ಮೂಡಲಗಿ :
ಮಾಧ್ಯಮ ಕ್ಷೇತ್ರವು ಇಡೀ ಭಾರತ ದೇಶದ ಚಿತ್ರಣವನ್ನು ಬದಲಾವಣೆ ಮಾಡುವಂತ ಸಾಮಥ್ರ್ಯವನ್ನು ಹೊಂದಿದ್ದು, ಮಾಧ್ಯಮಗಳು ಮಾಡುವ ಕಾರ್ಯದಿಂದ ಸಾಕಷ್ಟು ಸಮಾಜದಲ್ಲಿ ಸುಧಾರಣೆ ಬದಲಾವಣೆಯಾಗುತ್ತಿವೆ. ಕೆಲವು ಜನರು ಮಾಡುವಂತ ತಪ್ಪು ಕೆಲಸಗಳನ್ನು ಸಾರ್ವಜನಿಕರ ಮುಂದಿಟ್ಟು ಅವರನ್ನು ತಿದ್ದುವಂತ ಕಾರ್ಯ ಮಾಧ್ಯಮ ಕ್ಷೇತ್ರ ಮಾಡುತ್ತಿದೆ ಎಂದು ಕೆಎಮ್ಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಸೋಮವಾರದಂದು ಪಟ್ಟಣದಲ್ಲಿ ನೂತನವಾಗಿ ಪ್ರಾರಂಭಗೊಂಡ ಮೂಡಲಗಿ ತಾಲೂಕಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಘಟಕ ಮತ್ತು ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಮಾಧ್ಯಮ ಕ್ಷೇತ್ರವು ಇವತ್ತಿನ ಕಾಲಕ್ಕೆ ಕರ್ನಾಟಕ ಹಾಗೂ ಇಡೀ ಭಾರತ ದೇಶದಲ್ಲಿ ಬಹಳ ಪ್ರಾಮುಖ್ಯತೆಯನ್ನು ಹೊಂದಿದ್ದು, ಎಲ್ಲ ಪತ್ರಕರ್ತರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದು ಇನ್ನು ಹೆಚ್ಚಿನ ಸುಧಾರಣೆ ಮಾಡುವಂತೆ ಆ ಭಗವಂತನ್ನು ಪತ್ರಕರ್ತರಿಗೆ ಶಕ್ತಿಯನ್ನು ನೀಡಲಿ ಎಂದ ಅವರು, ತಾಲೂಕಿನ ಪತ್ರಕರ್ತರು ಸಹ ಪ್ರಾಮಾಣಿಕವಾಗಿ ಕಾರ್ಯ ಮಾಡುತ್ತಿದ್ದು, ನೂತನ ಸಂಘದ ಉತ್ತಮ ಕಾರ್ಯ ಚಟುವಟಿಕೆಗಳ ಮೂಲಕ ರಾಜ್ಯ ಮಟ್ಟದಲ್ಲಿಯೂ ಸಹ ಸಂಘದ ಹೆಸರು ಬೆಳೆಯುವಂತಾಗಲಿ ಎಂದರು.
ಹಿರಿಯ ಪತ್ರಕರ್ತ ಬಾಲಶೇಖರ ಬಂದಿ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪನಗೊಂಡ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಸಾಕಷ್ಟು ಉತ್ತಮ ಕಾರ್ಯಗಳನ್ನು ಮಾಡುವುದರ ಜೊತಗೆ 91 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಘಟಕ ಹಾಗೂ ಕಚೇರಿಯ ಉದ್ಘಾಟನೆಗೊಂಡಿದ್ದು ಎಲ್ಲ ಪತ್ರಕರ್ತರಿಗೂ ಒಂದು ಶಕ್ತಿ ದೊರೆತಂತಾಗಿದೆ. ಜಿಲ್ಲೆಯ ಗೌರವ ಅಧ್ಯಕ್ಷ ಭೀಮಶಿ ಜಾರಕಿಹೊಳಿಯವರು ಹಾಗೂ ಜಿಲ್ಲಾ ಅಧ್ಯಕ್ಷ ದಿಲೀಪ್ ಕುರಂದವಾಡೆಯವರು ಪತ್ರಕರ್ತರಿಗಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿ ಪತ್ರಕರ್ತರ ಏಳಿಗೆಗಾಗಿ ಶ್ರಮಿಸುತ್ತಿದ್ದು, ಅವರನ್ನು ಸಂಘದ ಎಲ್ಲ ಪತ್ರಕರ್ತರು ಅಭಿನಂದಿಸಬೇಕೆಂದರು.
ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ, ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ, ಸಿದ್ಧಸಂಸ್ಥಾನ ಮಠದ ಪೀಠಾಧಿಪತಿಗಳಾದ ದತ್ತಾತ್ರೇಯ ಬೋಧ ಸ್ವಾಮೀಜಿಗಳು ಕಚೇರಿಯ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಘದ ಪದಾಧಿಕಾರಿಗಳಿಗೆ ಮತ್ತು ಸದಸ್ಯರಿಗೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಸಂಘದ ಮೂಡಲಗಿ-ಗೋಕಾಕ ತಾಲೂಕಿನ ಗೌರವ ಅಧ್ಯಕ್ಷ ಸರ್ವೊತ್ತಮ ಜಾರಕಿಹೊಳಿ, ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ತಹಶೀಲ್ದಾರ ಡಿ ಜಿ ಮಹಾತ್, ಬಿಇಒ ಅಜೀತ ಮನ್ನಿಕೇರಿ, ಸಿಡಿಪಿಒ ಯಲ್ಲಪ್ಪ ಗದಾಡಿ, ಪಿಎಸ್ಐ ಎಚ್ ವೈ ಬಾಲದಂಡಿ, ನೂತನ ಸಂಘದ ಅಧ್ಯಕ್ಷ ಕೃಷ್ಣಪ್ಪ ಗಿರೇನ್ನವರ, ಉಪಾಧ್ಯಕ್ಷರಾದ ಲಿಂಗಪ್ಪ ಗಾಡವಿ, ಶಿವಾನಂದ ಮರಾಠೆ, ಪ್ರಧಾನ ಕಾರ್ಯದರ್ಶಿ ಮಲ್ಲು ಬೋಳನವರ, ಕಾರ್ಯದರ್ಶಿಗಳಾದ ಅಲ್ತಾಫ್ ಹವಾಲ್ದಾರ, ವೆಂಕಪ್ಪ ಬಾಲರಡ್ಡಿ, ಖಂಜಾಚಿ ಮಹಾದೇವ ನಡುವಿನಕೇರಿ ಹಾಗೂ ಸಂಘದ ಸದಸ್ಯರು, ಪುರಸಭೆ ಸದಸ್ಯರು, ತಾಲೂಕಾ ಮಟ್ಟದ ಅಧಿಕಾರಿಗಳು, ಪಟ್ಟಣದ ಮುಖಂಡರು ಉಪಸ್ಥಿತರಿದ್ದರು.