ಸಂಕೇಶ್ವರ :
ಸ್ವಚ್ಛ ಮಂಗಳೂರು ಅಭಿಯಾನದ ರೂವಾರಿಗಳಾಗಿ ಕಾರ್ಯ ಮಾಡಿದ್ದ ಈಗಿನ ನಿಜಲಿಂಗೇಶ್ವರ ಸ್ವಾಮೀಜಿ ಮಂಗಳೂರು ಭಾಗದಿಂದ ಈ ಭಾಗಕ್ಕೆ ದೊರೆತಿರುವುದು ಈ ಭಾಗದ ಜನರ ಸೌಭಾಗ್ಯ ಎಂದು ಆರ್.ಎಸ್.ಎಸ್. ಪ್ರಮುಖ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಹುಕ್ಕೇರಿ ತಾಲೂಕಿನ ನಿಡಸೋಸಿ ಮಠಕ್ಕೆ ಭೇಟಿ ನೀಡಿದ ಅವರು, ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕಾಗಿ ಆಧ್ಯಾತ್ಮಿಕ, ಧಾರ್ಮಿಕ ಚಿಂತನೆಗಳ ಜೊತೆಗೆ ಸಾಮಾಜಿಕ ಚಿಂತನೆಗಳ ಕನಸು ಹೊತ್ತು ಕಸ ಹೊತ್ತು ನಿಂತಿದ್ದ ಮಂಗಳೂರಿಗೆ ಸ್ವಚ್ಛತೆಯ ಬೀಜ ಬಿತ್ತಿದ ಶ್ರೇಯಸ್ಸು ಶ್ರೀಗಳಿಗೆ ಸಲ್ಲುತ್ತದೆ ಎಂದರು.
ಕಸ ಎನ್ನುವುದು ಸಾಮಾಜಿಕ ಹೊರೆಯಾಗಿ ನಿಂತಿದೆ. ಅಂತಹ ಕಸದ ಉಪಯೋಗಿಸುವ ಬಹುಜ್ಞಾನ ತೋರಿರುವ ಶ್ರೀಗಳು ಒಬ್ಬ ವಿಜ್ಞಾನಿಯ ಚಿಂತನೆಗಳನ್ನು ಸಮಾಜದಲ್ಲಿ ಮೂಡಿಸಿದ್ದಾರೆ. ಅಂದು ಮಂಗಳೂರಿಗೆ ಹೊಸ ಜೀವ ತುಂಬಿದ್ದ ಶ್ರೀಗಳು ಮಂಗಳೂರು ರಾಮಕೃಷ್ಣಾಶ್ರಮದಿಂದ ಶ್ರೀಮಠಕ್ಕೆ ಬಂದಿರುವುದು ಮಂಗಳೂರು ಭಾಗಕ್ಕೆ ಶ್ರೇಷ್ಠ ಚಿಂತಕ ಕಳೆದುಕೊಂಡು ಈ ಭಾಗಕ್ಕೆ ಬಂದು ನೆಲೆ ನಿಂತಿರುವುದು ಈ ಭಾಗದ ಜನರ ಸೌಭಾಗ್ಯ ಎಂದರು.
ಈ ಭಾಗಕ್ಕೆ ಭೇಟಿ ನೀಡಿದ ವಿಶೇಷತೆ ಬಗ್ಗೆ ಪ್ರಶ್ನಿಸಿದಾಗ ಸ್ವಾಮೀಜಿಯನ್ನು ಭೇಟಿಯಾಗಿ ಕುಶಲೋಪರಿ ವಿಚಾರಿಸುವದಕ್ಕಾಗಿ ಈ ಭಾಗಕ್ಕೆ ಬಂದಿರುವದಾಗಿ ಶ್ರೀಗಳು ತಿಳಿಸಿದರು.
ಇದಕ್ಕೂ ಪೂರ್ವದಲ್ಲಿ ಶ್ರೀಮಠದ ಉತ್ತರಾಧಿಕಾರಿ ನಿಜಲಿಂಗೇಶ್ವರ ಸ್ವಾಮೀಜಿ ಪ್ರಭಾಕರ ಭಟ್ ರನ್ನು ಸ್ವಾಗತಿಸಿ ಶ್ರೀಮಠದ ಕಾರ್ಯಗಳ ಬಗೆಗೆ ವಿಶ್ಲೇಷಿಸಿದರು.