ಬೆಳಗಾವಿ : ಸಾಂಬ್ರಾ ವಿಮಾನ ನಿಲ್ದಾಣ ಅಭಿವೃದ್ಧಿಗೆ ಎಲ್ಲ ರೀತಿಯಿಂದಲೂ ನನ್ನ ಸಹಕಾರವಿದೆ. ಆದರೆ ಸುತ್ತಲಿನ ಹಳ್ಳಿಗಳಿಗೆ ಮತ್ತು ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಸಾಂಬ್ರಾ ವಿಮಾನ ನಿಲ್ದಾಣದ ವಿವಿಧ ಅಭಿವೃದ್ಧಿ ಕೆಲಸಗಳಿಗಾಗಿ ಹೆಚ್ಚುವರಿ ಜಮೀನಿನ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಮಂಗಳವಾರ ಸ್ಥಳ ಪರಿಶೀಲನೆ ನಡೆಸಿದ ನಂತರ ನಡೆದ ಉನ್ನತಾಧಿಕಾರ ಮಟ್ಟದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ವಿಮಾನ ನಿಲ್ದಾಣ ಅಭಿವೃದ್ಧಿಗೆ ಅನುಕೂಲ ಮಾಡಿ ಕೊಡೋಣ. ಆದರೆ ಸಾಂಬ್ರಾ ವಿಮಾನ ನಿಲ್ದಾಣಕ್ಕಾಗಿ ಈಗಾಗಲೇ ರೈತರು ಸಾಕಷ್ಟು ಜಮೀನನ್ನು ನೀಡಿದ್ದಾರೆ. ಇನ್ನು ಮುಂದೆ ಯಾವುದೇ ಮನೆಗಳನ್ನು ತೆರವುಗೊಳಿಸಲು ಅವಕಾಶ ನೀಡುವುದಿಲ್ಲ. ಜತೆಗೆ ರೈತರಿಂದ ಬಲತ್ಕಾರವಾಗಿ ಜಮೀನು ವಶಪಡಿಸಿಕೊಳ್ಳುವಂತಿಲ್ಲ. ರೈತರೊಂದಿಗೆ ಚರ್ಚಿಸದೇ ಮುಂದಡಿ ಇಡಲು ಅವಕಾಶ ಕೊಡುವುದಿಲ್ಲ. ರೈತರನ್ನು ಮೊದಲು ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ಸೂಚಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಆಸೀಫ್ ಸೇಠ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ತ್ಯಾಗರಾಜನ್, ಪೋಲಿಸ್ ಆಯುಕ್ತ ಸಿದ್ರಾಮಪ್ಪ, ಎಸ್. ಪಿ ಭೀಮಾಶಂಕರ್ ಗುಳೇದ್, ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಡಿಸಿಪಿ ಸ್ನೇಹಾ ಪಿ. ವಿ ಸೇರಿದಂತೆ ಹಲವು ಅಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.