ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಮೊದಗಾ ಗ್ರಾಮದಲ್ಲಿ ಮಂಗಳವಾರ ಸಂಜೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಅದ್ಧೂರಿ ಸನ್ಮಾನ ನಡೆಯಿತು.
ಶ್ರೀ ಬಸವೇಶ್ವರ ಗಜಾನನ ಯುವಕ ಮಂಡಳ, ಗ್ರಾಮ ಪಂಚಾಯತ ಹಾಗೂ ವಿವಿಧ ಮಹಿಳಾ ಸಂಘಗಳ ವತಿಯಿಂದ ಸತ್ಕಾರ ಸಮಾರಂಭ ಏರ್ಪಡಿಸಲಾಗಿತ್ತು. ಸನ್ಮಾನ ಸ್ವೀಕರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ನಿಮ್ಮ ಪ್ರೀತಿ, ವಿಶ್ವಾಸದಿಂದಾಗಿ ನಾನು ಇಂದು ಈ ಮಟ್ಟಕ್ಕೆ ಬಂದು ನಿಂತಿದ್ದೇನೆ. ಅಭಿವೃದ್ಧಿಯ ಮೂಲಕ ನಿಮ್ಮ ಋಣ ತೀರಿಸುವ ಪ್ರಯತ್ನ ಮಾಡುತ್ತೇನೆ. ಗ್ರಾಮಸ್ಥರೆಲ್ಲರ ಜೊತೆ ಚರ್ಚಿಸಿ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸುತ್ತೇನೆ ಎಂದು ತಿಳಿಸಿದರು.
2 ಬಾರಿ ಸೋತ ನನಗೆ ರಾಜಕೀಯ ಮರುಜನ್ಮ ನೀಡಿದವರು ನೀವು. ವಿರೋಧಿಗಳ ಅಪಪ್ರಚಾರದ ಮಧ್ಯೆಯೂ 2018ರ ಚುನಾವಣೆಗಿಂತ ಹೆಚ್ಚಿನ ಮತ ನೀಡಿ ನನ್ನನ್ನು ಆಯ್ಕೆ ಮಾಡಿದ್ದೀರಿ. ಇಡೀ ರಾಜ್ಯದ ಜವಾಬ್ದಾರಿಯ ಜೊತೆಗೆ ಕ್ಷೇತ್ರದ ಜವಾಬ್ದಾರಿಯನ್ನೂ ಸಮರ್ಥವಾಗಿ ನಿಭಾಯಿಸುತ್ತೇನೆ. ನಾನು ಕ್ಷೇತ್ರದಲ್ಲಿಲ್ಲದಿದ್ದಾಗಲೂ ಸಹ ಸಹೋದರ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಮತ್ತು ಮಗ ಮೃಣಾಲ ನಿಮ್ಮೊಂದಿಗೆ ಸದಾಕಾಲ ಇರುತ್ತಾರೆ ಎಂದು ಹೆಬ್ಬಾಳಕರ್ ತಿಳಿಸಿದರು.
ಈ ಸಮಯದಲ್ಲಿ ಗ್ರಾಮದ ಹಿರಿಯರು, ಬಸವರಾಜ ಕಲ್ಲೂರ, ಗ್ರಾಮ ಪಂಚಾಯತಿಯ ಸರ್ವ ಸದಸ್ಯರು, ಬಸವೇಶ್ವರ ಗಜಾನನ ಯುವಕ ಮಂಡಳಿಯ ಪದಾಧಿಕಾರಿಗಳು, ಎಲ್ಲ ಮುಖಂಡರು ಉಪಸ್ಥಿತರಿದ್ದರು.