ಬೆಳಗಾವಿ ಮಹಾನಗರದಲ್ಲಿ ಇತ್ತೀಚಿನ ದಿನಗಳಲ್ಲಿ ವಂಚಕರ ಜಾಲ ಹೆಚ್ಚುತ್ತಿದೆ. ಇದರಿಂದ ನಾಗರಿಕರು ಹೈರಾಣಾಗುವಂತಾಗಿದೆ. ದೈವ ದೇವರ ಹೆಸರಿನಲ್ಲಿ ವಂಚಿಸುವವರ ಸಂಖ್ಯೆ ಬೀದಿ ಬೀದಿಗಳಲ್ಲಿ ಕಂಡುಬರುತ್ತಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ನಾಗರಿಕರಲ್ಲಿ ಇವರು ಹಣ ನೀಡುವಂತೆ ಪೀಡಿಸುತ್ತಾರೆ. ಇವರಿಂದ ತಪ್ಪಿಸಿಕೊಂಡು ಹೋದರೆ ಸಾಕು ಎಂಬ ಸಂದಿಗ್ಧ ಪರಿಸ್ಥಿತಿ ನಾಗರಿಕರದ್ದಾಗಿದೆ. ನಗರದ ಮನೆ ಮನೆಗಳಿಗೂ ಸಂಚಾರ ನಡೆಸುವ ಇವರು ಮನೆಯಲ್ಲಿರುವ ವಸ್ತುಗಳನ್ನು ನೀಡುವಂತೆ ಭಯಪಡಿಸುತ್ತಾರೆ. ಕೊಡದೆ ಇದ್ದರೆ ಮನೆಯವರಿಗೆ ಮಾನಸಿಕ ಕಿರುಕುಳ ನೀಡಿ ಪರಿತಪಿಸುವಂತೆ ಮಾಡುತ್ತಾರೆ. ಒಟ್ಟಾರೆ ಇವರ ಹಾವಳಿಗೆ ಕಡಿವಾಣ ಇಲ್ಲದಂತಾಗಿದೆ.
ಬೆಳಗಾವಿ:
ನಗರದ ಪ್ರತಿಷ್ಠಿತ ವಿವಿಧ ಬಡಾವಣೆ, ಬಸ್ ಸ್ಟ್ಯಾಂಡ್, ರೈಲು ನಿಲ್ದಾಣಗಳಲ್ಲಿ ವಂಚಕರ ಜಾಲಗಳು ಹೆಚ್ಚಾಗಿವೆ. ಅತೀ ಹೆಚ್ಚು ಪ್ರಚಾರ ಹಾಗೂ ಭಕ್ತರನ್ನು ಹೊಂದಿದ ದೇವರುಗಳ ಹೆಸರುಗಳನ್ನು ಬಳಸಿಕೊಂಡು ಭಕ್ತರ ವೇಷದಲ್ಲಿ ಮನೆಗಳಿಗೆ ತೆರಳಿ ವಂಚನೆ ಎಸಗುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಮಧ್ಯಾಹ್ನದ ಸಮಯದಲ್ಲಿ ಮನೆಗಳಿಗೆ ತೆರಳಿ ಕಾಣಿಕೆ ಕೇಳುವ ನೆಪದಲ್ಲಿ ಸಾರ್ವಜನಿಕರಿಂದ ಸುಲಿಗೆ ನಡೆಯುತ್ತಿವೆ. ಇದಕ್ಕೆ ಸ್ಪಂದಿಸದ ಸಾರ್ವಜನಿಕರಿಗೆ ಶಾಪ ಹಾಕುವ ರೀತಿಯಲ್ಲಿ ಬ್ಲಾಕ್ ಮೇಲ್ ಮಾಡಿ ಹಣ ದೋಚುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.
ನಗರದ ವಿವಿಧೆಡೆ ಸಣ್ಣ ಪುಟ್ಟ ಕಳ್ಳತನಗಳು ಹೆಚ್ಚಾಗಿವೆ ಅಷ್ಟೇ ಅಲ್ಲದೇ ಈ ಭಾಗದ ಬಹುಸಂಖ್ಯೆಯಲ್ಲಿ ಭಕ್ತರನ್ನು ಹೊಂದಿದ ಸವದತ್ತಿ ಯಲ್ಲಮ್ಮ, ಪಂಡರಾಪುರದ ವಿಠ್ಠಲ, ಸಾಯಿ ಬಾಬಾ ಭಕ್ತರು, ಅನಾಥ ಆಶ್ರಮ ಅಂತ ಹೇಳಿಕೊಂಡು ಮನೆ ಮನೆಗೆ ತೆರಳಿ ವಸೂಲಿ ದಂದೆಗಳು ನಡೆದಿವೆ.
ಒಂದುವೇಳೆ ಜನರು ಹಣ ನೀಡುವುದು ನಿರಾಕರಿಸಿದರೆ ಶಾಪ ನೀಡುವ ಭಯದ ವಾತಾವರಣ ಸೃಷ್ಟಿಸಿ ಹಣ ದೋಚುವುದು ಕಂಡು ಬರುತ್ತಿವೆ.
ಹಣ ದೊಚುತ್ತಿರುವ ದಂದೆಕೊರರಿಗೆ ಜನರ ಭಯ, ಭಕ್ತಿಯೇ ಬಂಡವಾಳವಾಗಿವೆ. ಮಧ್ಯಾಹ್ನದ ಹೊತ್ತಲ್ಲಿ ಮನೆಗಳಲ್ಲಿ ಹೆಚ್ಚಾಗಿ ಮಹಿಳೆಯರು, ಹಿರಿಯ ನಾಗರೀಕರು ಇರುವದರಿಂದ ಮನೆಗಳಿಗೆ ತೆರಳಿ ದೇವರಿಗೆ ಕಾಣಿಕೆ ಕೇಳುವ ನೆಪದಲ್ಲಿ ಹಗಲು ದರೋಡೆ ನಡೆಯುತ್ತಿವೆ.
ಸಣ್ಣ ಪುಟ್ಟ ಹಣ ಆಗಿರುವದರಿಂದ ಸಾರ್ವಜನಿಕರು ಇದಕ್ಕೆ ಗಮನ ಕೊಡುವುದಿಲ್ಲ. ಭಕ್ತಿಯ ಭಯಕ್ಕೆ ಹೆದರಿ ಕಾಣಿಕೆ ನೀಡುತ್ತಾರೆ ಇದಲ್ಲದೇ ಮನೆಯಲ್ಲಿರುವ ಗೃಹ ಉಪಯೋಗಿ ವಸ್ತುಗಳನ್ನು ಸಹ ದಾನವಾಗಿ ನೀಡುತ್ತಾರೆ. ಯಾರು ಕೂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸದೆ ಇರುವುದರಿಂದ ಇಂತಹ ಮೋಸದ ಜಾಲಗಳು ಹೆಚ್ಚುತ್ತಿವೆ.
ಇತ್ತೀಚೆಗೆ ನಗರದ ಕುಮಾರ ಸ್ವಾಮಿ ಬಡಾವಣೆಯ ನಿವಾಸಿಯೊಬ್ಬರು ಮನೆಗೆ ತೆರಳಿದ ಇಬ್ಬರು ಮಹಿಳೆಯರು ಸವದತ್ತಿ ಯಲ್ಲಮ್ಮ ದೇವಿಯ ಭಕ್ತರ ವೇಷದಲ್ಲಿ ಬಂದು ಹೆಚ್ಚಿನ ಕಾಣಿಕೆ, ಮನೆಯಲ್ಲಿರುವ ದುಬಾರಿ ವಸ್ತುಗಳನ್ನು ಬೇಡಿಕೆಯಿಟ್ಟಿದ್ದಾರೆ. ಇದಕ್ಕೆ ನಿರಾಕರಿಸಿದ ಅವರಿಗೆ ಧಮ್ಕಿ ಕೂಡ ಹಾಕಿದ್ದಾರೆ.
ಕೂಡಲೇ ಎಚ್ಚೆತ್ತುಕೊಂಡ ನಿವಾಸಿಗಳು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದಾರೆ ಇದನ್ನ ಗಮನಿಸಿದ ವಂಚಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಸಾರ್ವಜನಿಕರು ಈ ಕುರಿತು ಹೆಚ್ಚಿನ ಜಾಗೃತಿ ವಹಿಸಬೇಕು. ಯಾವುದೇ ಅಪರಿಚಿತ ವ್ಯಕ್ತಿ ಅಥವಾ ಭಕ್ತರ ವೇಷದಲ್ಲಿ ಮನೆಗಳಿಗೆ ಬರುವವರಿಗೆ ಸ್ಪಂದಿಸಬಾರದು. ಅನುಮಾನಾಸ್ಪದ ವ್ಯಕ್ತಿಗಳು, ಕಂಡು ಬಂದಲ್ಲಿ ಕೂಡಲೇ ಪೊಲೀಸ್ ಸಹಾಯವಾಣಿ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಸಂಪರ್ಕಿಸಬೇಕು.