ಕುಂದಾಪುರ :
ದಟ್ಟ ಕಾಡು ಪ್ರವೇಶಿಸಿ ನಾಪತ್ತೆಯಾಗಿದ್ದ ಯುವಕ ಎಂಟು ದಿನಗಳ ಕಾಲ ಕಾಡಲ್ಲೇ ಇದ್ದು ಕೊನೆಗೂ ಶನಿವಾರ ಅಮಾಸೆಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಚ್ಚಟ್ಟು ಗ್ರಾಮದ ತೊಂಬಟ್ಟುವಿನಲ್ಲಿ ಮರಳಿ ಮನೆ ಸೇರಿಕೊಂಡಿದ್ದಾರೆ.
ಸೆಪ್ಟೆಂಬರ್ 16 ರಂದು ಶನಿವಾರ ಕಾಡಿಗೆ ತೆರಳಿದ್ದ ಇರ್ಕಿಗದ್ದೆ ಶೀನ ನಾಯ್ಕ ಅವರ ಪುತ್ರ ವಿವೇಕಾನಂದ (28)ನಾಪತ್ತೆಯಾಗಿದ್ದರು. ಮರದ ಕಂಬ ತರಲು ಕಾಡಿಗೆ ಹೋಗಿ ಅರಣ್ಯದಲ್ಲಿ ನಾಪತ್ತೆಯಾಗಿದ್ದ ಅವರು ಮನೆಯಿಂದ ನಾಲ್ಕು ಕಿಲೋಮೀಟರ್ ದೂರದ ಕಬ್ಬಿನಾಲೆಯ ಕಾಡಿನ ಬಳಿ ಕೊನೆಗೂ ಪತ್ತೆಯಾಗಿದ್ದಾರೆ.
ಅವರೊಂದಿಗೆ ಇದ್ದ ನಾಯಿ ಸಹ ಮತ್ತೆ ಮರಳಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಸೆಪ್ಟೆಂಬರ್ 16ರ ಮಧ್ಯಾಹ್ನ ವಿವೇಕಾನಂದ ಕಾಡಿಗೆ ತೆರಳಿದ್ದರು. ಸಾಕು ನಾಯಿಗಳು ಅವರ ಜೊತೆಗೆ ಹೋಗಿದ್ದವು. ಆದರೆ ಒಂದು ನಾಯಿ ಮನೆಗೆ ಮರಳಿತ್ತು. ಮನೆಯವರಿಗೆ ವಿವೇಕಾನಂದ ಕಾಡಿಗೆ ತೆರಳಿದ್ದು ಗೊತ್ತಿರಲಿಲ್ಲ. ಹಳೆಯ ಮಾಳಿಗೆ ಮನೆಯಾದ್ದರಿಂದ ಮಧ್ಯಾಹ್ನ ಊಟ ಮಾಡಿ ಮಹಡಿಯಲ್ಲಿ ಮಲಗಿರಬಹುದು ಎಂದು ಭಾವಿಸಿದ್ದರು. ಆದರೆ ಸಂಜೆಯಾದರೂ ಪತ್ತೆ ಆಗಿರಲಿಲ್ಲ. ಇದರಿಂದ ಭೀತಿಗೊಂಡ ಎಲ್ಲರೂ ಕಾಡಿನಲ್ಲಿ ಹುಡುಕಾಡಿದ್ದರು. ಪೊಲೀಸರು, ಅರಣ್ಯ ಇಲಾಖೆಯವರು ಸೇರಿ 200 ಜನ ಹುಡುಕಾಡಿದರು ಸಿಕ್ಕಿರಲಿಲ್ಲ. ಎಂಟು ದಿನಗಳ ಕಾಲ ಪ್ರತಿದಿನ ನೂರಕ್ಕೂ ಹೆಚ್ಚು ಜನ ಹುಡುಕಾಡುತ್ತಿದ್ದರು. ಆದರೆ ಶನಿವಾರ ಸೆಪ್ಟೆಂಬರ್ 23 ರಂದು ಮನೆಯಿಂದ ನಾಲ್ಕು ಕಿಲೋಮೀಟರ್ ದೂರದ ಕಾಡಿನಂಚಿನ ಕಬ್ಬಿನಾಲೆಯ ಜಗನ್ನಾಥ ಶೆಟ್ಟಿಗಾರ್ ಅವರ ಮನೆಯ ಬಳಿ ಕಾಡಿನಿಂದ ಇಳಿದು ಬರುತ್ತಿರುವ ಯುವಕನನ್ನು ನೋಡಿದ ಮನೆಯವರು ಉಪಚರಿಸಿ ಊರಿನವರಿಗೆ ಮಾಹಿತಿ ನೀಡಿದ್ದಾರೆ. ಆತನೇ ವಿವೇಕಾನಂದ ಎನ್ನುವುದು ಗೊತ್ತಾಗಿದೆ. ಆಹಾರವಿಲ್ಲದೆ ಬಳಲಿದ್ದವನ್ನು ಆಸ್ಪತ್ರೆಗೆ ದಾಖಲಿಸಿ ತಪಾಸಣೆ ನಡೆಸಲಾಗಿದೆ.
ಯುವಕನೊಂದಿಗೆ ಇದ್ದ ನಾಯಿ ಸಹ ನಿತ್ರಾಣಗೊಂಡಿದೆ. ಈ ಕಾಡಿನಲ್ಲಿ ಕಾಡು ಹಂದಿ, ಕಾಡುಕೋಣ ಸೇರಿದಂತೆ ಕ್ರೂರ ಪ್ರಾಣಿಗಳು ಸಂಚರಿಸುತ್ತವೆ. ರಾತ್ರಿ ವೇಳೆ ಸಂಚರಿಸುವುದು ಅಪಾಯಕಾರಿ. ಆದರೆ ನಾಯಿ ಸಹ ತನಗೆ ಯಾವುದೇ ಆಹಾರವಿಲ್ಲದಿದ್ದರೂ ಎಡೆಬಿಡದೆ ವಿವೇಕಾನಂದರ ಜೊತೆ ಇದ್ದು ರಕ್ಷಿಸಿದೆ.
ಕೊನೆ ಕ್ಷಣದಲ್ಲಿ ವಿವೇಕಾನಂದ ದಟ್ಟಡವಿ ಬಳಿಯ ತೊಂಬಟ್ಟು ಗಾಳಿಗುಡ್ಡೆಯ ಶ್ರೀ ಈಶ್ವರ ದೇವಸ್ಥಾನದ ಬಳಿಗೆ ಬಂದಿರುವ ಬಗ್ಗೆ ಅರಿವಾಗಿದ್ದು ಬಳಿಕ ಸ್ಥಳೀಯರು ಮನೆಯ ದಾಳಿ ದಾರಿ ತೋರಿಸಿದರು. ನನ್ನೂರಿನ ಮಹಾ ಗಣಪತಿಯನ್ನು ಸ್ಮರಿಸಿದೆ. ಹಾಗಾಗಿ ಮರಳಲು ಸಾಧ್ಯವಾಯಿತು ಎಂದು ವಿವೇಕಾನಂದ ತಿಳಿಸಿದರು.
ವಿವೇಕಾನಂದ ಪತ್ತೆಯಾದ ವಿಷಯ ಗೊತ್ತಾಗುತ್ತಿದ್ದಂತೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಶುಕ್ರವಾರ ಮಾಜಿ ಶಾಸಕ ಗೋಪಾಲ್ ಪೂಜಾರಿ ಸಹ ಅವರ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದ್ದರು.
ವಿವೇಕಾನಂದ ಅವರಿಗೆ ಕೆಲ ಸಮಯದಿಂದ ಅನಾರೋಗ್ಯ ಕಾಡುತ್ತಿತ್ತು. ಆದ್ದರಿಂದ ಕಾಡಿನಿಂದ ಬರಲು ಸಾಧ್ಯವಾಗಿರಲಿಲ್ಲ. ಸಂಜೆ ಆಗುತ್ತಿದ್ದಂತೆ ಮರದ ಬುಡ ಮತ್ತು ಕಲ್ಲು ಬಂಡೆಯ ಮೇಲೆ ವಿಶ್ರಾಂತಿ ಪಡೆಯುತ್ತಿದ್ದರು. ನಾಯಿ ಸಹ ಅವರ ಜೊತೆ ಇರುತ್ತಿತ್ತು. ಕಾಡಿನಲ್ಲಿ ಸಿಗುತ್ತಿದ್ದ ಹಣ್ಣು, ಕಾಯಿಗಳನ್ನು ತಿನ್ನುತ್ತಾ ಅಲ್ಲಿ ಹರಿಯುತ್ತಿದ್ದ ನೀರನ್ನು ಕುಡಿಯುತ್ತಿದ್ದರು. ನಾಯಿ ಸಹ ಬಳಲಿದೆ.