ಬೆಳಗಾವಿ :
ಬೆಳಗಾವಿಯ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ದೇವರಾಜ ಅರಸ ಕಾಲೋನಿ ಕಳೆದ 40 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾಣದೆ ಅಭಿವೃದ್ಧಿಯಿಂದ ವಂಚಿತವಾಗಿದೆ. 1982 ರಲ್ಲಿ ಬುಡಾ ಕೈಗೆತ್ತಿಕೊಂಡ ಮೊದಲ ಯೋಜನೆಯಾದ ಸ್ಕೀಮ್ ನಂ 11 ಇದಾಗಿದ್ದು, ದೇ ಅ ಕಾಲೋನಿ ಅಭಿವೃದ್ಧಿ ಕಾಣದೆ ನಗರ ಆಡಳಿತ ಮತ್ತು ಬುಡಾದ ಕಳಪೆ ಸಾಧನೆಗೆ ಸಾಕ್ಷಿ ಇದಾಗಿದೆ ಎಂದು ನಾಗರಿಕರು ಅಳಲು ತೋಡಿಕೊಂಡಿದ್ದಾರೆ. ಬೆಳಗಾವಿಯಲ್ಲಿ ದೇವರಾಜ ಅರಸ ಕಾಲೋನಿಯ ನಂತರ ಹುಟ್ಟಿಕೊಂಡಂತಹ ಅನೇಕ ಬಡಾವಣೆಗಳು, ಕಾಲೋನಿಗಳು ಅಭಿವೃದ್ಧಿಯ ಪರ್ವಗಳನ್ನೆ ಕಂಡಿದ್ದನ್ನು ನಾವು ನೋಡಬಹುದು. ಬೆಳಗಾವಿಯ ನಗರಾಭಿವೃದ್ಧಿ ಪ್ರಾಧಿಕಾರ ಬುಡಾ ಯಾವುದೇ ಅಭಿವೃದ್ಧಿಯನ್ನು ಮಾಡದೆ ಮಹಾನಗರ ಪಾಲಿಕೆಗೆ ಹಸ್ತಾಂತರಿಸಿತು. ತದನಂತರದಲ್ಲಿ ಬುಡಾದವರು ದೇ ಅ ಕಾಲೋನಿಯ ಅಭಿವೃದ್ಧಿಗಾಗಿ ಬೆಳಗಾವಿ ಕಾರ್ಪೊರೇಷನ್ ಗೆ ಕೊಟ್ಟ ಹಣ ಎಲ್ಲಿ ಹೋಯಿತು? ಅಥವಾ ಹಣವನ್ನು ಮಹಾನಗರ ಪಾಲಿಕೆ ನಗರದ ಬೇರೆ ಅಭಿವೃದ್ಧಿ ಕಾರ್ಯಗಳಿಗೆ ಬಳಸಿದರೊ ತಿಳಿಯದು. ಹಿಗಾಗಿ ದೇವರಾಜ ಅರಸ ಕಾಲೋನಿ ಅಭಿವೃದ್ಧಿ ಕಾಣದೆ ಹಿಂದುಳಿಯುತ್ತಾ ಹೋಗಿದೆ.
ದೇವರಾಜ ಅರಸ ಕಾಲೋನಿ ಸ್ಮಾರ್ಟ್ ಸಿಟಿ ವ್ಯಾಪ್ತಿಯಲ್ಲಿ ಬರುತ್ತಿದ್ದರೂ ಇಂದಿಗೂ ಹಾಗು ಬುಡಾ ತನ್ನ ಅಧೀನದಲ್ಲಿ ತೆಗೆದುಕೊಂಡಾಗಿನಿಂದ ಗಟಾರು, ಡ್ರೈನೇಜ್ ವ್ಯವಸ್ಥೆಯನ್ನು ಮಾಡಲಾಗಿಲ್ಲ. ಮಳೆಗಾಲದ ಸಂದರ್ಭದಲ್ಲಿ ಬಹಳಷ್ಟು ಮನೆಗಳಿಗೆ ಡ್ರೈನೇಜ್ ನೀರು ನುಗ್ಗುವುದನ್ನು ಗಮನಿಸಬಹುದು. ಹಲವು ಕಡೆ ರಸ್ತೆಗಳೂ ಇಲ್ಲ, ದೇವರಾಜ ಅರಸು ಕಾಲೋನಿಗೆ ಸಂಪರ್ಕ ಸಾಧಿಸಲು ಮತ್ತು ವಾಹನ ಚಾಲಕರು ಬಸವನ ಕುಡಚಿಯಲ್ಲಿ ಬೀದಿ ರಸ್ತೆಯನ್ನು ಇಂದಿಗೂ ಆಶ್ರಯಿಸಿದ್ದಾರೆ. ಕಾಲೋನಿಯಿಂದ ನಗರಕ್ಕೆ ಹೋಗಲು ಬುಡಾದವರು ಗುರುತಿಸಲಾಗಿದ್ದ ಸ್ವತಂತ್ರ ರಸ್ತೆಯನ್ನು ಇಲ್ಲಿಯ ವರೆಗೆ ಮಾಡಿಕೊಟ್ಟಿಲ್ಲ. ಕಾಲೋನಿಯಲ್ಲಿ 10 -12 ದಿನಗಳಿಗೊಮ್ಮೆ ಕುಡಿಯುವ ನೀರನ್ನು ಬಿಡಲಾಗುತ್ತಿದೆ. ಪ್ರತಿವರ್ಷ ಕಾಲೋನಿ ನಾಗರಿಕರು ನಗರ ಪಾಲಿಕೆಗೆ ಮನೆಯ (ಕರ) ಟ್ಯಾಕ್ಸ್ ವನ್ನು ತುಂಬುತ್ತಿದ್ದಾರೆ. ಮೂಲಭೂತ ಸೌಕರ್ಯಕ್ಕಾಗಿ ಹಲವಾರು ಸಲ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕರಿಗೆ, ಲೋಕಸಭಾ ಸದಸ್ಯರಿಗೆ, ಉಸ್ತುವಾರಿ ಸಚಿವರಿಗೆ ಮಹಾನಗರ ಪಾಲಿಕೆಯ ಆಯುಕ್ತರಿಗೆ, ಜಿಲ್ಲಾ ಆಯುಕ್ತರಿಗೆ ಅಸಂಖ್ಯಾತ ಸಲ ಮನವಿಯನ್ನ ನೀಡಿದ್ದರೂ ಯಾರು ಈ ಕಡೆಗೆ ಗಮನವನ್ನು ಹರಿಸಿಲ್ಲ ಎಂದು ಸಮಸ್ತ ನಾಗರಿಕರು ದುಃಖ ತೋಡಿಕೊಂಡಿದ್ದಾರೆ.
ಅಂತೆಯೇ ಕಾಲೋನಿಯ ನಾಗರಿಕರು ಬಡಾವಣೆಯ ರಸ್ತೆಯಲ್ಲಿವೀ ದಿನ ಪ್ರತಿಭಟನೆಯನ್ನು ಮಾಡಿದರು.
15 ದಿನದ ಒಳಗಾಗಿ ಮಹಾನಗರ ಪಾಲಿಕೆಯ ಆಯುಕ್ತರು ಅಧಿಕಾರಿಗಳು ಬಂದು ಇಲ್ಲಿಯ ಸಮಸ್ಯೆಯನ್ನ ಆಲಿಸಿ ಪರಿಹರಿಸದೆ ಹೋದರೆ ಬಾಗಲಕೋಟೆ ಮತ್ತು ಬೆಳಗಾವಿ ರಾಜ್ಯ ಹೆದ್ದಾರಿಯನ್ನು (ರಸ್ತೆಯನ್ನು) ಬಂದು ಮಾಡಿ ಉಗ್ರವಾದ ಹೋರಾಟವನ್ನು ಮಾಡಲಾಗುವುದೆಂದು ಪ್ರತಿಭಟನೆಗೆ ಕರೆಕೊಟ್ಟಿದ್ದ ದೇವರಾಜ ಅರಸ ಕಾಲೋನಿ ವೆಲ್ಪೇರ್ ಸೊಸೈಟಿ ಕರೆ ನೀಡಿದೆ, ನಾಗರಿಕರು ಇದನ್ನು ಸಮರ್ಥನೆಮಾಡಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಆಗಮಿಸಿದ ವಾರ್ಡಿನ ನಗರಸೇವಕ ಬಸವರಾಜ ಮೋದಗೇಕರ್ ಅವರಿಗೆ ಮನವಿ ಪತ್ರವನ್ನು ನೀಡಿದರು. ಈ ಸಂದರ್ಭದಲ್ಲಿ ನಗರಸೇವಕರು ಮಾತನಾಡಿ ಹಲವಾರು ದಶಕಗಳಿಂದ ದೇವರಾಜ್ ಅರಸ್ ಕಾಲನಿ ಯಾವುದೇ ಅಭಿವೃದ್ಧಿಯನ್ನು ಕಂಡುಕೊಂಡಿಲ್ಲ. ಬೆಳಗಾವಿ ಮಹಾನಗರ ಅಭಿವೃದ್ಧಿ ಪ್ರಾಧಿಕಾರ ಪ್ಲಾಟ್ ಗಳನ್ನು ಮಾರಿ ಅಭಿವೃದ್ಧಿಯನ್ನೇ ಮಾಡಲಿಲ್ಲ. ಇಲ್ಲಿ ಅಸಂಖ್ಯಾತ ಸಮಸ್ಯೆಗಳಿದ್ದು ಸರಿಯಾದ ಅನುದಾನವನ್ನು ನೀಡಲಿಲ್ಲ. ಈಗಲಾದರೂ ಕೂಡ ಮೇಲಧಿಕಾರಿಗಳು ಬಂದು ಅಗತ್ಯ ಕೆಲಸ ಕಾರ್ಯಗಳನ್ನು ಮಾಡಿ ಕೊಡಬೇಕಾಗಿ ಒತ್ತಾಯಿಸಿದರು.
ದೇವರಾಜ್ ಅರಸ್ ಬಡಾವಣೆ ವೆಲ್ಫೇರ್ ಸೊಸೈಟಿ ಪದಾಧಿಕಾರಿಗಳು, ನಾರಿ ಶಕ್ತಿ ಸಂಘದ ಮಹಿಳಾ ಸದಸ್ಯರು, ಶ್ರೀ ಅಷ್ಟವಿನಾಯಕ ಮಂದಿರದ ಪದಾಧಿಕಾರಿಗಳು, ಶ್ರೀ ಶಿವ ಬಸವ ಟ್ರಸ್ಟಿನ ಪದಾಧಿಕಾರಿಗಳು, ವೀರಶೈವ ಲಿಂಗಾಯತ ಸಮಾಜದ ಪದಾಧಿಕಾರಿಗಳು, ಶ್ರೀ ದತ್ತ ಮಂದಿರ ಹಾಗೂ ಶ್ರೀ ಮರಗಾಯಿ ಮಂದಿರದ ಪದಾಧಿಕಾರಿಗಳು, ಶ್ರೀ ಹನುಮಾನ ದೇವಸ್ಥಾನದ ಪದಾಧಿಕಾರಿಗಳು, ಶ್ರೀ ಗೌರಿ ಮಂದಿರದ ಪದಾಧಿಕಾರಿಗಳು, ಕಾಲೋನಿಯ ಸಮಸ್ತ ನಾಗರಿಕರು ಉಪಸ್ಥಿತರಿದ್ದರು.