ಕಾಕತಿ ಪೊಲೀಸರಿಂದ ಕಡೋಲಿ ವಿಧವೆಗೆ ಘೋರ ಅನ್ಯಾಯ..!
ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿ, ಹೆರಿಗೆಯಾದರೂ ಆರೋಪಿಯನ್ನು ಬಂಧಿಸದ ಪೊಲೀಸರು.
ಕಾಸಿಗಾಗಿ ಕೋಳಿ ಫಾರ್ಮ್ ನಲ್ಲಿದ್ದ ಕಾಮುಕನನ್ನು ಬಿಟ್ಟ ಪೊಲೀಸಪ್ಪ ಯಾರು..?
ಪವರಪುಲ್ ಮಂತ್ರಿ ಕ್ಷೇತ್ರದಲ್ಲೇ ನ್ಯಾಯಕ್ಕಾಗಿ ಪರದಾಡುತ್ತಿರುವ ಮಹಿಳೆ..!
ಜನ ಜೀವಾಳ ಜಾಲ : ಬೆಳಗಾವಿ :ನಮ್ಮ ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಅನ್ಯಾಯವಾಗಿದೆ ಅಂದರೆ ಸಾಕು ತಕ್ಷಣ ವಿಚಾರಣೆಗೂ ಮುನ್ನ ಸೌಜನ್ಯಕ್ಕಾದರೂ ನಮ್ಮ ಕಾನೂನಿನಲ್ಲಿ ದೌರ್ಜನ್ಯ ಎಸಗಿದ ವ್ಯಕ್ತಿಯ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವ ಸಂಸ್ಕಾರವಿದೆ. ಆದರೆ ಇದರ ತದ್ವಿರುದ್ಧವಾಗಿ ಬೆಳಗಾವಿ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಕಾಕತಿ ಪೊಲೀಸರು ಮಾತ್ರ ಬಿಡಿ ಕಾಸಿಗಾಗಿ ಪವರ್ ಪುಲ್ ಮಂತ್ರಿ ಸತೀಶ ಜಾರಕಿಹೊಳಿ ಕ್ಷೇತ್ರದ ವಿಧವೆಗೆ ಘೋರ ಅನ್ಯಾಯ ಮಾಡುವ ಮೂಲಕ ಬೆಳಗಾವಿ ಕಮೀಷನರೇಟ್ ಮೇಲೆ ನಂಬಿಕೆ ಇಡದಂತ ಕೆಲಸ ಮಾಡಿದ್ದಾರೆ.
ಓದಿ ಇವರ ಅನ್ಯಾಯದ ಕರ್ಮಕಾಂಡ..!ಕಡೋಲಿ ಗ್ರಾಮದ ಕಡು ಬಡತನದ ಕುಟುಂಬದಲ್ಲಿ ಮದುವೆಯಾದ ಮಹಿಳೆಯೊಬ್ಬಳು ಕೊರೊನಾದಲ್ಲಿ ತನ್ನ ಪತಿಯನ್ನು ಕಳೆದುಕೊಂಡಳು. ಆ ಸಮಯದಲ್ಲಿ ಜೀವನ ನಡೆಸಲು ಕಷ್ಟವಿದ್ದರೂ ತನಗೆ ಜನಿಸಿದ ಎರಡು ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು ಎದೆಗುಂದದೆ ಮಕ್ಕಳ ಹೊಟ್ಟೆಪಾಡಿಗಾಗಿ ಮತ್ತು ಅವರ ಭವಿಷ್ಯ ರೂಪಿಸಲು ಅದೇ ಗ್ರಾಮದಲ್ಲಿ ವಿಷ್ಣು ಪಾಟೀಲ ಎಂಬುವರು ಪ್ರಾರಂಭಿಸಿದ್ದ ಕೋಳಿ ಫಾರ್ಮ್ ನಲ್ಲಿ ಕೆಲಸಕ್ಕೆ ಸೇರಿದ್ದಳು. ಆಗ ಆಕೆಯ ಒಂಟಿತನದ ಲಾಭವನ್ನು ಅಲ್ಲಿ ಕೆಲಸ ಮಾಡುತ್ತಿದ್ದ 30 ವರ್ಷದ ಶಾಹೂನಗರ ಪ್ರವೀಣ ಮಾರುತಿ ಕಾಗಣೇಕರ ಎಂಬಾತ ವ್ಯಕ್ತಿ ಇಕೆಯೊಂದಿಗೆ ಪ್ರೀತಿಸುವ ನಾಟಕ ಮಾಡಿ ನಿನಗೆ ಬಾಳು ಕೊಡುತ್ತೇನೆ. ಜತೆ ಸಂಸಾರ ಮಾಡುತ್ತೇನೆ, ನಿನ್ನ ಮಕ್ಕಳ ಭವಿಷ್ಯ ರೂಪಿಸುತ್ತೇನೆ ಎಂದು ಹಗಲು ಕನಸು ತೋರಿಸಿ ಅವಳೊಂದಿಗ ದೈಹಿಕ ಸಂಪರ್ಕ ಬೆಳೆಸಿ ತಿಂಗಳುಗಳ ಕಾಲ ಕಾಮ ಸುಖಕ್ಕಾಗಿ ಉಪಯೋಗಿಸಿಕೊಂಡಿದ್ದಾನೆ.
ತಿಂಗಳುಗಳ ಕಳೆದ ಮೇಲೆ ವಿಧವೆ ಗರ್ಭಿಣಿಯಾಗಿದ್ದಾಳೆ. ಈ ವಿಷಯವನ್ನು ಆತನಿಗೆ ತಿಳಿಸಿದ್ದಾಳೆ. ಆಗ ಆತ ಆ ಮಗುವನ್ನು ತೆಗೆದುಹಾಕು ಆಮೇಲೆ ಮದುವೆ ಬಗ್ಗೆ ನೋಡೋಣ ಎಂದಿದ್ದಾನೆ. ಆಗ ಆಕೆ ಕೋಳಿ ಫಾರ್ಮ್ ನ ಮಾಲಿಕನಿಗೆ ಈ ವಿಷಯ ತಿಳಿಸಿದ್ದಾಳೆ. ಮಾಲಿಕ ಕೂಡ ವಿಧವೆಗೆ ಅವಳ ನೋವಿಗೆ ಸ್ಪಂದಿಸುವ ಬದಲಿಗೆ ಮಗು ತೆಗೆಸುವಂತೆ ಒತ್ತಾಯಿಸಿದ್ದಾನೆ. ಆಗ ಅವಳು ಬೇರೆ ದಾರಿ ಕಾಣದೆ ನ್ಯಾಯಕ್ಕಾಗಿ ಕಾಕತಿ ಪೊಲೀಸ ಠಾಣೆ ಮೆಟ್ಟಿಲೇರಿದ್ದಾಳೆ.
ಮಾನವಿಯತೆ ಮರೆತಿದ್ದ ಕಾಕತಿ ಪೊಲೀಸರು: ಕಾಕತಿ ಪೊಲೀಸರು ಕೂಡ ಮೊದಲಿಗೆ ಅವಳಿಗೆ ನ್ಯಾಯ ಕೊಡಿಸುವುದನ್ನು ಬಿಟ್ಟು ಅವಳಿಗೆ ಸಹಾಯ ಮಾಡಲು ಬಂದಿದ್ದ ಯುವಕ ಮಂಡಳಿಯವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ದಾರೆ.
ಯಾವಾಗ ಯವಕರು ಕಾನೂನಿನ ಚೌಕಟ್ಟಿನಲ್ಲಿ ಮಹಿಳೆಗೆ ನ್ಯಾಯ ಕೇಳಿದಾಗ ಕಾಟಾಚಾರಕ್ಕೆ ಆ ಅತ್ಯಾಚಾರಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿ ಆ ಕಾಮುಕನನ್ನು ಬಂಧಿಸಿ ಜೈಲಿಗಟ್ಟುವ ಕೆಲಸ ಮಾಡಬೇಕಾಗಿದ್ದ ಕಾಕತಿ ಪೊಲೀಸರು ಈ ಪ್ರಕರಣದಲ್ಲಿ ಕೂಡ ಡೀಲ್ ಮಾಡಿಕೊಂಡು ಆರೋಪಿಗೆ ಪರಾರಿಯಾಗಲು ಸಹಾಯ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಮೂರು ತಿಂಗಳಾದರೂ ಕ್ರಮ ಇಲ್ಲ ; ಈ ಘಟನೆ ಕರಿತು ಕಾಕತಿ ಪೊಲೀಸ್ ಠಾಣೆಯಲ್ಲಿ 29 ಜೂನ್ 2023 ರಲ್ಲಿ ಕಲಂ 376(2) (N) ಹಾಗೂ IPC 406, 420 ಅಡಿಯಲ್ಲಿ ದಾಖಲಾಗಿದೆ. ಆದರೆ ಇದೆ ಕಾಕತಿ ಕ್ರೈಂ ಟೀಂ ನ ಪೊಲೀಸರು ಮೌಕಿಕವಾಗಿ ದೂರು ನೀಡಿದವರ ಪರವಾಗಿ ಕಳ್ಳತನ ಮಾಡಿದವರನ್ನು ಹಾಗೂ ಮಾಡದವರನ್ನು ಠಾಣೆಗೆ ಕರೆದು ಅವರಿಂದ ಸಾವಿರಾರು ಡೀಲ್ ಮಾಡುವಂತೆ ದಾಖಲಾದ ಈ ಪ್ರಕರಣದಲ್ಲಿ ಕೂಡ ಕೋಳಿ ಪಾರ್ಮ್ ನಲ್ಲಿ ಡೀಲ್ ಮಾಡಿಕೊಂಡು ವಿಧವೆಯ ಬಾಳನ್ನು ಹಳ್ಳ ಹಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಿಳೆ, ಮಗುವಿನ ಪಾಡೇನು..?ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆಗೆ ಈಗ ಹೆರಿಗೆಯಾಗಿದೆ. ಹೆರಿಗೆಯನ್ನು ಕಡೋಲಿ ಗ್ರಾಮದ ಆಶಾ ಕಾರ್ಯಕರ್ತೆಯರು ಮಾಡಿದ್ದಾರೆ. ಸಂತ್ರಸ್ತೆ ಈಗ ಮನೆಗೆ ಬಂದಿದ್ದು ಇರುವ ಇಬ್ಬರು ಮಕ್ಕಳೊಂದಿಗೆ ತಂದೆ ಇಲ್ಲದ ಮಗುವನ್ನು ಸಮಾಜದಲ್ಲಿ ಎದುರಿಸಿ ಹೇಗೆ ಜೀವನ ಸಾಗಿಸಬೇಕು..? ಇವಳ ಕನಿಕರಕ್ಕಾದರೂ ಕಾಕತಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರೆ ಇವತ್ತು ಈ ಮಹಿಳೆಗೆ ಈ ಪಾಡು ಬರುತ್ತಿರಲಿಲ್ಲ ಎಂದು ಅಕ್ಕಪಕ್ಕದವರು ಮಾತನಾಡುವಂತಾಗಿದೆ.
ಕಾಕತಿ ಪೊಲೀಸರ ಈ ನಡೆಗೆ ಕಡೋಲಿ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.ಪ್ರಾಮಾಣಿಕ ಅಧಿಕಾರಿ ಬೆಳಗಾವಿ ಕಮೀಷನರ್ , ಖಡಕ ಅಧಿಕಾರಿಗಳಾಗಿರುವ ಡಿಸಿಪಿ ಸ್ನೇಹಾ ಪಿ ವಿ ಹಾಗೂ ರೋಹಣ ಜಗದೀಶ್ ಈ ಪ್ರಕರದ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡೋಣ.