ಬೆಳಗಾವಿ :
ಪ್ರಸ್ತುತ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾತ್ರ ನಾಯಿ ಸಂತಾನ ನಿಯಂತ್ರಣಾ ಕಾರ್ಯಕ್ರಮ ಅನುಷ್ಠಾನಗೊಳಿಸಿದ್ದು, ಇದೇ ರೀತಿಯಲ್ಲಿ ಜಿಲ್ಲೆಯ ಇನ್ನುಳಿದ ಎಲ್ಲ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಾರ್ಯಕ್ರಮ ಅನುಷ್ಠಾನಗೊಳಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಹರ್ಷಲ್ ಭೋಯರ್ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಪ್ರಾಣಿದಯಾ ಸಂಘದ ಜಿಲ್ಲಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ನಗರಗಳಲ್ಲಿರುವ ಕಸ ವಿಲೇವಾರಿ ಘಟಕಗಳು ಹಾಗೂ ಹೋಟೆಲ್ ಗಳ ಹತ್ತಿರ ಹೆಚ್ಚಾಗಿ ನಾಯಿಗಳು ಕಂಡು ಬರುತ್ತಿದ್ದು, ಸಾರ್ವಜನಿಕರಿಗೆ ಮಕ್ಕಳಿಗೆ ತೊಂದರೆಯಾಗುತ್ತಿದೆ. ಕೂಡಲೇ ಇದಕ್ಕೆ ಮಹಾನಗರ ಪಾಲಿಕೆ ವತಿಯಿಂದ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಪ್ರಾಣಿ ದಯಾ ಸಂಘದ ಅಧಿಕಾರೇತರ ಸದಸ್ಯರು ವಿನಂತಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರ್ಷಲ್ ಭೋಯರ್ ಅವರು ಸಂಬಂಧಿಸಿದ ನಾಯಿಗಳ ಸಂತಾನ ನಿಯಂತ್ರಣಕ್ಕೆ ಮಾಹಿತಿಗಳನ್ನು ಕಲೆಹಾಕಿ ಕೂಡಲೇ ಸಾರ್ವಜನಿಕರಿಗೆ ಸ್ಪಂದಿಸಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಮಾತನಾಡಿದ ಪಾಲಿಕೆ ಅಧಿಕಾರಿಗಳು ಬೀದಿ ನಾಯಿಗಳ ಸಂತಾನ ನಿಯಂತ್ರಣಕ್ಕೆ ನಗರದಲ್ಲಿ ಪ್ರತಿದಿನ 7 ರಿಂದ 8 ಬೀದಿ ನಾಯಿಗಳನ್ನು ಹಿಡಿಯಲಾಗುತ್ತಿದೆ. ಸಾರ್ವಜನಿಕರ ದೂರಿನ ಅನ್ವಯ ಕೂಡಲೇ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಪುರಸಭೆಗಳ ವ್ಯಾಪ್ತಿಯಲ್ಲಿ ನಾಯಿಗಳ ಸಂತತಿ ನಿಯಂತ್ರಣಕ್ಕೆ ತಾಲೂಕಾ ಮಟ್ಟದಲ್ಲಿ ಕಮಿಟಿ ರಚಿಸಲಾಗಿದೆ. ಡಾಗ್ ಕ್ಯಾಚರ್ಸ್ ಗಳನ್ನು ಕಳುಹಿಸಿ ಪಂಚಾಯತ್ ಗಳಿಗೆ ಸೂಚಿಸುವುದರ ಮೂಲಕ ನಾಯಿಗಳ ಸಂತತಿ ನಿಯಂತ್ರಣಕ್ಕೆ ಕ್ರಮ ವಹಿಸಲಾಗಿದೆ ಎಂದು ಪಶು ಪಾಲನಾ ಇಲಾಖೆಯ ತಾಲೂಕಾ ಸಹಾಯಕ ನಿರ್ದೇಶಕರು ವಿವರಿಸಿದರು.
ಕಳೆದ ವರ್ಷ ಪುಣ್ಯಕೋಟಿ ದತ್ತು ಯೋಜನೆಯಡಿ ಗೋಶಾಲೆಗಳಿಗೆ ಈಗಾಗಲೇ ಪ್ರಸಕ್ತ ಸಾಲಿನ ಅನುದಾನ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ ಒಂದು ಸರ್ಕಾರಿ ಗೋಶಾಲೆ ಹಾಗೂ ನೋಂದಣಿಯಾದ ಒಟ್ಟು 14 ಇತರೆ ಸಂಸ್ಥೆಗಳ ಗೋಶಾಲೆಗಳಿವೆ.
ಸರ್ಕಾರಿ ಮಾರ್ಗಸೂಚಿಗಳು ಪ್ರಕಾರ ಒಟ್ಟು 50 ಜಾನುವಾರುಗಳು ಹೊಂದಿರುವ ಗೋಶಾಲೆಗಳ ಮಾತ್ರ ನೋಂದಣಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ರಾಜೀವ್ ಕೂಲೇರ್ ಅವರು ತಿಳಿಸಿದರು.
ಪ್ರಾಣಿ ದಯಾ ಸಂಘದ ಸದಸ್ಯ ರಾಜೇಂದ್ರ ಕಟಾರಿಯಾ, ಜಿಲ್ಲಾ ನಗರಾಭಿವೃದ್ಧಿ ಯೋಜನಾ ಕೋಶದ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ್ ಕಲಾದಗಿ, ಪಶು ಪಾಲನಾ ಇಲಾಖೆಯ ತಾಲೂಕಾ ವೈದ್ಯಾಧಿಕಾರಿಗಳು, ಸಿಬ್ಬಂದಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.