ಅಥಣಿ :
ಪೌರಕಾರ್ಮಿಕರು ಕಾಯಕವೇ ಕೈಲಾಸ ಎಂಬ ರೀತಿಯಲ್ಲಿ ಮಾಡುವ ಅವರ ಕೆಲಸದಿಂದ ಇಡೀ ಊರಿಗೆ ಉತ್ತಮ ಹೆಸರು ಬರುತ್ತಿದೆ. ಪೌರಕಾರ್ಮಿಕರ ಕಾಯಕ ನಿಷ್ಠೆ ಇತರರಿಗೂ ಮಾದರಿಯಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು
ಪಟ್ಟಣದ ಪುರಸಭೆಯಲ್ಲಿ ಇಂದು ಬೆಳಗ್ಗೆ ಜರುಗಿದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದರು.
ಪೌರ ಕಾರ್ಮಿಕರು ಪಟ್ಟಣದ ಸ್ವಚ್ಛತೆಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರು ಕಾಯಕವೇ ಕೈಲಾಸವೆಂಬ ಬಸವಣ್ಣನವರ ತತ್ವದಂತೆ ತಮ್ಮ ಕಾಯಕವನ್ನು ನಿಷ್ಠೆ, ಪ್ರಾಮಾಣಿಕತೆಯಿಂದ ಮಾಡುತ್ತಿದ್ದಾರೆ. ಆದ್ದರಿಂದ ಈ ಎಲ್ಲ ಕಾಯಕ ಜೀವಿಗಳನ್ನು ನಾನು ಮನಪೂರ್ವಕವಾಗಿ ಗೌರವಿಸಿ, ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಪಟ್ಟಣದ ಸ್ವಚ್ಛತೆಗೆ ಸಾರ್ವಜನಿಕರು ಸಹಕಾರ ನೀಡಬೇಕು. ಎಲ್ಲೆಂದರಲ್ಲಿ ಗಲೀಜು ಮಾಡದೇ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಮಾತನಾಡಿ, ಕೆರೆಗಳು, ಹಳ್ಳಗಳು, ಒಳಚರಂಡಿ, ರಸ್ತೆಗಳ ಸ್ವಚ್ಛತೆಗೆ ಕ್ರಮ ಕೈಗೊಂಡಿದ್ದು, ಕೆಲವೇ ದಿನಗಳಲ್ಲಿ ಉತ್ತಮ ಕೆಲಸ ಮಾಡಿ ತೋರಿಸಿದ್ದಾರೆ. ಅವರಿಗೆ ಪುರಸಭೆ ಸದಸ್ಯರು, ಸಿಬ್ಬಂದಿ ಸಹಕಾರ ನೀಡಬೇಕು. ಪುರಸಭೆಯಿಂದ ಇದೇ ರೀತಿ ಉತ್ತಮ ಕೆಲಸಗಳು ಆಗುತ್ತ ಹೋದರೆ, ಮುಂದೆ ಅಥಣಿ ಪುರಸಭೆ ಮಾದರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ, ತಹಸೀಲ್ದಾರ್ ರಾಜೇಶ ಬುರ್ಲಿ, ಡಿವೈಎಸ್ಪಿ ಶ್ರೀಪಾದ ಜಲ್ದೆ, ಸಿಪಿಐ ರವೀಂದ್ರ ನಾಯ್ಕೋಡಿ, ನಿವೃತ್ತ ಪ್ರಾಂಶುಪಾಲ ಅಣ್ಣಾಸಾಬ ಅಡಹಳ್ಳಿ ಉಪಸ್ಥಿತರಿದ್ದರು. ಪುರಸಭೆ ಸದಸ್ಯರು, ಪುರಸಭೆ ಸಿಬ್ಬಂದಿ, ಸಾರ್ವಜನಿಕರು ಪಾಲ್ಗೊಂಡಿದ್ದರು.