ಜೈಪುರ :
ರಾಜಸ್ಥಾನದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಜಿದ್ದಾಜಿದ್ದಿ ಸ್ಪರ್ಧೆಯಲ್ಲಿ ಪ್ರಸ್ತುತ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ನೇತೃತ್ವದ ಸರ್ಕಾರವು ಹಿನ್ನಡೆ ಎದುರಿಸಬಹುದು, ಇದೇ ವೇಳೆ ಭಾರತೀಯ ಜನತಾ ಪಕ್ಷವು (ಬಿಜೆಪಿ) ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ ಎಂದು ಇಟಿಜಿ ಚುನಾವಣಾ ಪೂರ್ವ ಸಮೀಕ್ಷೆ ಭವಿಷ್ಯ ನುಡಿದಿದೆ.
ರಾಜ್ಯದಲ್ಲಿ ಸರ್ಕಾರ ರಚನೆಗೆ ಸರಳ ಬಹುಮತ ಪಡೆಯಲು 101 ಸ್ಥಾನಗಳು ಬೇಕು. ಸಮೀಕ್ಷೆಯ ಪ್ರಕಾರ, 200 ಸ್ಥಾನಗಳಲ್ಲಿ ಬಿಜೆಪಿ 95-105 ಸ್ಥಾನಗಳನ್ನು ಪಡೆಯಬಹುದು ಮತ್ತು ಕಾಂಗ್ರೆಸ್ 91-101 ಸ್ಥಾನಗಳನ್ನು ಗೆಲ್ಲಬಹುದಾಗಿದೆ.
ಪ್ರದೇಶವಾರು ಚುನಾವಣಾ ಭವಿಷ್ಯವನ್ನು ಅವಲೋಕಿಸಿದರೆ, ಜೈಪುರ, ದೌಸಾ ಮತ್ತು ಅಲ್ವಾರ್ ಜಿಲ್ಲೆಗಳನ್ನು ಒಳಗೊಂಡಿರುವ ಧುಂಧರ್ ಪ್ರದೇಶದಲ್ಲಿ ಬಿಜೆಪಿ 27-29 ಸ್ಥಾನಗಳನ್ನು ಪಡೆಯಬಹುದು ಮತ್ತು ಕಾಂಗ್ರೆಸ್ 28-30 ನಡುವೆ ಗೆಲ್ಲಬಹುದು. ಮಾರ್ವಾಡ್ ಪ್ರದೇಶದಲ್ಲಿ ಬಿಜೆಪಿ 30-32 ಸ್ಥಾನಗಳನ್ನು ಪಡೆದರೆ, ಕಾಂಗ್ರೆಸ್ ಪಕ್ಷ 27-29 ಸ್ಥಾನಗಳನ್ನು ಗೆಲ್ಲಬಹುದು. ಶೇಖಾವತಿ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ 9-11 ಸ್ಥಾನಗಳನ್ನು ಗೆಲ್ಲಬಹುದು ಮತ್ತು ಕೇಸರಿ ಪಕ್ಷವು 10-12 ಸ್ಥಾನಗಳನ್ನು ಪಡೆಯಬಹುದು.