ಬೆಂಗಳೂರು :
ಉದ್ಯಮಿಗೆ ಎಂಎಲ್ಎ ಟಿಕೆಟ್ ನೀಡುವುದಾಗಿ ವಂಚಿಸಿರುವ ಆರೋಪದಲ್ಲಿ ಬಂಧಿತರಾಗಿರುವ ಚೈತ್ರಾ ಅವರ ಹೆಸರಿನ ಜೊತೆ ಕುಂದಾಪುರವನ್ನು ಉಲ್ಲೇಖಿಸಿ ಸುದ್ದಿ ಪ್ರಸಾರ, ಅಭಿಪ್ರಾಯ ವ್ಯಕ್ತಪಡಿಸುವುದನ್ನು ಮತ್ತು ಪ್ಯಾನೆಲ್ ಚರ್ಚೆ ನಡೆಸುವುದನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಬೆಂಗಳೂರು ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
ದೇವಾಲಯ, ಪ್ರಕೃತಿ ಸೊಬಗಿನ ಊರಾಗಿರುವ ಕುಂದಾಪುರ ಹೆಸರು ಆರೋಪಿಯೊಬ್ಬರ ಹೆಸರಿನ ಕೊನೆಯ ಭಾಗವಾಗಿರುವ ಕಾರಣ ಹಾಳಾಗಬಾರದು. ಕುಂದಾಪುರ ಎಂದು ಮಾಧ್ಯಮಗಳಲ್ಲಿ ಉಲ್ಲೇಖಿಸುವುದರಿಂದ ಆ ತಾಲೂಕಿನ ಹೆಸರಿಗೆ ಧಕ್ಕೆಯಾಗುತ್ತದೆ. ಕುಂದಾಪುರ ನಿವಾಸಿಗಳಿಗೆ ಅವಮಾನವಾಗುತ್ತದೆ. ಈ ಘಟನೆಯಿಂದ ಅಲ್ಲಿನ ಭವಿಷ್ಯದ ಪೀಳಿಗೆಯನ್ನು ಕೆಟ್ಟ ದೃಷ್ಟಿಯಿಂದ ನೋಡುವಂತಾಗಬಹುದು. ಆದ್ದರಿಂದ ಮಾಧ್ಯಮಗಳು ಕುಂದಾಪುರ ಎಂದು ಉಲ್ಲೇಖಿಸಿರುವ ಸುದ್ದಿ, ವಿಡಿಯೋ, ಲೇಖನ, ಪೋಸ್ಟಿಂಗ್ ಗಳನ್ನು ಶಾಶ್ವತವಾಗಿ ತೆಗೆದುಹಾಕುವಂತೆ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಿಗೆ ಸೂಚಿಸಬೇಕು. ಅದೇ ರೀತಿ ಚೈತ್ರಾರನ್ನು ಉಲ್ಲೇಖಿಸುವಾಗ ಕುಂದಾಪುರ ಎಂದು ಬಳಸದಂತೆ ಮಾಧ್ಯಮಗಳನ್ನು ನಿರ್ಬಂಧಿಸಬೇಕು ಎಂದು ಬಸವನಗುಡಿಯಲ್ಲಿ ಕಾಫಿ ಶಾಪ್ ನಡೆಸುತ್ತಿರುವ ಮೂಲತಃ ಕುಂದಾಪುರದವರಾದ ಗಣೇಶ ಶೆಟ್ಟಿ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಬಗ್ಗೆ ವಿಚಾರಣೆ ನಡೆಸಿರುವ ನ್ಯಾಯಾಲಯ ಮುಂದಿನ ವಿಚಾರಣೆವರೆಗೆ ಕುಂದಾಪುರ ಹೆಸರು ಬಳಸಿಕೊಂಡು ಚೈತ್ರಾ ಅವರ ಬಗ್ಗೆ ಸುದ್ದಿ ಪ್ರಸಾರ, ಪ್ರಕಟ ಹಾಗೂ ಚರ್ಚೆ ನಡೆಸಿದಂತೆ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿ ಸಮನ್ಸ್ ಜಾರಿಗೊಳಿಸಿದೆ.