ಬೆಂಗಳೂರು :
ಶಿಕ್ಷಣ ನಮ್ಮನ್ನು ಸ್ವಾಭಿಯನ್ನಾಗಿಸಿ ಶೋಷಣೆಯಿಂದ ಮುಕ್ತಗೊಳಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡಿದರು.
ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ಸಂಘದ ಸುವರ್ಣ ಮಹೋತ್ಸವದ ಅಂಗವಾಗಿ ನಿರ್ಮಿಸಿದ್ದ ಬಂಜಾರ ಭವನವನ್ನು ಉದ್ಘಾಟಿಸಿ ಮಾತನಾಡಿದರು.
ಸಾವಿರಾರು ವರ್ಷಗಳಿಂದ ನಾವೆಲ್ಲಾ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದೆವು. ಬ್ರಿಟಿಷರು ಬಂದ ಮೇಲೆ ಶಿಕ್ಷಣದ ಅವಕಾಶಗಳು ತೆರೆದುಕೊಂಡವು. ಡಾ.ಬಿ.ಆರ್.ಅಂಬೇಡ್ಕರ್ ಅವರ ಕಾರಣದಿಂದ ವಂಚಿತರೆಲ್ಲರಿಗೂ ಶಿಕ್ಷಣ ಮೂಲಭೂತ ಹಕ್ಕಾಯಿತು. ಈ ಕಾರಣಕ್ಕೇ ನಾವೆಲ್ಲರೂ ಶಿಕ್ಷಿತರಾಗಬೇಕು. ಶಿಕ್ಷಣ ನಮ್ಮನ್ನು ಸ್ವಾಭಿಮಾನಿಯನ್ನಾಗಿಸುತ್ತದೆ. ಸ್ವಾಭಿಮಾನಿಯಾದರೆ ಶೋಷಣೆಯಿಂದ ತಪ್ಪಿಸಿಕೊಳ್ಳಬಹುದು ಎಂದರು.
ಬಂಜಾರ ಸಮುದಾಯದ ಏಳಿಗೆಗೆ ಅಭಿವೃದ್ದಿಗೆ ಕಾಂಗ್ರೆಸ್ ಸರ್ಕಾರ ನೀಡಿದ ಕೊಡುಗೆಗಳ ಪಟ್ಟಿ ನೀಡಿದ ಮುಖ್ಯಮಂತ್ರಿಗಳು, ಸೇವಾಲಾಲ್ ಮಠಕ್ಕೆ ನೆರವು ನೀಡಿದ್ದು ನಮ್ಮ ಸರ್ಕಾರ. ಸೇವಾಲಾಲ್ ಜಯಂತಿ ಆಚರಿಸಿದ್ದು ನಮ್ಮ ಸರ್ಕಾರ. ತಾಂಡ್ಯಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದ್ದು ನಮ್ಮ ಸರ್ಕಾರ. ಇನ್ನೂ 5 ಸಾವಿರ ತಾಂಡ್ಯಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ನಾವು ತಾಂಡ್ಯಾ ಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ಮುನ್ನುಡಿ ಬರೆದೆವು. ಆದರೆ ಬಿಜೆಪಿಯವರು ನಮ್ಮ ಕೆಲಸವನ್ನು ಅವರು ಮಾಡಿದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ. ಇದು ಹೇಗಿದೆ ಅಂದರೆ, “ಅಟ್ಟಿಕ್ಕಿದವರಿಗಿಂತ ಬೊಟ್ಟಿಕ್ಕಿದವರು ಮೇಲು” ಎನ್ನುವ ಗಾಧೆ ಮಾತಿನಂತಾಗಿದೆ ಬಿಜೆಪಿ ಸ್ಥಿತಿ ಎಂದು ವ್ಯಂಗ್ಯವಾಡಿದರು.
ಬಂಜಾರ ಸಮುದಾಯದ ಅಭಿವೃದ್ಧಿಗೆ ಬಜೆಟ್ ನಲ್ಲಿ 275 ಕೋಟಿ ನೀಡಲಾಗಿತ್ತು. ಸೇವಲಾಲ್ ವಸತಿ ಶಾಲೆ ಸೇರಿದಂತೆ ಇನ್ನಿತರೆ ಬೇಡಿಕೆಗಳಿಗೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹಣ ನೀಡುತ್ತೇನೆ ಎನ್ನುವ ಭರವಸೆ ನೀಡಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿಧಾನಸಭೆ ಉಪ ಸಭಾಪತಿಗಳಾದ ರುದ್ರಪ್ಪ ಮಾನಪ್ಪ ಲಮಾಣಿ ಅವರು ಸೇವಾಲಾಲ್ ಪ್ರತಿಮೆ ಅನಾವರಣಗೊಳಿಸಿದರು. ಬಂಜಾರ ಕರಕುಷಲ ವಸ್ತು ಪ್ರದರ್ಶನವನ್ನು ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು ಉದ್ಘಾಟಿಸಿದರು.
ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ್ ರಾಥೋಡ್, ಶಾಸಕರಾದ ನೇಮಿರಾಜನಾಯ್ಕ್, ಅವಿನಾಶ್ ಜಾದವ್, ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಬಿ.ಸಿದ್ಯಾನಾಯ್ಕ್, ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.