ಬೆಂಗಳೂರು:
ಐದು ಗ್ಯಾರಂಟಿಗಳ ಘೋಷಣೆ ಮಾಡಿದ್ದೆವು, ಅದರಂತೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ನಮ್ಮ ಸರ್ಕಾರಕ್ಕೆ ಬಸವಣ್ಣನವರೇ ಪ್ರೇರಣೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಆರ್.ಟಿ.ನಗರದ ತರಳಬಾಳು ಕೇಂದ್ರದಲ್ಲಿ ನಡೆದ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳ 31 ನೇ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ತರಳಬಾಳು ಮಠ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ಬಸವಣ್ಣನವರ ಹಾದಿಯಲ್ಲಿ ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದೆ” ಎಂದರು.
ಅಕ್ಷರ ದಾಸೋಹ, ಬಸವತತ್ವ, ರೈತರ ಬಗ್ಗೆ ನೀರಾವರಿಯ ಬಗ್ಗೆ ಕಾಳಜಿ ಹೊಂದಿರುವ ಬಹುದೊಡ್ಡ ವ್ಯಕ್ತಿತ್ವ ತರಳಬಾಳು ಶ್ರೀಗಳು. ನ್ಯಾಯಾಲಯ ಬಿಟ್ಟರೇ ತರಳಬಾಳು ಮಠದ ಸದ್ದರ್ಮ ನ್ಯಾಯ ಪೀಠವೇ ಅತ್ಯಂತ ಶಕ್ತಿಯುತವಾದ ನ್ಯಾಯಪೀಠ ಎಂದು ಹೇಳಿದರು.
ಊರಿನಲ್ಲಿ ಎಷ್ಟೊಂದು ಹೋರಿಗಳು ಜನಿಸುತ್ತವೆ ಆದರೆ ಎಲ್ಲವೂ ಬಸವ ಆಗುವುದಿಲ್ಲ. ಅದರಂತೆ ಎಷ್ಟೊಂದು ಜನ ಸನ್ಯಾಸತ್ವ ಸ್ವೀಕಾರ ಮಾಡಿ ಸ್ವಾಮೀಜಿಗಳಾದರೂ ತರಳಬಾಳು ಶ್ರೀಗಳಂತೆ ಇರಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಅಲೆಗ್ಸಾಂಡರ್ ತಮ್ಮ ಗುರುಗಳಾದ ಅರಿಸ್ಟಾಟಲ್ ಅವರಿಗೆ ಭಾರತ ವಶಪಡಿಸಿಕೊಳ್ಳಲು ಹೋಗುತ್ತಿರುವುದಾಗಿ ಹೇಳಿದರಂತೆ. ಆಗ ಅವರು ” ನೀನು ಮರಳಿ ಬರುವಾಗ ಐದು ಸಂಗತಿಗಳನ್ನು ತೆಗೆದುಕೊಂಡು ಬಾ. ಭಗವದ್ಗೀತೆ, ರಾಮಾಯಣ, ಗಂಗಾಜಲ, ಕೃಷ್ಣನ ಕೊಳಲು ಮತ್ತು ತತ್ವಜ್ಞಾನಿ” ಇಷ್ಟು ಸಂಗತಿಗಳನ್ನು ತಂದರೆ ಇಡೀ ಭಾರತವನ್ನೇ ತಂದಂತೆ ಎಂದರಂತೆ. ಅದೇ ರೀತಿ ಸ್ವಾಮೀಜಿಗಳು ತಮ್ಮ ನ್ಯಾಯ ಪೀಠದಿಂದ ಜನಸಾಮಾನ್ಯರ ಕಷ್ಟಗಳನ್ನು ನಿವಾರಣೆ ಮಾಡುತ್ತಿದ್ದಾರೆ ಎಂದರು.
ಹುಟ್ಟು ಸಾವಿನ ಮಧ್ಯೆ ನಾವು ಏನು ಕಾಯಕ ಮಾಡುತ್ತೇವೆ ಎನ್ನುವುದು ಮುಖ್ಯ. ಜನರು ನಮ್ಮನ್ನು ನಡಿಗೆಯಿಂದ ನೆನಪಿಟ್ಟುಕೊಳ್ಳಬಾರದು ನಡತೆಯಿಂದ ನೆನಪಿಟ್ಟುಕೊಳ್ಳಬೇಕು. ನಾವು ದುಡಿದ ಹಣದಲ್ಲಿ ಕೊಂಚವಾದರೂ ಮಠಗಳ ದಾಸೋಹಕ್ಕೆ ನೀಡಿದರೆ ಈ ರಾಜ್ಯ ಧರ್ಮದಿಂದ ಕೂಡಿರುತ್ತದೆ ಎಂದು ಹೇಳಿದರು.
ಅಮ್ಮನ ನೆನಪು ಪ್ರೀತಿಯ ಮೂಲ, ದೇವರ ನೆನಪು ಭಕ್ತಿಯ ಮೂಲ, ಗುರುವಿನ ನೆನಪು ಜ್ಞಾನದ ಮೂಲ, ಈ ಮೂರರ ನೆನೆಪು ಮನುಷ್ಯತ್ವದ ಮೂಲ. ಇದನ್ನು ಬೆಳೆಸಿದ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳು ನಮಗೆ ಮಾದರಿ. ಬದುಕಿನಲ್ಲಿ ಶ್ರಮಪಟ್ಟರೇ ಮಾತ್ರ ಏನಾದರೂ ಸಾಧನೆ ಮಾಡಲು ಸಾಧ್ಯ ಎಂದರು.
ನಾಭಿಷೇಕೋ ನ ಸಂಸ್ಕಾರಃ ಸಿಂಹಸ್ಯ ಕ್ರಿಯತೇ ಮೃಗೈಃ ವಿಕ್ರಮಾರ್ಜಿತ ವಿತ್ತಸ್ಯ ಸ್ವಯಮೇವ ಮೃಗೇಂದ್ರತಾ ಕಾಡಿನಲ್ಲಿ ನೂರಾರು ಪ್ರಾಣಿಗಳಿದ್ದರೂ ಸಿಂಹವನ್ನು ಮೃಗರಾಜ ಎಂದು ಕರೆದರು ಅದರಂತೆ ನಮ್ಮ ಸಮಾಜಕ್ಕೆ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು ನ್ಯಾಯಸಿಂಹದಂತೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
*ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಕೆಲಸ*
ಚೆನ್ನಗಿರಿ, ಮಾಯಕೊಂಡ ಭಾಗಗಳ ಕೆರೆಗಳಿಗೆ ಭದ್ರಾ ನೀರು ಹರಿಸುವಂತೆ ಸ್ವಾಮೀಜಿಗಳು ಮಾರ್ಗದರ್ಶನ ನೀಡಿದ್ದಾರೆ ಅದರಂತೆ ನಾವು ನಡೆದುಕೊಳ್ಳುತ್ತೇವೆ. ರೈತರ ಜೀವನಾಡಿಯನ್ನು ಅರಿತು ಕೆಲಸ ಮಾಡುತ್ತೇವೆ ಎಂದು ಮಾತು ಕೊಟ್ಟರು.
*ಹಂಪನಾ ಅವರನ್ನು ನೋಡಿದರೆ ನಾಚಿಕೆಯಾಗುತ್ತದೆ*
ಹಂಪನಾ ಅವರ ಮಗ ಮತ್ತು ನಾನು ಎನ್ಪಿಎಸ್ ಶಾಲೆಯಲ್ಲಿ ಸಹಪಾಠಿಗಳು ಅವರನ್ನು ನೋಡಿದರೆ ನಮಗೆ ನಾಚಿಕೆಯಾಗುತ್ತದೆ. 88 ವರ್ಷವಾದರೂ ನಮಗಿಂತ ಲವಲವಿಕೆಯಿಂದ ಕೂಡಿದ್ದಾರೆ. ನಾವು ಅವರ ವಯಸ್ಸಿಗೆ ಬರುವ ಕಾಲಕ್ಕೆ ಕೈಕಾಲೆಲ್ಲ ಬಿದ್ದು ಹೋಗಿರುತ್ತದೆ ಎಂದರು.