಮ, ಮಂಡಳಿಗಳ ನಾಮನಿರ್ದೇಶನಕ್ಕೆ ಸಂಬಂಧಿಸಿದಂತೆ ಇಬ್ಬರೂ ಶುಕ್ರವಾರ ನಾಲ್ಕು ಗಂಟೆ ಚರ್ಚೆ ನಡೆಸಿದ್ದಾರೆ.
ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ 15 ರಿಂದ 20 ಶಾಸಕರಿಗೆ ಆಯಕಟ್ಟಿನ ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಿ ಸಮಾಧಾನಪಡಿಸಲು ನಿರ್ಧರಿಸಲಾಗಿದೆ. ವಾರದೊಳಗೆ ಆದೇಶವನ್ನೂ ಹೊರಡಿಸುವ ತೀರ್ಮಾನಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ.
ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚು ಅನುಕೂಲವಾಗುವಂತೆ ನಿಗಮ, ಮಂಡಳಿಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ನೀಡಬೇಕೆಂಬ ಬೇಡಿಕೆಯನ್ನು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಮುಂದಿಟ್ಟಿದ್ದರು. ಆದರೆ, ಚುನಾವಣೆ ಸಂದರ್ಭದಲ್ಲಿ ಶಾಸಕರು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕದಂತೆ ತಡೆಯಲು ಅವರಿಗೆ ಪ್ರಮುಖ ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡುವುದು ಅನಿವಾರ್ಯ ಎಂದು ಸಿದ್ದರಾಮಯ್ಯ ಅವರು ಮನವೊಲಿಸಿದ್ದಾರೆ ಎಂದು ಗೊತ್ತಾಗಿದೆ.
‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಜತೆ ಶಿವಕುಮಾರ್ ಅವರು ನಿಗಮ, ಮಂಡಳಿ ನೇಮಕಾತಿ ಕುರಿತು ಇತ್ತೀಚೆಗೆ ಚರ್ಚೆ ನಡೆಸಿದ್ದರು. ಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಜತೆ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರುವಂತೆ ಖರ್ಗೆ ಮತ್ತು ವೇಣುಗೋಪಾಲ್ ಸೂಚಿಸಿದ್ದರು. ಸುರ್ಜೇವಾಲಾ ಅವರು ಮಧ್ಯಪ್ರದೇಶ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿದ್ದಾರೆ. ಅವರ ಜತೆ ಚರ್ಚಿಸಿದ ಬಳಿಕ ನಿಗಮ, ಮಂಡಳಿಗಳ ನೇಮಕಾತಿ ಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ’ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಪ್ರಾದೇಶವಾರು, ಜಾತಿವಾರು ಪ್ರಾತಿನಿಧ್ಯಗಳನ್ನು ನಿಗಮ, ಮಂಡಳಿಗಳ ನೇಮಕಾತಿಯಲ್ಲೂ ನೀಡಲು ನಿರ್ಧರಿಸಲಾಗಿದೆ. ಸಂಪುಟ ಸೇರಲು ಬಯಸಿರುವ ಕೆಲವು ಹಿರಿಯ ಶಾಸಕರನ್ನೂ ನಿಗಮ, ಮಂಡಳಿಗಳ ಅಧ್ಯಕ್ಷರಾಗುವಂತೆ ಮನವೊಲಿಕೆ ಮಾಡಲು ಸಿದ್ಧತೆ ನಡೆದಿದೆ ಎಂದು ಮೂಲಗಳು ಹೇಳಿವೆ.