ವಾರಾಣಸಿ:
ದೇಶದ ಪ್ರಮುಖ ತೀರ್ಥ ಕ್ಷೇತ್ರಗಳಲ್ಲಿ ಒಂದಾದ ವಾರಾಣಸಿಯಲ್ಲಿ ಅಂತರರಾಷ್ಟ್ರೀಯ ದರ್ಜೆಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಗೊಳ್ಳುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಇಂದು ಶಿಲಾನ್ಯಾಸ ನೆರವೇರಿಸಿದ್ದಾರೆ.
ಕಾನ್ಪುರ ಹಾಗೂ ಲಖನೌ ಬಳಿಕ ಉತ್ತರ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಮೂರನೇ ಅಂತರರಾಷ್ಟ್ರೀಯ ಸ್ಟೇಡಿಯಂ ಇದಾಗಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ರೋಜರ್ ಬಿನ್ನಿ, ಉಪಾಧ್ಯಕ್ಷ ರಾಜೀವ್ ಶುಕ್ಲಾ, ಕಾರ್ಯದರ್ಶಿ ಜಯ್ ಶಾ, ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಸುನಿಲ್ ಗಾವಸ್ಕರ್, ರವಿಶಾಸ್ತ್ರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕ್ರೀಡಾಂಗಣ ನಿರ್ಮಿಸಲು ಭೂಸ್ವಾಧೀನಕ್ಕಾಗಿ ಉತ್ತರ ಪ್ರದೇಶ ಸರ್ಕಾರವು ₹121 ಕೋಟಿ ಖರ್ಚು ಮಾಡಿದೆ. ಬಿಸಿಸಿಐ ₹330 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಿಸಲಿದೆ.
ವಿಶಿಷ್ಟತೆಗಳು:
ರಜತಲಾಬ್ ಪ್ರದೇಶದ ರಿಂಗ್ ರಸ್ತೆಯ ಸಮೀಪ ಕ್ರೀಡಾಂಗಣ ತಲೆ ಎತ್ತಲಿದೆ. ಕಾಶಿಯೆಂದೂ ಕರೆಯಲಾಗುವ ವಾರಾಣಸಿಯ ಸ್ನಾನ ಘಟ್ಟಗಳ ಮೆಟ್ಟಿಲುಗಳ ಮಾದರಿಯಲ್ಲಿ ಪ್ರೇಕ್ಷಕರ ಗ್ಯಾಲರಿ ನಿರ್ಮಾಣವಾಗಲಿದೆ.
ಮೈದಾನದ ದೀಪದ ಸ್ತಂಭಗಳು ಶಿವನ ಶ್ರಿಶೂಲದ ವಿನ್ಯಾಸವನ್ನು ಹೋಲುತ್ತದೆ. ಕಟ್ಟಡ ವಿನ್ಯಾಸವನ್ನು ಡಮರುಗದ ಮಾದರಿಯಲ್ಲಿ ನಿರ್ಮಿಸಲಾಗುತ್ತದೆ. ಬಿಲ್ವಾ ಆಕಾರವನ್ನು ಹೋಲುವ ವಿನ್ಯಾಸಗಳೂ ಇಲ್ಲಿರಲಿವೆ.
30 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, 30,000 ಪ್ರೇಕ್ಷಕರ ಆಸನ ಸಾಮರ್ಥ್ಯ ಹೊಂದಿರಲಿದೆ.