ಗುರುಮಠಕಲ್ :
ನಾನು ಉಪಮುಖ್ಯಮಂತ್ರಿಯಾಗಿ ಆಗಿ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಹೇಳಿದ್ದಾರೆ.
ಗುರುಮಠಕಲ್ ನಲ್ಲಿ ಮಾತನಾಡಿದ ಅವರು, ಮತದಾರರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ನಾನು ರಾಜಕೀಯದಲ್ಲಿ ಜೀವಂತ ಇರುತ್ತೇನೆ. ಉಪಮುಖ್ಯಮಂತ್ರಿಯಾಗಿ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಪರಿಶಿಷ್ಟ ಪಂಗಡಕ್ಕೆ ಕೋಲಿ ಸಮಾಜವನ್ನು ಸೇರಿಸುವುದೇ ನನ್ನ ಗುರಿಯಾಗಿದೆ. ಚುನಾವಣೆ ವೇಳೆ ಅಪಘಾತದಲ್ಲಿ ನಾನು ಗಂಭೀರವಾಗಿ ಗಾಯಗೊಂಡಿದ್ದರಿಂದ ವಿರೋಧಿಗಳು ನಾನು ಸಾಯುತ್ತೇನೆ ಎಂದು ಅಪಪ್ರಚಾರ ನಡೆಸಿದ್ದರಿಂದ ನನಗೆ ಸೋಲಾಗಿದೆ ಎಂದು ಅವರು ತಮ್ಮ ಸೋಲನ್ನು ವಿಶ್ಲೇಷಿಸಿದರು.
ಕಲಬುರ್ಗಿಯಿಂದ ಖರ್ಗೆ ಅಳಿಯ ಸ್ಪರ್ಧೆ:
ಲೋಕಸಭಾ ಚುನಾವಣೆಗೆ ಕಲಬುರ್ಗಿ ಮತಕ್ಷೇತ್ರದಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಕಲಬುರ್ಗಿ ಲೋಕಸಭಾ ಮತಕ್ಷೇತ್ರದಿಂದ ಮಲ್ಲಿಕಾರ್ಜುನ ಖರ್ಗೆ ಅವರು ಯಾರನ್ನು ನಿಲ್ಲಿಸುತ್ತಾರೆ ಗೊತ್ತಿಲ್ಲ. ಆದರೆ ನನಗೆ ಇರುವ ಮಾಹಿತಿಯಂತೆ ರಾಧಾಕೃಷ್ಣ ಅವರನ್ನು ನಿಲ್ಲಿಸಬಹುದು. ಅವರು ಚುನಾವಣೆಗೆ ನಿಂತರೆ ಹೆಚ್ಚಿನ ಮತ ನೀಡಿ ಸಂಸದರನ್ನಾಗಿ ಮಾಡುತ್ತೇವೆ. ಅವರಿಗೆ ಟಿಕೆಟ್ ನೀಡುವಂತೆ ನಾವು ಒತ್ತಾಯಿಸುತ್ತೇವೆ ಎಂದು ಹೇಳಿದರು.