ಜನ ಜೀವಾಳ ಜಾಲ ಬೆಳಗಾವಿ: ಬೆಳಗಾವಿಯ ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)ದ ಜ್ಞಾನ ಸಂಗಮ ಕ್ಯಾಂಪಸ್ ವಿದ್ಯಾರ್ಥಿಗಳಿಗೆ ಆಹಾರ ಪೂರೈಸುವ ಮೆಸ್ ನ ಗುತ್ತಿಗೆ ಪಡೆದುಕೊಂಡಿರುವ ವ್ಯಕ್ತಿಯೊಬ್ಬರಿಗೆ ಅವರ ಮ್ಯಾನೇಜರ್ ಹಾಗೂ ಇತರ ಇಬ್ಬರು ಸೇರಿ ಸುಮಾರು 30 ಲಕ್ಷ ರೂಪಾಯಿ ವಂಚಿಸಿರುವ ಕುರಿತು ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮರೋಳಿಯಲ್ಲಿ ಸಂಸ್ಥೆ ಹೊಂದಿರುವ ಬಿ. ಸಚ್ಚಿದಾನಂದ ಶೆಟ್ಟಿ ವಂಚನೆಗೆ ಒಳಗಾದವರು. ಅವರು 2022ರ ಜನವರಿ 1 ರಿಂದ ಡಿಸೆಂಬರ್ 31ರವರೆಗೆ ಮೆಸ್ ಗೆ ಆಹಾರ ಪೂರೈಸುವ ಗುತ್ತಿಗೆ ಪಡೆದಿದ್ದರು. ಈ ಹಿನ್ನಲೆಯಲ್ಲಿ ಅವರು ತಮ್ಮದೇ ಸಂಸ್ಥೆಯ ಸಿಬ್ಬಂದಿ ಜಗದೀಶ ಕೃಷ್ಣ ಶೆಟ್ಟಿ ಅವರನ್ನು ಮ್ಯಾನೇಜರ್ ಆಗಿ ನೇಮಿಸಿ ಅಲ್ಲಿನ ಸಂಪೂರ್ಣ ಜವಾಬ್ದಾರಿಯನ್ನು ಆ ವ್ಯಕ್ತಿಗೆ ವಹಿಸಿದ್ದರು. ಆತ ಅಂಕಿತಾ ಆನಂದ ಉಸುಲ್ಕರ್ ಎಂಬಾಕೆಯನ್ನು ಅಕೌಂಟೆಂಟ್ ಮತ್ತು ಬಾಬು ದಳವಾಯಿ ಎಂಬುವರನ್ನು ಸಹಾಯಕರನ್ನಾಗಿ ಇಟ್ಟುಕೊಂಡಿದ್ದರು.
ವಿದ್ಯಾರ್ಥಿಗಳಿಂದ ಮೆಸ್ ಬಿಲ್ ಸಂಗ್ರಹಿಸುವಂತೆ ವಿಟಿಯು ಆದೇಶಿಸಿತ್ತು. ಅದರಂತೆ ಸಚ್ಚಿದಾನಂದ ಶೆಟ್ಟಿ ಅವರು ತಮ್ಮ ಖಾತೆಗೆ ಲಿಂಕ್ ಆಗಿರುವ ಪಿಒಎಸ್ ಮತ್ತು ಯುಪಿಐ ಮೆಷಿನ್ ನಲ್ಲಿ ಅಳವಡಿಸಿಕೊಂಡಿದ್ದರು. ಆದರೆ ಒಂದನೇ ಆರೋಪಿ ಜಗದೀಶ ಅದನ್ನು ಬದಲಿಸಿ ತನ್ನ ಖಾತೆ ಲಿಂಕ್ ಹೊಂದಿರುವ ಮೆಷಿನ್ ಅಳವಡಿಸಿ 6,83,175 ರೂಪಾಯಿಯನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಎರಡನೇ ಆರೋಪಿಯಾಗಿರುವ ಅಂಕಿತಾ ವಿದ್ಯಾರ್ಥಿಗಳಿಂದ 10, 48,337 ರೂ. ಹಾಗೂ ಮೂರನೇ ಆರೋಪಿ ಬಾಬು 52,622 ರೂಪಾಯಿ ವರ್ಗಾಯಿಸಿಕೊಂಡಿದ್ದಾರೆ.
ಇದಲ್ಲದೆ ಮೆಸ್ ಕೆಲಸಗಾರರಿಗೆ ಸರಿಯಾಗಿ ವೇತನವನ್ನು ನೀಡಿಲ್ಲ. ಜೊತೆಗೆ ಸಂಸ್ಥೆಯ ಹೆಸರಿನಲ್ಲಿ ಸಾಲವಾಗಿ ದಿನಸಿ ಸಾಮಗ್ರಿಗಳನ್ನು ಪಡೆದುಕೊಂಡಿರುವುದು ಸೇರಿ ಒಟ್ಟು 30 ಲಕ್ಷಗಳನ್ನು ನಷ್ಟ ಮಾಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.