ದೆಹಲಿ :
ಪ್ರಧಾನಿ ನರೇಂದ್ರ ಮೋದಿ ಭಾನುವಾರ ‘ಮನ್ ಕಿ ಬಾತ್’ನ 105ನೇ ಸಂಚಿಕೆಯಲ್ಲಿ ಭಾರತೀಯ ಸಂಗೀತ ಹಾಗೂ ಸಂಸ್ಕೃತಿ ಬಗ್ಗೆ ಅಪಾರ ಪ್ರೀತಿ ಇರುವ ವಿಶಿಷ್ಟ ವಿದೇಶಿ ಪ್ರತಿಭೆ ಬಗ್ಗೆ ಉಲ್ಲೇಖಿಸಿದ್ದಾರೆ. ಭಾರತೀಯ ಸಂಸ್ಕೃತಿ ಮತ್ತು ಸಂಗೀತವು ಜಾಗತಿಕಗೊಂಡಿವೆ. ಹೆಚ್ಚು ಹೆಚ್ಚು ಜನರು ಅದರತ್ತ ಒಲವು ತೋರುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಅದಕ್ಕೆ ಅವರು ಜರ್ಮನ್ ಗಾಯಕಿ ಕ್ಯಾಸಂಡ್ರ ಮೇ ಸ್ಪಿಟ್ಮನ್ ಎಂಬ ಯುವತಿಯ ಉದಾಹರಣೆ ನೀಡಿದ್ದಾರೆ.
ಕ್ಯಾಸಂಡ್ರ ಮೇ ಸ್ಪಿಟ್ಮನ್ ತಮ್ಮ ಮಧುರ ಗಾಯನದ ಮೂಲಕ ಭಾರತ ಸೇರಿದಂತೆ ವಿಶ್ವದಾದ್ಯಂತ ಇಂಟರ್ನೆಟ್ನಲ್ಲಿ ಸಂಚಲನ ಮೂಡಿಸಿದ್ದಾಳೆ. ಜರ್ಮನಿಯ ಕ್ಯಾಸಂಡ್ರ ಮೇ ಸ್ಪಿಟ್ಮನ್ ಕನ್ನಡ, ಸಂಸ್ಕೃತ ಸೇರಿದಂತೆ ಹತ್ತು ಹಲವು ಭಾರತೀಯ ಭಾಷೆಗಳಲ್ಲಿ ಹಾಡಿದ್ದಾಳೆ.
21 ವರ್ಷದ ಕ್ಯಾಸಂಡ್ರಾ ಹಾಡಿದ ಕನ್ನಡದ ‘ನಮ್ಮ ವಚನ ಬಹುವಚನ’ ಗೀತೆ ಹಾಗೂ ವಿಷ್ಣು ದೇವರನ್ನು ಸ್ಮರಿಸುವ ಸಂಸ್ಕೃತ ಶ್ಲೋಕದ ಬಗ್ಗೆ ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ. ಭಾರತದ ಸಂಗೀತದ ಕುರಿತಾದ ಆಕೆಯ ಆಸಕ್ತಿಯನ್ನು ಶ್ಲಾಘಿಸಿದ್ದಾರೆ. 21 ವರ್ಷದ ಕ್ಯಾಸಮಿ ಭಾರತಕ್ಕೆ ಎಂದಿಗೂ ಭೇಟಿ ನೀಡಿಲ್ಲ. ಆದರೆ ಆಕೆ ಭಾರತೀಯ ಸಂಗೀತದ ಅಭಿಮಾನಿ. ಭಾರತೀಯ ಸಂಸ್ಕೃತಿ ಮತ್ತು ಸಂಗೀತದೆಡೆಗಿನ ಆಕೆಯ ಒಲವು ಶ್ಲಾಘನಾರ್ಹ” ಎಂದು ಮೋದಿ ಹೇಳಿದ್ದಾರೆ.
ಎಂತಹ ಸುಮಧುರ ಧ್ವನಿ. ದೇವರ ಕುರಿತಾದ ಆಕೆಯ ಪ್ರೀತಿಯನ್ನು ನಾವೂ ಅನುಭವಿಸಬಹುದು” ಎಂದು ಮೋದಿ ಹೇಳಿದ್ದಾರೆ. ಅಂಧತ್ವದಿಂದ ಬಳಲುತ್ತಿರುವ ಆಕೆ, ಅಡೆತಡೆಗಳನ್ನು ಎದುರಿಸುತ್ತಿದ್ದರೂ ಕಷ್ಟಕರ ಸವಾಲುಗಳನ್ನು ಮೆಟ್ಟಿನಿಂತು ಅಸಾಧಾರಣ ಸಾಧನೆಗಳನ್ನು ಮಾಡಿದ್ದಾಳೆ ಎಂದು ಹೇಳಿದ್ದಾರೆ.
ಸಂಗೀತದ ಕಡೆ ಅಪಾರ ಆಸಕ್ತಿ ಹೊಂದಿರುವ ಕ್ಯಾಸಮಿ, ಚಿಕ್ಕ ವಯಸ್ಸಿನಲ್ಲಿಯೇ ಹಾಡುವ ಸೃಜನಶೀಲತೆಯನ್ನು ಬೆಳೆಸಿಕೊಂಡವಳು. ಕೇವಲ 3 ವರ್ಷದವಳಿದ್ದಾಗಲೇ ಆಕೆ ಆಫ್ರಿಕನ್ ಡ್ರಮ್ ಕಲಿಕೆ ಆರಂಭಿಸಿದ್ದಳು. ಕೇವಲ 5- 6 ವರ್ಷಗಳ ಹಿಂದೆ ಭಾರತೀಯ ಸಂಗೀತದ ಬಗ್ಗೆ ಆಕೆಗೆ ತಿಳಿದುಕೊಂಡು, ಅದನ್ನು ಮೆಚ್ಚಿಕೊಂಡು, ಅದರಲ್ಲಿ ತೊಡಗಿಕೊಂಡಿದ್ದಾಳೆ. ದೃಷ್ಟಿ ಇಲ್ಲದಿದ್ದರೂ ಆಕೆ ತಬಲಾ ನುಡಿಸುವುದನ್ನು ಕಲಿತಿದ್ದಾಳೆ. ಆಕೆಯ ಪ್ರಯತ್ನಗಳು ಪ್ರತಿ ಭಾರತೀಯನಿಗೂ ಮುದ ನೀಡುತ್ತದೆ” ಎಂದು ಹೇಳಿದ್ದಾರೆ.
ಕ್ಯಾಸಂಡ್ರ ಮೇ ಸ್ಪಿಟ್ಮನ್, ಗೀತೆಗಳನ್ನು ಕೂಡ ರಚಿಸುತ್ತಾಳೆ. ಕ್ಯಾಸಮಿ ಅಫಿಷಿಯಲ್ ಎಂಬ ಇನ್ಸ್ಟಾಗ್ರಾಂ ಖಾತೆ, ಯೂಟ್ಯೂಬ್ ಚಾನೆಲ್ನಲ್ಲಿ ಆಕೆ ಕನ್ನಡ, ಸಂಸ್ಕೃತ, ಹಿಂದಿ, ಉರ್ದು , ಮರಾಠಿ, ಬೆಂಗಾಲಿ, ತಮಿಳು ಸೇರಿದಂತೆ ವಿವಿಧ ಭಾಷೆಗಳ ಮಧುರ ಗೀತೆಗಳನ್ನು ಹಂಚಿಕೊಳ್ಳುತ್ತಾಳೆ. ಆಕೆ ಈವರೆಗೂ ಭಾರತವನ್ನು ನೋಡಿಲ್ಲ. ಇಲ್ಲಿನ ಸಂಸ್ಕೃತಿ, ಸಂಗೀತದ ಶ್ರೀಮಂತಿಕೆಯನ್ನು ಕಂಡಿಲ್ಲ. ಆಕೆಗೆ ಅದನ್ನು ಕಾಣುವುದೂ ಸಾಧ್ಯವಿಲ್ಲ. ಕ್ಯಾಸಂಡ್ರ ಮೇ ಸ್ಪಿಟ್ಮನ್ ಅಂಧೆ. ಆದರೂ ಆಕೆ ಒಳಗಣ್ಣಿನಿಂದಲೇ ಎಲ್ಲವನ್ನೂ ಸಾಧ್ಯವಾಗಿಸಿದ್ದಾಳೆ.