ಬೆಂಗಳೂರು :
ರಾಜ್ಯದ ಕೆಲವು ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆಯುತ್ತಿದ್ದ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಕೇಂದ್ರ ಅಪರಾಧ ಪತ್ತೆದಳ (ಸಿಸಿಬಿ) ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ವರದಿಯಾಗಿದೆ.
ದಾವಣಗೆರೆಯ ಶಿವಾಜಿರಾವ್ ಜಾಧವ ಬಂಧಿತ ಆರೋಪಿ ಎಂದು ಹೇಳಲಾಗಿದೆ. ಈತ ಹಿಂದೂ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ ಎನ್ನಲಾಗಿದ್ದು, ಕಳೆದ ಎರಡು ವರ್ಷಗಳಿಂದ ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆಯುತ್ತಿದ್ದ ಎಂದು ಆರೋಪಿಸಲಾಗಿದೆ.
ಈತನ ಬಂಧನಕ್ಕೆ ಜಾಲ ಹೆಣೆದಿದ್ದ ಸಿಸಿಬಿ ಪೊಲೀಸರು ಈತನನ್ನು ದಾವಣಗೆರೆಯಲ್ಲಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಸಾಹಿತಿಗಳಿಗೆ ಬೆದರಿಕೆ ಹಾಕಿದ ಕುರಿತು ಬೆಂಗಳೂರು ಸೇರಿದಂತೆ 7 ಕಡೆಗಳಲ್ಲಿ ಬೆದರಿಕೆ ಪ್ರಕರಣ ದಾಖಲಾಗಿತ್ತು. ಸರ್ಕಾರ ಪ್ರಕರಣವನ್ನು ಸಿಸಿಬಿ ತನಿಖೆಗೆ ವಹಿಸಿತ್ತು. ಬೆದರಿಕೆ ಪತ್ರಗಳನ್ನು ಎಫ್ಎಸ್ ಎಲ್ ಪರೀಕ್ಷೆ ಒಳಪಡಿಸಿದಾಗ ಎಲ್ಲಾ ಪತ್ರಗಳು ಒಂದೇ ಕೈ ಬರಹದ್ದು ಎಂಬುದು ಗೊತ್ತಾಗಿದೆ.
ಆರೋಪಿ ಬೇರೆ ಬೇರೆ ಪೋಸ್ಟ್ ಆಫೀಸ್ ಗಳಿಂದ ಪತ್ರ ರವಾನಿಸಿರುವುದು ಬಯಲಾಗಿತ್ತು. ಆದರೆ, ಪತ್ರ ಬರೆದವರು ಯಾರು ಎಂಬುದು ಮಾತ್ರ ನಿಗೂಢವಾಗಿತ್ತು. ಕೊನೆಗೂ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಪ್ರೊ. ಕೆ. ಮರುಳಸಿದ್ದಪ್ಪ, ಪ್ರೊ. ಎಸ್.ಜಿ. ಸಿದ್ಧರಾಮಯ್ಯ, ಬಂಜಗೆರೆ ಜಯಪ್ರಕಾಶ, ವಸುಂಧರಾ ಭೂಪತಿ, ಕುಂ.ವೀರಭದ್ರಪ್ಪ ಸೇರಿದಂತೆ ಅನೇಕ ಸಾಹಿತಿಗಳಿಗೆ ಬೆದರಿಕೆ ಪತ್ರಗಳು ಬಂದಿದ್ದವು.