ಕಲಬುರಗಿ :
ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ-2023 ಅಂಗವಾಗಿ ಶನಿವಾರ ಕಲಬುರಗಿ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಷ್ಟ್ರಧ್ವಜಾರೋಹಣ ಕಾರ್ಯಕ್ರಮಕ್ಕೂ ಮುನ್ನ ಹೈದ್ರಾಬಾದ್ ಕರ್ನಾಟಕ ವಿಮೋಚನೆಯ ರೂವಾರಿಯಾಗಿರುವ ಉಲ್ಕಿನ ಮನುಷ್ಯ ಸರ್ದಾರ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ನಂತರ ನೆರೆದ ಜನಸ್ತೋಮದತ್ತ ಕೈಬೀಸಿ ಕಲ್ಯಾಣ ಕರ್ನಾಟಕ ಉತ್ಸವದ ಶುಭಕೋರಿದರು.
ಕಲಬುರಗಿ ನಗರದ ಎಸ್.ವಿ.ಪಿ. ವೃತ್ತದಲ್ಲಿ ಪಟೇಲ್ ಅವರ ಮೂರ್ತಿಗೆ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, .ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ.ಅಜಯ್ ಸಿಂಗ್, ಸೇರಿ ಜಿಲ್ಲೆಯ ಇತರೆ ಶಾಸಕರು, ಜನಪ್ರತಿನಿಧಿಗಳೊಂದಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.
ಶಾಸಕರಾದ ಬಿ.ಆರ್.ಪಾಟೀಲ, ಎಂ.ವೈ.ಪಾಟೀಲ, ಅಲ್ಲಮಪ್ರಭು ಪಾಟೀಲ, ಎಂ.ಎಲ್.ಸಿಗಳಾದ ಶಶೀಲ ನಮೋಶಿ, ತಿಪ್ಪಣಪ್ಪ ಕಮಕನೂರ, ಕಲಬುರಗಿ ಮಹಾನಗರ ಪಾಲಿಕೆ ಮಹಾಪೌರ ವಿಶಾಕ ಧರ್ಗಿ, ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ, ಕೆ.ಕೆ.ಆರ್.ಡಿ.ಬಿ. ಕಾರ್ಯದರ್ಶಿ ಅನಿರುದ್ಧ ಶ್ರವಣ ಪಿ., ಐ.ಜಿ.ಪಿ. ಅಜಯ್ ಹಿಲೋರಿ, ಡಿ.ಸಿ. ಬಿ.ಫೌಜಿಯಾ ತರನ್ನುಮ್, ಕಲಬುರಗಿ ನಗರ ಪೊಲೀಸ್ ಆಯುಕ್ತ ಚೇತನ್ ಆರ್., ಡಿ.ಸಿ.ಪಿ. ಕನಿಕಾ ಸಿಕ್ರಿವಾಲ್ ಮತ್ತಿತರಿದ್ದರು.
ಹೈದ್ರಾಬಾದ್ ಕರ್ನಾಟಕ ಇತಿಹಾಸ ರಚನಾ ಸಮಿತಿ ಸದಸ್ಯ ಕಾರ್ಯದರ್ಶಿ ಲಕ್ಣ್ಮಣ ದಸ್ತಿ ಅವರು, ಹೈದ್ರಾಬಾದ ಕರ್ನಾಟಕ ವಿಮೋಚನೆ ಹೋರಾಟ ಕುರಿತು ಮಾತನಾಡಿದರು.
ಸರ್ದಾರ್ ವಲ್ಲಭಭಾಯಿ ಪಟೇಲ್ ಮೂರ್ತಿಗೆ ಮಾಲಾರ್ಪಣೆ ಮಾಡಲು ಆಗಮಿಸಿದ ಸಿ.ಎಂ. ಅವರಿಗೆ ಕಲಾವಿದರು ಡೊಳ್ಳು, ವೀರಗಾಸೆ, ನಂದಿ ಧ್ವಜ, ಲಂಬಾಣಿ ನೃತ್ಯ, ಗರುಡ ಗೊಂಬೆ, ಕರಡಿ ಮಜಲು, ಕಣಿ ಹಲಗಿ, ಕೊಂಬು ಕಹಳೆಯೊಂದಿಗೆ ಭರ್ಜರಿ ಸ್ವಾಗತ ಕೋರಿದರು.
*ಕಲ್ಯಾಣ ಕರ್ನಾಟಕದ ಉತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿದ ಭಾಷಣದ ಪೂರ್ಣಪಾಠ*
1. ಕಲ್ಯಾಣ ಕರ್ನಾಟಕ ವಿಮೋಚನೆಯ ಅಮೃತ ಮಹೋತ್ಸವ ಹಾಗೂ ಕಲ್ಯಾಣ ಕರ್ನಾಟಕಕ್ಕೆ ಸಂವಿಧಾನದಲ್ಲಿ ವಿಶೇಷ ಸ್ಥಾನಮಾನ ಕಲ್ಪಿಸುವ 371 (ಜೆ) ವಿಧಿ ಜಾರಿಯ ದಶಮಾನೋತ್ಸವದ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯಗಳು.
2. ಇಂತಹ ವಿಶೇಷ ಸಂದರ್ಭದಲ್ಲಿ ರಾಷ್ಟ್ರಧ್ವಜಾರೋಹಣ ಮಾಡುವ ಅವಕಾಶ ಲಭಿಸಿದ್ದು ಧನ್ಯತೆಯ ಭಾವ ಮೂಡಿಸಿದೆ. ಹಾಗೂ ಈ ಭಾಗದ ಅಭಿವೃದ್ಧಿಯ ಸಂಕಲ್ಪವನ್ನು ಇನ್ನಷ್ಟು ಬಲಪಡಿಸಿದೆ.
3. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದರೂ ಹೈದರಾಬಾದ್ ನಿಜಾಮರ ಆಳ್ವಿಯಲ್ಲಿದ್ದ ಬೀದರ್, ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಸ್ವಾತಂತ್ರ್ಯದ ಬೆಳಕು ಬಂದಿದ್ದು ಒಂದು ವರ್ಷದ ನಂತರ.
4. ರಮಾನಂದ ತೀರ್ಥರೊಂದಿಗೆ ಅಪ್ಪಾರಾವ್ ಪಾಟೀಲ್, ಚಂದ್ರಶೇಖರ್ ಪಾಟೀಲ್ ಸೇರಿಕೊಂಡು ಚಳವಳಿಯನ್ನು ಇನ್ನಷ್ಟು ತೀವ್ರಗೊಳಿಸಿದರು. ಹೈದರಾಬಾದ್ ಕರ್ನಾಟಕ ವಿಮೋಚನೆ ಹೊಂದಬೇಕಾದರೆ ಒಗ್ಗಟ್ಟಿನ ಹೋರಾಟ ಅಗತ್ಯ ಎಂದು ಜನರಿಗೆ ಮನವರಿಕೆ ಮಾಡಿಕೊಡತೊಡಗಿದರು.
5. ಆ ಸಂದರ್ಭದಲ್ಲಿ ಸರದಾರ ಶರಣಗೌಡ ಇನಾಂದಾರ, ರಾಜಾ ವೆಂಕಟಪ್ಪ ನಾಯಕ, ದತ್ತಾತ್ರೇಯ ಅವರಾದಿ, ಅಳವಂಡಿ ಶಿವಮೂರ್ತಿಸ್ವಾಮಿ, ಮಟಮಾರಿ ನಾಗಪ್ಪಾ, ನಾರಾಯಣರಾವ್ ಕಾನಿಹಾಳ, ರಾಮಚಂದ್ರ ವೀರಪ್ಪ, ಎ.ವಿ. ಪಾಟೀಲ್, ಆರ್.ವಿ. ಬಿಡ್ಡಪ್ಪ, ಹಕ್ಕಿಕತರಾವ್ ಚಿಟಗುಪ್ಪಕರ, ಚಂದ್ರಶೇಖರ್ ಪಾಟೀಲ್, ರಾಮಾಚಾರ, ಡಾ.ಚರ್ಚಿಹಾಳ ಮಠ, ಅಮರಸಿಂಹ ರಾಠೋಡ, ಪುಂಡಲಿಕಪ್ಪ ಜ್ಞಾನಮೂಠೆ, ಗೋವಿಂದ್ ಭಾಯ್, ಪಿ.ವಿ, ನರಸಿಂಹರಾವ್, ಜೆ.ಕೆ. ಪ್ರಾಣೇಶಾಚಾರ್ಯ, ಡಾ. ಮೇಲುಕೋಟಿ, ಪ್ರೊ. ಭಾವುಸಾಹೇಬ್ ದೇವುಳಗಾಂವಕರ್, ಡಾ.ವಿ.ಪಿ. ದೇವುಳಗಾಂವಕರ್, ಮಲ್ಲಪ್ಪ ಕೊಲ್ಲೂರು, ಮುಂಡರಗಿ ಭೀಮರಾಯ, ಪ್ರೇಮಿಲಾಬಾಯಿ ಪಟ್ಟಣಕರ್, ಚನ್ನಬಸಪ್ಪ ಕುಳಗೇರಿ, ದಾಸರಾವ್ ಮುಕ್ತೇದಾರ್, ಪಂಡಿತ್ ತಾರಾನಾಥ್, ಶಂಕರಶೆಟ್ಟಿ ಪಾಟೀಲ್ ಕಮಲಾಪುರ, ಎನ್.ಕೆ. ಸರಾಫ್, ಚಟ್ನಳ್ಳಿ ವಿರುಪಾಕ್ಷಪ್ಪ, ವೀರೂಪಾಕ್ಷಪ್ಪ ರಾಜನಕೋಳೂರು, ಜಯರಾಮಚಾರ್ಯ ತೀರ್ಥನಕೇಸರಿ, ಅನ್ನದಾನಯ್ಯ ಪುರಾಣಿಕ್, ನರಸಿಂಗ್ರಾವ್ ಮಾನವಿ, ಕಾಶೀನಾಥ್ ರಾವ್, ಜಗನ್ನಾಥ್ರಾವ್ ಚಂಡ್ರಕಿ, ವಿಶ್ವನಾಥರೆಡ್ಡಿ ಮುದ್ನಾಳ್, ವಿದ್ಯಾಧರ ಗುರುಜೀ, ಭೀಮರಾವ್ ಪಟವರ್ಧನ್, ವಿರುಪಾಕ್ಷಯ್ಯ ಸ್ವಾಮಿ, ನೀಲಕಂಠಪ್ಪ ಪಾಟೀಲ್, ವೀರಶೆಟ್ಟಪ್ಪ ವನಕೆ, ನರಸಿಂಗರಾವ್ ಬಾಚಾ, ವಿಜಯಕುಮಾರ ಚಿಟಗುಪ್ಪಾ ಸೇರಿದಂತೆ ಇನ್ನೂ ಅನೇಕ ಹೋರಾಟಗಾರರು ನಿಜಾಮನ ವಿರುದ್ದ ಸೆಡ್ಡು ಹೊಡೆದು ನಿಂತರು.
6. ಸ್ವಾಮಿ ರಮಾನಂದ ತೀರ್ಥರು ಹಾಗೂ ಅಸಂಖ್ಯ ಹೋರಾಟಗಾರರ ತ್ಯಾಗ, ಬಲಿದಾನಗಳ ಫಲವಾಗಿ ಹಾಗೂ ಸರ್ದಾರ್ ವಲ್ಲಭ ಭಾಯಿ ಪಟೇಲರ ಸಂಕಲ್ಪಶಕ್ತಿಯಿಂದಾಗಿ ಹೈದರಾಬಾದ್ ಕರ್ನಾಟಕ ನಿಜಾಮರ ಆಳ್ವಿಕೆಯಿಂದ ಮುಕ್ತವಾಗಿ ಭಾರತದ ಒಕ್ಕೂಟಕ್ಕೆ ಸೇರ್ಪಡೆಯಾಯಿತು.
7. ಇದಕ್ಕಾಗಿ ಹೋರಾಡಿದ ಎಲ್ಲ ಮಹನೀಯರನ್ನು ನಾನು ಈ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸ್ಮರಿಸುತ್ತೇನೆ.
8. ಕನ್ನಡ ಭಾಷೆ ಸಾಹಿತ್ಯ, ಸಂಸ್ಕøತಿ, ಕಲೆ, ಧರ್ಮ ಮೊದಲಾದ ಕ್ಷೇತ್ರಗಳಿಗೆ ಗಮನಾರ್ಹ ಕೊಡುಗೆ ನೀಡಿದ ಈ ಪ್ರದೇಶ ವಿಶ್ವವೇ ನಿಬ್ಬೆರಗಾಗುವಂತಹ ಜಗಜ್ಯೋತಿ ಬಸವಣ್ಣನವರು ಸಾಮಾಜಿಕ ಕ್ರಾಂತಿಗೆ ಮತ್ತು ಸಂಸದೀಯ ಪ್ರಜಾಪ್ರಭುತ್ವದ ಮಾದರಿ ಆಡಳಿತಕ್ಕೆ ಭದ್ರ ಬುನಾದಿ ಹಾಕಿದ ಪವಿತ್ರ ಭೂಮಿಯಾಗಿದೆ. ಕಲ್ಯಾಣ ಚಾಲುಕ್ಯರು, ಬಹಮನಿ ಸುಲ್ತಾನರು, ರಾಷ್ಟ್ರಕೂಟರ ಆಳ್ವಿಕೆಯ ಭವ್ಯ ಪರಂಪರೆ ಹೊಂದಿದ ಪ್ರದೇಶ ಇದಾಗಿದೆ.
9. ಕನ್ನಡದ ಮೊಟ್ಟ ಮೊದಲ ಉಪಲಬ್ಧ ಗ್ರಂಥ “ಕವಿರಾಜ ಮಾರ್ಗ” ನೀಡಿದ ಅಮೋಘವರ್ಷ ನೃಪತುಂಗನ ನಾಡು ಇದಾಗಿದೆ. ಸೂಫಿ-ಸಂತರ ಈ ಬೀಡು, ಕೋಮು ಸೌಹಾರ್ದತೆಗೆ ಹೆಸರುವಾಸಿಯಾಗಿದೆ.
10. ಇತ್ತೀಚೆಗೆ ನಡೆದ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನತೆ ನಮಗೆ ಅಭೂತಪೂರ್ವ ಬಹುಮತ ನೀಡಿ ರಾಜ್ಯದಲ್ಲಿ “ಜನಪರ ಸರ್ಕಾರ” ಸ್ಥಾಪಿಸಲು ಕಾರಣೀಭೂತರಾಗಿದ್ದಾರೆ. ಇದಕ್ಕಾಗಿ ಕಲ್ಯಾಣ ಕರ್ನಾಟಕ ಭಾಗ ಸೇರಿದಂತೆ ನಾಡಿನ ಜನತೆಗೆ ಧನ್ಯವಾದ ಅರ್ಪಿಸಲು ಇಚ್ಛಿಸುತ್ತೇನೆ.
11. ಪ್ರಾದೇಶಿಕ ಅಸಮಾನತೆ ನಿವಾರಣೆ ನಿಟ್ಟಿನಲ್ಲಿ ನಿಜಾಮನ ಆಳ್ವಿಕೆಯಲ್ಲಿದ್ದ ಕಲಬುರಗಿ, ಬೀದರ ಹಾಗೂ ರಾಯಚೂರು, ಹಾಗೂ ಮದ್ರಾಸ್ ಪ್ರಾಂತ್ಯದಲ್ಲಿನ ಬಳ್ಳಾರಿ ಜಿಲ್ಲೆ ಒಳಗೊಂಡಂತೆ ದಿ. ಎನ್. ಧರ್ಮಸಿಂಗ್ ವರದಿಯನ್ವಯ 1990ರಲ್ಲಿ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪಿಸಲಾಗಿತ್ತು. ಆ ಮೂಲಕ ಈ ಭಾಗದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ರಾಜ್ಯ ಸರ್ಕಾರ ವಿಶೇಷ ನಿಧಿ ನೀಡಲಾಗಿತ್ತಾದರೂ ನಿರೀಕ್ಷಿತ ಮಟ್ಟದಲ್ಲಿ ಸಾಕಾರವಾಗಲಿಲ್ಲ.
12. ಹೈದರಾಬಾದ್ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡಲು ಸಂವಿಧಾನದ 371ನೇ ಪರಿಚ್ಛೇದಕ್ಕೆ ತಿದ್ದುಪಡಿಗೆ ಒತ್ತಾಯಿಸಿ ನಡೆದ ಹೋರಾಟಕ್ಕೆ ಇದು ನಾಂದಿಯಾಯಿತು.
13. ಹಲವು ದಶಕಗಳ ತೀವ್ರ ಹೋರಾಟ ಹಾಗೂ ಈ ಭಾಗದ ಹಿರಿಯ ರಾಜಕಾರಣಿ, ಮಾಜಿ ಕೇಂದ್ರ ಸಚಿವರಾಗಿದ್ದ ಡಾ. ಮಲ್ಲಿಕಾರ್ಜುನ್ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿಗಳಾಗಿದ್ದ ದಿ.ಎನ್. ಧರಂಸಿಂಗ್ ಅವರ ಅವಿರತ ಪ್ರಯತ್ನದಿಂದಾಗಿ ಕಲಂ 371ಕ್ಕೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ನಿರ್ಧರಿಸಿತು.
14. ಆದರೆ, ಎನ್.ಡಿ.ಎ ಸರ್ಕಾರ ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಪ್ರಸ್ತಾವನೆಯನ್ನು ತಿರಸ್ಕರಿಸಿತು. ಆದರೆ, ಡಾ. ಮಲ್ಲಿಕಾರ್ಜುನ ಖರ್ಗೆ ಅವರ ನಿರಂತರ ಪ್ರಯತ್ನದಿಂದ ಮುಂದೆ ಅಧಿಕಾರಕ್ಕೆ ಬಂದ ಮನಮೋಹನ್ ಸಿಂಗ್ ನೇತೃತ್ವದ ಅಂದಿನ ಯು.ಪಿ.ಎ ಸರ್ಕಾರ ಡಿಸೆಂಬರ್ 2012ರಲ್ಲಿ ಸಂವಿಧಾನ ಕಲಂ 371 ಕ್ಕೆ ತಿದ್ದುಪಡಿ ತಂದು 371 (ಜೆ) ಪರಿಚ್ಚೇದ ಸೇರ್ಪಡೆ ಮಾಡಲಾಯಿತು. ರಾಷ್ಟ್ರಪತಿಗಳ ಅಂಕಿತದೊಂದಿಗೆ ಇದು ದಿನಾಂಕ:01-01-2013 ರಿಂದ ಜಾರಿಗೆ ಬಂತು.
15. ಸಂವಿಧಾನದಲ್ಲಿ 371 (ಜೆ) ಪರಿಚ್ಛೇದ ಸೇರ್ಪಡೆಯೊಂದಿಗೆ ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ದೊರೆತಂತಾಯಿತು. 2013 ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹೈದ್ರಾಬಾದ್ ಪ್ರದೇಶ ಅಭಿವೃದ್ಧಿ ಮಂಡಳಿ ಸ್ಥಾಪಿಸಿ ಈ ಭಾಗದ ಅಭಿವೃದ್ಧಿಗೆ ಹೊಸ ವೇಗ ನೀಡುವ ಪ್ರಯತ್ನಕ್ಕೆ ಚಾಲನೆ ನೀಡಲಾಯಿತು. ಜೊತೆಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಜಾರಿ ಮಾಡುವ ಮೂಲಕ ಶತಮಾನಗಳಿಂದ ಹಿಂದುಳಿದ ಈ ಭಾಗದ ಜನರ ಬದುಕಿನಲ್ಲಿ ಹಲವು ಬದಲಾವಣೆಗಳಿಗೆ ಕಾರಣವಾಯಿತು.
16. ಪ್ರದೇಶದ ಅಭಿವೃದ್ಧಿ ವೆಚ್ಚಕ್ಕಾಗಿ ನಿಧಿಯ ಸಮಾನ ಹಂಚಿಕೆ, ಈ ಪ್ರದೇಶಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ವೃತ್ತಿಪರ ತರಬೇತಿ ಸಂಸ್ಥೆಗಳಲ್ಲಿ ಸೀಟುಗಳ ಮೀಸಲಾತಿ, ಪ್ರದೇಶಕ್ಕೆ ಸೇರಿದ ಅರ್ಹ ವ್ಯಕ್ತಿಗಳಿಗೆ ಪ್ರದೇಶದಲ್ಲಿನ ರಾಜ್ಯ ಸರ್ಕಾರಿ ಹುದ್ದೆಗಳಲ್ಲಿ ಮೀಸಲಾತಿ ಸೌಲಭ್ಯಗಳು ಈ ಕಾಯಿದೆಯಿಂದ ಲಭಿಸಿವೆ.
17. ಸಂವಿಧಾನದಲ್ಲಿ ಆರ್ಟಿಕಲ್ 371 (ಜೆ) ಪರಿಚ್ಛೇದ ಸೇರ್ಪಡೆಯೊಂದಿಗೆ ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ದೊರೆತಂತಾಯಿತು. ಹೈದ್ರಾಬಾದ್ ಪ್ರದೇಶ ಅಭಿವೃದ್ಧಿ ಮಂಡಳಿ ಸ್ಥಾಪಿಸಿ ಈ ಭಾಗದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಯಿತು. ಮುಂದೆ ಮಂಡಳಿಯನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಎಂದು ಪುನರ್ ನಾಮಕರಣ ಮಾಡಲಾಯಿತು.
18. ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ಸಂಬಂಧಿಸಿದಂತೆ ಸಂವಿಧಾನದ ವಿಶೇಷ ಸ್ಥಾನಮಾನಗಳಡಿ ಪ್ರತ್ಯೇಕವಾಗಿ ಸ್ಥಾಪಿಸಲಾಗಿರುವ ಅಭಿವೃದ್ಧಿ ಮಂಡಳಿಯ ಕಾರ್ಯನಿರ್ವಹಣೆಯ ವರದಿಯನ್ನು ಪ್ರತಿವರ್ಷ ರಾಜ್ಯ ವಿಧಾನಸಭೆಯ ಮುಂದೆ ಇಡಲಾಗುವುದು. ಪ್ರದೇಶದ ಅಭಿವೃದ್ಧಿ ವೆಚ್ಚಕ್ಕಾಗಿ ನಿಧಿಯ ಸಮಾನ ಹಂಚಿಕೆ, ಈ ಪ್ರದೇಶಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ವೃತ್ತಿಪರ ತರಬೇತಿ ಸಂಸ್ಥೆಗಳಲ್ಲಿ ಸೀಟುಗಳ ಮೀಸಲಾತಿ, ಪ್ರದೇಶಕ್ಕೆ ಸೇರಿದ ಅರ್ಹ ವ್ಯಕ್ತಿಗಳಿಗೆ ಪ್ರದೇಶದಲ್ಲಿನ ರಾಜ್ಯ ಸರ್ಕಾರಿ ಹುದ್ದೆಗಳಲ್ಲಿ ಮೀಸಲಾತಿ ಸೌಲಭ್ಯಗಳು ಈ ಕಾಯಿದೆಯಿಂದ ಲಭಿಸಿವೆ.
19. ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ಸಂಬಂಧಿಸಿದಂತೆ ಸಂವಿಧಾನದ ವಿಶೇಷ ಸ್ಥಾನಮಾನಗಳಡಿ ಪ್ರತ್ಯೇಕವಾಗಿ ಸ್ಥಾಪಿಸಲಾಗಿರುವ ಅಭಿವೃದ್ಧಿ ಮಂಡಳಿಯ ಕಾರ್ಯನಿರ್ವಹಣೆಯ ವರದಿಯನ್ನು ಪ್ರತಿ ವರ್ಷ ರಾಜ್ಯ ವಿಧಾನಸಭೆಯ ಮುಂದೆ ಇಡಲಾಗುವುದು. ಪ್ರದೇಶದ ಅಭಿವೃದ್ಧಿ ವೆಚ್ಚಕ್ಕಾಗಿ ನಿಧಿಯ ಸಮಾನ ಹಂಚಿಕೆ, ಈ ಪ್ರದೇಶಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ವೃತ್ತಿಪರ ತರಬೇತಿ ಸಂಸ್ಥೆಗಳಲ್ಲಿ ಸೀಟುಗಳ ಮೀಸಲಾತಿ, ಪ್ರದೇಶಕ್ಕೆ ಸೇರಿದ ಅರ್ಹ ವ್ಯಕ್ತಿಗಳಿಗೆ ಪ್ರದೇಶದಲ್ಲಿನ ರಾಜ್ಯ ಸರ್ಕಾರಿ ಹುದ್ದೆಗಳಲ್ಲಿ ಮೀಸಲಾತಿ ಸೌಲಭ್ಯಗಳು ಈ ಕಾಯಿದೆಯಿಂದ ಲಭಿಸಿವೆ.
20. ಸಮಾನತೆಯ ಹೊಸ ಹಾದಿಯಲ್ಲಿ ಸಾಗಿದ ಬುದ್ಧ, ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವ ಮತ್ತು ಆದರ್ಶಗಳನ್ನು ಅಕ್ಷರಶ: ಅಳವಡಿಸಿಕೊಂಡಿರುವ ನಮ್ಮ ಸರ್ಕಾರವು ಅಧಿಕಾರದ ಚುಕ್ಕಾಣಿ ಹಿಡಿದ ದಿನವೇ ಚುನಾವಣೆ ಪೂರ್ವ ನೀಡಿದ ಭರವಸೆಯಂತೆ “ಪಂಚ ಗ್ಯಾರಂಟಿ” ಯೋಜನೆಗಳ ಜಾರಿಗೆ ತಾತ್ವಿಕ ಅನುಮೋದನೆ ನೀಡಿ 100 ದಿನಗಳ ಅವಧಿಯಲ್ಲಿ ಪ್ರಮುಖ 4 ಗ್ಯಾರಂಟಿ ಜಾರಿಗೆ ತಂದಿದ್ದೇವೆ. ಇದು “ನುಡಿದಂತೆ ನಡೆಯುವ ಸರ್ಕಾರ” ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದೇವೆ.
21. ಬೆಲೆ ಏರಿಕೆ, ನಿರುದ್ಯೋಗ ಮತ್ತಿತರ ಸಮಸ್ಯೆಗಳ ಸರಮಾಲೆಯಿಂದ ತತ್ತರಿಸಿದ ನಾಡಿನ ಜನತೆಗೆ ನೇರವಾಗಿ ಹಣ ವರ್ಗಾವಣೆ ಮಾಡುವ Univarsal Basic Income ಎಂಬ ಹೊಸ ಪರಿಕಲ್ಪನೆಯಡಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಜನಸಾಮಾನ್ಯರ ಖರೀದಿಯ ಶಕ್ತಿ ಹೆಚ್ಚಾದರೆ ಆರ್ಥಿಕತೆಯು ಉತ್ತಮಗೊಳ್ಳುತ್ತದೆ. ಇದನ್ನು ಈಗಾಗಲೇ ಜಾರಿಗೊಂಡಿರುವ ನಮ್ಮ ಗ್ಯಾರಂಟಿ ಯೋಜನೆಗಳು ಸಾಬೀತುಪಡಿಸುತ್ತಿವೆ.
22. ವಿಶೇಷವಾಗಿ ಮಹಿಳೆಯರಿಗೆ ಆರ್ಥಿಕ ಹಾಗೂ ಸಾಮಾಜಿಕವಾಗಿ ಸದೃಢರಾಗುವ ಅವಕಾಶವನ್ನು ನಾವು ಈ ಯೋಜನೆಗಳ ಮೂಲಕ ಕಲ್ಪಿಸಿದ್ದೇವೆ. ಶಕ್ತಿ, ಗೃಹ ಲಕ್ಷ್ಮಿ ಯೋಜನೆಗಳ ಅನುಕೂಲ ನೇರವಾಗಿ ಮಹಿಳೆಯರನ್ನೇ ತಲುಪುತ್ತಿದ್ದು, ಇದು ಅವರ ಶಿಕ್ಷಣ, ಆದಾಯ ಚಟುವಟಿಕೆಗಳಿಗೆ ಬೆಂಬಲವಾಗಿದೆ.
23. ರಾಜ್ಯದಾದ್ಯಂತ 4 ಸಾರಿಗೆ ನಿಗಮದ ಬಸ್ಸುಗಳಲ್ಲಿ ರಾಜ್ಯದೊಳಗೆ ಮಹಿಳೆಯರಿಗೆ ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತ ಪ್ರಯಾಣ ಒದಗಿಸುವ “ಶಕ್ತಿ” ಯೋಜನೆಯಡಿ ಪ್ರತಿ ದಿನ 50 ರಿಂದ 60 ಲಕ್ಷ ಜನ ಮಹಿಳೆಯರು ಉಚಿತ ಪ್ರಯಾಣದ ಸೌಲಭ್ಯ ಪಡೆಯುತ್ತಿದ್ದು, ವಾರ್ಷಿಕವಾಗಿ ಸರ್ಕಾರವು ಇದಕ್ಕಾಗಿ 4,000 ಕೋಟಿ ರೂ. ವೆಚ್ಚ ಮಾಡಲಿದೆ. ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಸಪ್ಟೆಂಬರ್ 5ರ ವರೆಗೆ ದಿನನಿತ್ಯ 6.75 ಲಕ್ಷದಂತೆ 587.36 ಲಕ್ಷ ಮಹಿಳೆಯರು ಉಚಿತ ಪ್ರಯಾಣದ ಸೌಲಭ್ಯ ಪಡೆದಿದ್ದಾರೆ. ಪ್ರಯಾಣದ ವೆಚ್ಚದ ಪೈಕಿ 93.48 ಕೋಟಿ ರೂ. ನಿಗಮಕ್ಕೆ ಸರ್ಕಾರ ಭರಿಸಿದೆ. ಇದರಿಂದ ಕೆ.ಕೆ.ಆರ್.ಟಿ.ಸಿ. ನಿಗಮಕ್ಕೂ “ಆರ್ಥಿಕ ಶಕ್ತಿ” ಬಂದಿದೆ.
24. “ಶಕ್ತಿ” ಯೋಜನೆ ಪರಿಣಾಮ ಪ್ರಯಾಣಿಕರ ದಟ್ಟಣೆ ಹೆಚ್ಚಿದ ಪ್ರದೇಶದಲ್ಲಿ ದೇವಸ್ಥಾನ, ಯಾತ್ರಿಕ, ಪ್ರವಾಸಿ ಸ್ಥಾನಗಳಿಗೆ ಸಾರಿಗೆ ಸಂಪರ್ಕ ಕಲ್ಪಿಸಲು ಹೊಸದಾಗಿ 203 ಅನುಸೂಚಿಗಳಲ್ಲಿ ಬಸ್ಸು ಓಡಿಸಲಾಗುತ್ತಿದೆ. ಶಕ್ತಿ ಯೋಜನೆ ಪರಿಣಾಮ ಚಾಲ್ತಿಯಲಿದ್ದ 4,028 ಅನುಸೂಚಿಗಳನ್ನು 4,231ಕ್ಕೆ ಮತ್ತು ಸರತಿಗಳನ್ನು 22,214 ರಿಂದ 24,173ಕ್ಕೆ ಪರಿಷ್ಕರಿಸಿದೆ. ಇದರಿಂದ ಸಾರಿಗೆ ಪ್ರಯಾಣ ಸಹ ವಿಸ್ತಾರಗೊಂಡಿದೆ.
25. ಹಸಿವು ಮುಕ್ತ ಕರ್ನಾಟಕ್ಕಾಗಿ “ಅನ್ನ ಭಾಗ್ಯ” ಯೋಜನೆಯಡಿ 10 ಕೆ.ಜಿ. ಆಹಾರ ಧಾನ್ಯ ನೀಡಲು ಘೋಷಿಸಲಾಗಿದ್ದು, ರಾಜ್ಯದ 4.42 ಕೋಟಿ ಫಲಾನುಭವಿಗಳಿಗೆ ಅನುಕೂಲವಾಗಲಿದೆ. ಇದಕ್ಕಾಗಿ ವಾರ್ಷಿಕ 10 ಸಾವಿರ ಕೋಟಿ ರೂ. ವೆಚ್ಚವಾಗಲಿದೆ. ಅಕ್ಕಿ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದ ಕಾರಣ, ಜುಲೈ-2023 ಮಾಹೆಯಿಂದಲೆ 5 ಕೆ.ಜಿ ಅಕ್ಕಿಯ ಬದಲು ಪ್ರತಿ ಕೆ.ಜಿ.ಗೆ 34 ರೂ. ಗಳಂತೆ ತಲಾ ಸದಸ್ಯರಿಗೆ 170 ರೂ. ಗಳನ್ನು ಡಿ.ಬಿ.ಟಿ. ಮೂಲಕ ಹಣ ಪಾವತಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಲ್ಲಿ ಆಗಸ್ಟ್-2023 ಮಾಹೆಗೆ 20,44,691 ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿಗಳ 76,54,686 ಫಲಾನುಭವಿಗಳು ಇದಕ್ಕಾಗಿ ಅರ್ಹರಿದ್ದು, 124.92 ಕೋಟಿ ರೂ.ಗಳ ಪೈಕಿ 119.50 ಕೋಟಿ ರೂ. ಪಾವತಿಸಿದೆ. ಉಳಿದವರಿಗೆ ಪಾವತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ರಾಜ್ಯದಲ್ಲಿ ಈ ವರೆಗೆ 1.04 ಕೋಟಿ ಕುಟುಂಬಗಳ 3.70 ಕೋಟಿ ಸದಸ್ಯರಿಗೆ 606 ಕೋಟಿಗೂ ಹೆಚ್ಚು ರೂ. ಗಳನ್ನು ನೇರ ನಗದು ವ್ಯವಸ್ಥೆಯ ಮೂಲಕ ವರ್ಗಾವಣೆ ಮಾಡಲಾಗಿದೆ.
26. “ಉಚಿತ ಬೆಳಕು, ಸುಸ್ಥಿರ ಬದುಕು” ಘೋಷವಾಕ್ಯದ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಒದಗಿಸುವ “ಗೃಹ ಜ್ಯೋತಿ”ಯೋಜನೆಯಡಿ ರಾಜ್ಯದಾದ್ಯಂತ 2.14 ಕೋಟಿ ವಿದ್ಯುತ್ ಗ್ರಾಹಕರು ಲಾಭ ಪಡೆಯಲಿದ್ದು, ಆಗಸ್ಟ್ 28ರ ವರೆಗೆ ಕಲ್ಯಾಣ ಕರ್ನಾಟಕ ಭಾಗದ ಜೆಸ್ಕಾಂ ವ್ಯಾಪ್ತಿಯಲ್ಲಿ 20,38,245 ಗ್ರಾಹಕರು ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ 18,80,286 ಗ್ರಾಹಕರು ಯೋಜನೆಯ ಲಾಭ ಪಡೆದಿದ್ದಾರೆ. ಒಟ್ಟು ರಾಜ್ಯದಲ್ಲಿ ಆಗಸ್ಟ್ ತಿಂಗಳಲ್ಲಿ 1.31 ಕೋಟಿ ಗ್ರಾಹಕರುಗಳು ಶೂನ್ಯ ವಿದ್ಯುತ್ ಬಿಲ್ ಸೌಲಭ್ಯವನ್ನು ಪಡೆದಿರುತ್ತಾರೆ. ಇದಕ್ಕಾಗಿ ಎಲ್ಲಾ ಎಸ್ಕಾಂಗಳಿಗೆ ಒಟ್ಟು 661 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲಾಗಿದೆ.
27. ಮಹಿಳಾ ಸಬಲೀಕರಣ ನಿಟ್ಟಿನಲ್ಲಿ ಕುಟುಂಬದ ಯಜಮಾನಿಗೆ ಮಾಸಿಕ 2,000 ರೂ. ಒದಗಿಸುವ “ಗೃಹ ಲಕ್ಷ್ಮಿ” ಯೋಜನೆಯಡಿ ರಾಜ್ಯದ 1.28 ಕೋಟಿ ಜನ ಮಹಿಳೆಯರು ಇದರ ಫಲಾನುಭವಿಗಳಾಗಲಿದ್ದಾರೆ. ವಾರ್ಷಿಕವಾಗಿ ಇದಕ್ಕೆ ಸರ್ಕಾರವು 30 ಸಾವಿರ ಕೋಟಿ ರೂ. ವೆಚ್ಚ ಮಾಡಲಿದೆ. ಈ ಯೋಜನೆಯಡಿ ಕಲಬುರಗಿ ವಿಭಾಗದ 7 ಜಿಲ್ಲೆಗಳಲ್ಲಿ ಆಗಸ್ಟ್-2023ರ ಮಾಹೆಯ ಅಂತ್ಯದ ವರೆಗೆ ನೊಂದಾಯಿಸಿದ 20,89,653 ಫಲಾನುಭವಿಗಳ ಪೈಕಿ 19,44,015 ಮಹಿಳೆಯರಿಗೆ ತಲಾ 2,000 ರೂ. ಹಣ ಡಿ.ಬಿ.ಟಿ. ಮೂಲಕ ಪಾವತಿಸಿದೆ. ಇನ್ನುಳಿದವರಿಗೆ ಹಣ ಪಾವತಿ ಪ್ರಗತಿಯಲ್ಲಿದೆ. ರಾಜ್ಯದಲ್ಲಿ ಒಟ್ಟು ಈಗಾಗಲೇ 1.13 ಕೋಟಿ ಕುಟುಂಬಗಳ ಯಜಮಾನಿಯರು ನೋಂದಾಯಿಸಿಕೊಂಡಿದ್ದಾರೆ. ಕುಟುಂಬಗಳ ಯಜಮಾನಿಯರಿಗೆ ಏಕಕಾಲದಲ್ಲಿ ತಲಾ 2000 ರೂಗಳಂತೆ ಈವರೆವಿಗೂ ಒಟ್ಟು ರೂ. 1,436 ಕೋಟಿಗಳನ್ನು ಜಮೆ ಮಾಡಲಾಗಿರುತ್ತದೆ. ಇದೊಂದೇ ಯೋಜನೆಗೆ ನಾವು 30 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತವನ್ನು ವಿನಿಯೋಗಿಸುತ್ತಿದ್ದೇವೆ.
28. 2022-23ನೇ ಶೈಕ್ಷಣಿಕ ಸಾಲಿನಲ್ಲಿ ಡಿಪ್ಲೋಮಾ ಪದವಿ ಉತ್ತೀರ್ಣರಾದ ನಿರುದ್ಯೋಗಿಗಳಿಗೆ ಮಾಸಿಕ 1,500 ಮತ್ತು ಪದವಿ ತೇರ್ಗಡೆಯಾದ ನಿರುದ್ಯೋಗಿಗಳಿಗೆ ಮಾಸಿಕ 3,000 ಭತ್ಯೆ ನೀಡುವ “ಯುವ ನಿಧಿ” ಯೋಜನೆ ಈ ವರ್ಷದ ಅಂತ್ಯದೊಳಗೆ ಜಾರಿಗೆ ತರಲಾಗುತ್ತದೆ. ಜಿಲ್ಲೆಯವರೇ ಆಗಿರುವ ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
29. ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಪ್ರತಿ ಕುಟುಂಬಕ್ಕೆ ವಾರ್ಷಿಕ 48 ರಿಂದ 60 ಸಾವಿರ ರೂ. ಸೌಲಭ್ಯ ಲಭಿಸಲಿದೆ. ಸರ್ವರನ್ನು ಒಳಗೊಂಡ ಆರ್ಥಿಕ ಸ್ಥಿರತೆ ಮತ್ತು ಸಾಮಾಜಿಕ ಪ್ರಗತಿಪರ ಅಭಿವೃದ್ಧಿಗೆ ಮತ್ತು “ಸರ್ವೋದಯ ಸಮಾಜ” ನಿರ್ಮಾಣಕ್ಕೆ ಪಂಚ ಗ್ಯಾರಂಟಿ ಯೋಜನೆಗಳು ಪೂರಕವಾಗಿದೆ. ಜಾತಿ-ಧರ್ಮ ರಹಿತವಾದ ಸರ್ವ ಜನಾಂಗದ ಅಭಿವೃದ್ಧಿಯೇ ಈ ಜನಪರ ಸರ್ಕಾರದ ಧ್ಯೇಯವಾಗಿದ್ದು, ಇದುವೇ ಕರ್ನಾಟಕ ಮಾದರಿ ಆಡಳಿತದ ಪರಿಯಾಗಿದೆ.
30. ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ 371(ಜೆ) ತಿದ್ದುಪಡಿಯನ್ವಯ ರಚನೆಗೊಂಡ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಪ್ರಸಕ್ತ 2023-24ನೇ ಸಾಲಿನ ಆಯವ್ಯಯದಲ್ಲಿ ತಿಳಿಸಿದಂತೆ 5,000 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.
31. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಜಿಲ್ಲೆಯವರೇ ಆದ ಡಾ.ಅಜಯ್ ಸಿಂಗ್ ನೇತೃತ್ವದಲ್ಲಿ ಪೂರ್ಣ ಪ್ರಮಾಣದಲ್ಲಿ ಮಂಡಳಿ ರಚಿಸಲಾಗಿದೆ. ಈಗಾಗಲೇ ಡಾ. ಅಜಯ್ ಸಿಂಗ್ ಅವರು ಪ್ರಥಮ ಮಂಡಳಿ ಸಭೆ ನಡೆಸಿ ಪ್ರಸಕ್ತ ಸಾಲಿಗೆ 3,000 ಕೋಟಿ ರೂ. ಮೊತ್ತಕ್ಕೆ ಕ್ರಿಯಾ ಯೋಜನೆ ರೂಪಿಸುತ್ತಿದ್ದಾರೆ. ಜೊತೆಗೆ ಪ್ರದೇಶದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರಲು ಶೇ.25ರಷ್ಟು ಅನುದಾನ ಶಿಕ್ಷಣಕ್ಕೆ ಮೀಸಲಿಟ್ಟಿದ್ದು ಈ ಭಾಗದಲ್ಲಿ ಅಕ್ಷರ ಕ್ರಾಂತಿಗೆ ನಾಂದಿ ಹಾಡಲಿದೆ.
32. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣದ ಗುಣಮಟ್ಟ ಕಾಪಾಡಲು ಮತ್ತು ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗೆ ಕೆ.ಕೆ.ಆರ್.ಡಿ.ಬಿ. ಮಂಡಳಿಯು “ಅಕ್ಷರ ಆವಿಷ್ಕಾರ” ಯೋಜನೆ ರೂಪಿಸಿದೆ. ಇದರಡಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಜ್ಯ ಸರ್ಕಾರದಿಂದ 16,041 ಅತಿಥಿ ಶಿಕ್ಷಕರ ಭರ್ತಿ ಹೊರತಾಗಿ ಇನ್ನು ಖಾಲಿ ಉಳಿದ ಪ್ರಾಥಮಿಕ ಶಾಲೆ-2,566 ಮತ್ತು ಪ್ರೌಢ ಶಾಲೆ-52 ಸೇರಿದಂತೆ ಒಟ್ಟು 2,618 ಶಿಕ್ಷಕರ ಹುದ್ದೆಗಳಿಗೆ “ಅಕ್ಷರ ಮಿತ್ರ” ಪದನಾಮದಡಿ ಇದೇ ತಿಂಗಳ ಅಂತ್ಯಕ್ಕೆ ಭರ್ತಿ ಮಾಡಲು ಈಗಾಗಲೆ ಮಂಜೂರಾತಿ ನೀಡಿ 18.34 ಕೋಟಿ ರೂ. ಅನುದಾನ ನೀಡಿದೆ. ಇದು ಈ ಸರ್ಕಾರಕ್ಕೆ ಪ್ರದೇಶದಲ್ಲಿನ ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ನೀಡುತ್ತಿರುವ ಆದ್ಯತೆಗೆ ಸಾಕ್ಷಿಯಾಗಿದೆ.
33. ಇನ್ನು ಸಂವಿಧಾನದ 371(ಜೆ) ಕಲಂ ಅಡಿಯಲ್ಲಿ ಕಲ್ಯಾಣ ಕರ್ನಾಟಕ್ಕೆ ನೀಡಲಾದ ವಿಶೇಷ ಸ್ಥಾನಮಾನದ ಅನುಷ್ಠಾನಕ್ಕಾಗಿ ಹೊರಡಿಸಲಾದ ಆದೇಶಗಳ ಅನುಷ್ಠಾನದ ಮೇಲ್ವಿಚಾರಣೆಗೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ ಅವರ ಅಧ್ಯಕ್ಷತೆಯಲ್ಲಿಯೇ ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ.
34. ಪ್ರಸಕ್ತ 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ವರುಣನ ಅವಕೃಪೆಯಿಂದ ಮಳೆ ಇಲ್ಲದೆ ರಾಜ್ಯದಲ್ಲಿ ಬರ ಪರಿಸ್ಥಿತಿ ಛಾಯೆ ಆವರಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ 31 ಜಿಲ್ಲೆಗಳ 161 ತಾಲೂಕುಗಳನ್ನು ತೀವ್ರ ಬರ ಪೀಡಿತ ಹಾಗೂ 34 ತಾಲೂಕುಗಳನ್ನು ಸಾಧಾರಣ ಬರ ಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ಇದರಲ್ಲಿ ಕಲ್ಯಾಣ ಕರ್ನಾಟಕ ಭಾಗದ ಕ್ರಮವಾಗಿ 38 ಮತ್ತು 6 ತಾಲೂಕುಗಳು ಸೇರಿವೆ. ಇನ್ನು ಬರ ನಿರ್ವಹಣೆಯ ಕಾರ್ಯಕ್ರಮಗಳನ್ನು ತಕ್ಷಣದಿಂದ ಜಾರಿಗೆ ತರುವಂತೆ ಈಗಾಗಲೇ ಸರ್ಕಾರಿ ಆದೇಶ ಸಹ ಹೊರಡಿಸಲಾಗಿದೆ.
35. ಅಲ್ಲದೆ ಕೆಲವೇ ದಿನಗಳ ಹಿಂದೆ ಎಲ್ಲ ಜಿಲ್ಲಾಧಿಕಾರಿಗಳ ಸಭೆ ನಡೆಸಿ, ಕುಡಿಯುವ ನೀರು, ಮೇವು ಲಭ್ಯತೆಯನ್ನು ಖಾತರಿ ಪಡಿಸಿಕೊಳ್ಳುವಂತೆ ಹಾಗೂ ಬೆಳೆ ಹಾನಿ ಸಮೀಕ್ಷೆ ಮತ್ತಿತರ ಚಟುವಟಿಕೆಗಳನ್ನು ನಿಯಮಾನುಸಾರ, ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
36. ತಳ ಸಮುದಾಯ ಅಭಿವೃದ್ಧಿಯಾಗದ ಹೊರತು ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ. ಹೀಗಾಗಿ 2023-24ನೇ ಸಾಲಿನ ಆಯವ್ಯಯದಲ್ಲಿ ಪರಿಶಿಷ್ಟ ಜಾತಿ-ಪಂಗಡ ಸಮುದಾಯ ಕಲ್ಯಾಣಕ್ಕೆ ಒಟ್ಟು 34,294 ಕೋಟಿ ರೂ. ಹಣ ಮೀಸಲಿಡಲಾಗಿದೆ. ಅಲ್ಲದೆ SCSP/TSP ಅಧಿನಿಯಮ, 2013 ರಡಿ ಹಂಚಿಕೆಯಾಗುವ ಅನುದಾನ ಆ ಸಮುದಾಯಗಳಿಗೆ ಬಳಕೆಯಾಗುವುದನ್ನು ಖಾತರಿ ಪಡಿಸಲು ಕಾಯ್ದೆಯ ಸೆಕ್ಷನ್ 7(ಡಿ) ಅನ್ನು ಕೈಬಿಡಲು ಕ್ರಮ ವಹಿಸಲಾಗುತ್ತಿದೆ.
37. ಇದರೊಂದಿಗೆ ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಭೂಮಿ ಒಡೆತನದ ಹಕ್ಕು ಕಾಪಾಡಲು ನಮ್ಮ ಸರ್ಕಾರ ತ್ವರಿತ ಕ್ರಮ ಕೈಗೊಂಡಿದೆ.
38. ಇದರೊಂದಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಅತಿ ಕಡಿಮೆ ಇರುವುದನ್ನು ಗಮನಿಸಿ, ಬಾಕಿ ಇರುವ ಈ ಪ್ರಕರಣಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು, ಕಾರ್ಯದರ್ಶಿಗಳು ಹಾಗೂ ಜಿಲ್ಲಾಧಿಕಾರಿಗಳು ಕೆಡಿಪಿ ಸಭೇಗಳಲ್ಲಿ ಪ್ರಗತಿ ಪರಿಶೀಲನೆ ನಡೆಸಿ, ಪ್ರಕರಣಗಳ ತ್ವರಿತ ವಿಲೇವಾರಿ ಹಾಗೂ ನೊಂದವರಿಗೆ ನ್ಯಾಯ ಒದಗಿಸಲು ನೆರವಾಗುವಂತೆ ಸೂಚಿಸಿದ್ದೇನೆ.
39. ಬಸವಣ್ಣನವರ “ಅರಿವೇ ಗುರು” ಮತ್ತು ಅಂಬೇಡ್ಕರ್ ಅವರ “ಪ್ರಬುದ್ಧ ಭಾರತ” ತತ್ವ ನಮ್ಮ ಸಮಾಜದ ಪ್ರತಿಯೊಬ್ಬರಲ್ಲೂ ಮಾರ್ದನಿಸಬೇಕು. ಗ್ರಾಮ ಪಂಚಾಯಿತಿಯ ಗ್ರಂಥಾಲಯಗಳು ಶ್ರೀಸಾಮಾನ್ಯರ ವಿಶ್ವದ್ಯಾಲಯಗಳಾಗಬೇಕು ಎಂಬ ಪರಿಕಲ್ಪನೆಯಿಂದ ಹೊಸ ಸೇವೆಗಳೊಂದಿಗೆ ಗ್ರಾಮದ ಗ್ರಂಥಾಲಯಗಳನ್ನು “ಅರಿವು ಕೇಂದ್ರ’ ಗಳಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಈಗಾಗಲೆ ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಲ್ಲಿ 939 ಅರಿವು ಕೇಂದ್ರಗಳನ್ನು ಮೇಲ್ದರ್ಜೇಗೇರಿಸಲಾಗಿದೆ.
40. ಕಲಬುರಗಿಯಲ್ಲಿ ಕೆ.ಆರ್.ಐ.ಡಿ.ಎಲ್. ಸಂಸ್ಥೆಯು ತನ್ನ ಸಿ.ಎಸ್.ಆರ್. ನಿಧಿಯಿಂದ 26 ಲಕ್ಷ ರೂ. ವೆಚ್ಚದಲ್ಲಿ ಕಲಬುರಗಿ ಜಿಲ್ಲೆಯ 261 ಗ್ರಾಮ ಪಂಚಾಯತಿಯ ಅರಿವು ಕೇಂದ್ರಗಳಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾದಂತಹ ಒಟ್ಟು 41 ಕಲಿಕಾ ಪುಸ್ತಕಗಳನ್ನು ಪೂರೈಸಿದೆ.
41. ರಾಜ್ಯದಾದ್ಯಂತ 4,000 ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರ ಮಕ್ಕಳ ಪಾಲನೆಗೆ “ಕೂಸಿನ ಮನೆ’ ಶಿಶುಪಾಲನಾ ಕೇಂದ್ರಗಳು ಪ್ರಾರಂಭಿಸಲಾಗುತ್ತಿದೆ. ಇದಕ್ಕಾಗಿ ಈ ಪ್ರದೇಶದಲ್ಲಿ 881 ಕೇಂದ್ರ ಸ್ಥಾಪನೆಗೆ ಸ್ಥಳ ಗುರುತಿಸಿದೆ. ಕೇಂದ್ರದಲ್ಲಿ ಮಕ್ಕಳನ್ನು ನೋಡಿಕೊಳ್ಳಲು ತರಬೇತಿ ಪಡೆದ “ಕೇರ್ ಟೇಕ್” ಸಹ ಇರಲಿದ್ದಾರೆ.
42. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 400 ಸಮುದಾಯ ಶೌಚಾಲಯ ಸಂಕೀರ್ಣಗಳ ನಿರ್ಮಾಣಕ್ಕೆ ಪ್ರಸಕ್ತ ಆಯವ್ಯಯದಲ್ಲಿ 100 ಕೋಟಿ ರೂ. ಅನುದಾನ ಒದಗಿಸಿದೆ. ತಲಾ 25 ಲಕ್ಷ ರೂ. ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗುತ್ತಿದ್ದು, ಇದೂವರೆಗೆ 7 ಜಿಲ್ಲೆಗಳಲ್ಲಿ 218 ಗ್ರಾಮಗಳಲ್ಲಿ ಸಮುದಾಯ ಶೌಚಾಲಯ ಸಂಕೀರ್ಣ ಸ್ಥಾಪನೆಗೆ ಸ್ಥಳ ಗುರುತಿಸಲಾಗಿದೆ.
43. ಕಳೆದ ಬೇಸಿಗೆಯಲ್ಲಿ ಕುಡಿಯುವ ನೀರು ಕಲುಷಿತಗೊಂಡು ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಹಲವರು ಮೃತಪಟ್ಟಿದ್ದಲ್ಲದೆ, ಅಸ್ವಸ್ಥಗೊಂಡ ಪ್ರಕರಣಗಳನ್ನು ನಮ್ಮ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿ, ಗ್ರಾಮೀಣ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದೆ. ಘನತ್ಯಾಜ್ಯದೊಂದಿಗೆ ದ್ರವತ್ಯಾಜ್ಯದ ವೈಜ್ಞಾನಿಕ ವಿಲೇವಾರಿಗೂ ಒತ್ತು ನೀಡಲಾಗಿದೆ.
44. ಇದಲ್ಲದೆ ಕುಡಿಯುವ ನೀರಿನ ಮೂಲಗಳು ಹಾಗೂ ಪೈಪ್ಲೈನ್ಗಳ ಸುರಕ್ಷಿತವಾಗಿಡಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಬರ ಪರಿಸ್ಥಿತಿ ತಲೆದೋರಿರುವುದರಿಂದ ಇನ್ನಷ್ಟು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
45. ಪೊಲೀಸ್ ಠಾಣೆಯಲ್ಲಿ ಅಧಿಕಾರಿ-ಸಿಬ್ಬಂದಿಗಳು ಜನರೊಂದಿಗೆ ಯಾವ ರೀತಿಯಲ್ಲಿ ಸ್ಪಂದಿಸುತ್ತಾರೆ, ಅವರ ಕಷ್ಟಗಳ ಪರಿಹಾರಕ್ಕೆ ನೆರವಾಗುತ್ತಾರೆ ಎಂಬುದನ್ನು ಅಡಿಯಲ್ಲಿ ರಾಜ್ಯದಾದ್ಯಂತ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಪ್ರತಿ ಪೊಲೀಸ್ ಠಾಣೆಯಲ್ಲಿ ಕ್ಯೂ.ಆರ್.ಕೋಡ್ ಅಳವಡಿಸಿದ್ದು, ಸಾರ್ವಜನಿಕರು ತಮ್ಮ ಮೊಬೈಲ್ ಮೂಲಕ ಕ್ಯೂ.ಆರ್.ಕೋಡ್ ಬಳಸಿ ಪೊಲೀಸ್ ಸ್ಪಂದನೆ ಕುರಿತು ಫೀಡ್ ಬ್ಯಾಕ್ ನೀಡಬಹುದಾಗಿದೆ.
46. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಲಬುರಗಿಯನ್ನು ಅತ್ಯುತ್ತಮ ಆರೋಗ್ಯ ಸೇವಾ ಕೇಂದ್ರವಾಗಿ ರೂಪಿಸಲು ನಮ್ಮ ಸರ್ಕಾರ ಮುಂದಾಗಿದೆ. ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಇಲ್ಲಿ ವೈದ್ಯಕೀಯ ಕಾಲೇಜು, ಜಯದೇವ ಹೃದ್ರೋಗ ಸಂಸ್ಥೆಯನ್ನು ಸ್ಥಾಪಿಸಲಾಗಿತ್ತು. ಜಯದೇವ ಸಂಸ್ಥೆಯ ಕಟ್ಟಡ ಹಾಗೂ ಟ್ರಾಮಾಕೇರ್ ಸೆಂಟರ್ ಮುಕ್ತಾಯದ ಹಂತದಲ್ಲಿದೆ.
47. ಕೆ.ಕೆ.ಆರ್.ಡಿ.ಬಿ. ಮಂಡಳಿಯ 182.65 ಕೋಟಿ ರೂ. ಆರ್ಥಿಕ ನೆರವಿನೊಂದಿಗೆ ಕಲಬುರಗಿಯಲ್ಲಿ ನಿರ್ಮಾಣವಾಗುತ್ತಿರುವ 371 ಹಾಸಿಗೆಯ ಶ್ರೀ ಜಯದೇವ ಹೃದ್ರೋಗ ಮತ್ತು ವಿಜ್ಞಾನಗಳ ಸಂಸ್ಥೆಯ ಆಸ್ಪತ್ರೆಯನ್ನು ಮುಂದಿನ 3-4 ತಿಂಗಳಿನಲ್ಲಿ ಉದ್ಘಾಟಿಸಲಾಗುವುದು.
48. ಕಲಬುರಗಿಯ ಜಿಮ್ಸ್ ಆಸ್ಪತ್ರೆಯ ಆವರಣದಲ್ಲಿ 70 ಕೋಟಿ ರೂ. ವೆಚ್ಚದಲ್ಲಿ 200 ಹಾಸಿಗೆಯ ಹೊಸ “ತಾಯಿ ಮತ್ತು ಮಕ್ಕಳ ಆಸ್ಪತ್ರೆ” ನಿರ್ಮಾಣ ಮಾಡಲಾಗುತ್ತಿದೆ. ಇದಲ್ಲದೆ ಸುಟ್ಟ ಗಾಯಗಳ ಘಟಕ ಸ್ಥಾಪನೆ ಮಾಡಲಾಗುತ್ತಿದ್ದು, ಇದಕ್ಕೂ ಆಯವ್ಯಯದಲ್ಲಿ ಅನುದಾನ ಕಾಯ್ದಿರಿಸಿದೆ.
49. ಕಲಬುರಗಿ ವೈದ್ಯಕೀಯ ಕಾಲೇಜಿನ ಆವರಣದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದ 162.80 ಕೋಟಿ ರೂ. ಮತ್ತು ಕೊಪ್ಪಳ ವೈದ್ಯಕೀಯ ಕಾಲೇಜು ಆವರಣದಲ್ಲಿ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ 29.76 ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.
50. ಅದೇ ರೀತಿಯಾಗಿ ಸಚಿವರು ಪ್ರಿಯಾಂಕ್ ಖರ್ಗೆ ಅವರು ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕಲಬುರಗಿ ಜಿಲ್ಲೆಯಲ್ಲಿ ಸಿ.ಎಸ್.ಆರ್. ಅನುದಾನದಡಿಯಲ್ಲಿ ಸುಮಾರು 5 ಕೋಟಿ ವೆಚ್ಚದಲ್ಲಿ ವಿನೂತನ ಕಾರ್ಯಕ್ರಮ ಊeಚಿಟಣh ಂಖಿಒ ಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ವೆಲ್ನೆಸ್ ಸೆಂಟರ್, ಹಾಗೂ ಇನ್ನಿತರ ಒಟ್ಟು 25 ಸ್ಥಳಗಳಲ್ಲಿ ಪ್ರಾರಂಭಿಸಲಾಗುತ್ತಿದೆ.
51. ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣದ ಮಾದರಿಯನ್ನು ಇಂಡಿಯನ್ ಪಬ್ಲಿಕ್ ಹೆಲ್ತ್ ಸ್ಟ್ಯಾಂಡರ್ಡ್ ಅನ್ವಯ ನಿಗದಿಪಡಿಸಲು ಕ್ರಮ ಕೈಗೊಳ್ಳಲು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಹಾಗೂ ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ.
52. ಶಕ್ತಿ ಯೋಜನೆಯಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವ ಕಾರಣ ಇದನ್ನು ಸರಿದೂಗಿಸಲು ಕೆ.ಕೆ.ಆರ್.ಟಿ.ಸಿ.ಗೆ 100 ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ 250 ಬಸ್ ಖರೀದಿಗೆ ಇತ್ತೀಚೆಗೆ ಜರುಗಿದ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ.
53. ಕಲ್ಯಾಣ ಕರ್ನಾಟಕವು ಐತಿಹಾಸಿಕ ಹಾಗೂ ಧಾರ್ಮಿಕ ಪ್ರವಾಸಿ ಕೇಂದ್ರಗಳನ್ನು ಹೊಂದಿದ್ದು, ಪ್ರವಾಸೋದ್ಯಮದ ಮೂಲಕ ಈ ಭಾಗದ ಅಭಿವೃದ್ಧಿಗೆ ಸಾಕಷ್ಟು ಅವಕಾಶವಿದೆ. ಇದನ್ನು ಬಳಸಿಕೊಂಡು ಸ್ಥಳೀಯ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡಲಾಗುವುದು. ಕಲಬುರಗಿ ಜಿಲ್ಲೆಯ ಶ್ರೀ ದತ್ತಾತ್ರೇಯನ ಪುಣ್ಯಕ್ಷೇತ್ರ ಗಾಣಗಾಪುರ, ಬೌದ್ಧ ಧರ್ಮದ ನೆಲೆಯಾಗಿರುವ ಸನ್ನತಿ ಸ್ಥಳಗಳ ಸಮಗ್ರ ಅಭಿವೃದ್ಧಿ ಮಾಡಲಾಗುತ್ತದೆ. ಕಲಬುರಗಿ ಗುರುದ್ವಾರ ಸಹ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು.
54. ಕಲಬುರಗಿ, ಮಳಖೇಡ್ ಕೋಟೆಗಳನ್ನು ಸಮಗ್ರ ಅಭಿವೃದ್ಧಿಪಡಿಸಲಾಗುವುದು. ಕಲಬುರಗಿ ಸರ್ಕಾರಿ ವಸ್ತು ಸಂಗ್ರಹಾಲಯ ಅಭಿವೃದ್ಧಿಗೂ ಕ್ರಮ ವಹಿಸಲಾಗುತ್ತಿದೆ.
55. ಬೀದರ್ನಲ್ಲಿ ಹೆಚ್ಚಾಗಿ ಕಂಡುಬರುವ ಕೃಷ್ಣಮೃಗಗಳ ಸಂರಕ್ಷಣೆಗೆ ಕೃಷ್ಣಮೃಗ ಸಂರಕ್ಷಣಾ ಮೀಸಲು ಪ್ರದೇಶವನ್ನಾಗಿ ಘೋಷಿಸಿದ್ದು, ಪ್ರದೇಶದ ರಕ್ಷಣೆ ಮತ್ತು ನಿರ್ವಹಣೆಗೆ 2 ಕೋಟಿ ರೂ. ನೀಡಲಾಗುತ್ತಿದೆ.
56. ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ನೂತನ ಜಿಲ್ಲಾಡಳಿತ ಕಟ್ಟಡ ನಿರ್ಮಿಸಲಾಗುವುದು.
57. ಜಾನಪದ ಕಲೆ ಉಳಿಸಿ ಬೆಳೆಸಲು ಮತ್ತು ಯುವ ಪೀಳಿಗೆಗೆ ಪರಿಚಯಿಸಲು ಕೊಪ್ಪಳ ಜಿಲ್ಲೆಯಲ್ಲಿ 3.50 ಕೋಟಿ ರೂ. ಮೊತ್ತದಲ್ಲಿ ‘ಜಾನಪದ ಲೋಕ’ ಸ್ಥಾಪನೆಗೆ ಆಯವ್ಯಯದಲ್ಲಿ ಘೋಷಿಸಿದ್ದು, ಇದೇ ವರ್ಷ ಸ್ಥಾಪಿಸಲಾಗುವುದು.
58. ರಾಷ್ಟ್ರೀಯ ಸಂರಕ್ಷಿತ ಸ್ಮಾರಕವಾದ ಹಂಪಿಯ ವಿಜಯವಿಠಲ ದೇವಸ್ಥಾನ, ಬೀದರ್ ಐತಿಹಾಸಿಕ ಕೋಟೆ ಬಳಿ “3ಡಿ ಪ್ರೊಜೆಕ್ಷನ್, ಮಲ್ಟಿಮೀಡಿಯಾ, ಸೌಂಡ್ ಮತ್ತು ಲೈಟ್” ಸೌಲಭ್ಯ ಕಲ್ಪಿಸಲಾಗುವುದು.
59. ರಾಯಚೂರು ಬಳಿಯ ಕಲ್ಮಲಾ ಜಂಕ್ಷನ್ ನಿಂದ ಸಿಂಧನೂರು ಬಳಿಯ ಬಳ್ಳಾರಿ-ಲಿಂಗಸುಗೂರು ರಸ್ತೆ ವೃತ್ತದ ವರೆಗೆ 1,696 ಕೋಟಿ ರೂ.ಗಳ ಮೊತ್ತದಲ್ಲಿ ಒಟ್ಟು 78 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿಪಡಿಸಲಾಗುತ್ತದೆ.
60. ಕಲ್ಯಾಣ ಕರ್ನಾಟಕ ಭಾಗದ ನಿರುದ್ಯೋಗಿ ಪದವಿ ಯುವ–ಯುವತಿಯವರಿಗೆ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಪಡೆಯಲು ಕಲಬುರಗಿ ನಗರದ ವಾಜಪೇಯಿ ಬಡಾಣೆಯಲ್ಲಿ ಸ್ಪರ್ಧಾತ್ಮಕ “ಪರೀಕ್ಷಾ ಪೂರ್ವ ತರಬೇತಿ ಕೇಂದ್ರ” ವನ್ನು ಸ್ಥಾಪಿಸಲಾಗುತ್ತಿದೆ. ಮುಂದಿನ ಆರ್ಥಿಕ ವರ್ಷದಿಂದ, ಈ ಸಂಸ್ಥೆ ಪ್ರಾರಂಭವಾಗಲಿದ್ದು, ಪ್ರತಿ ವರ್ಷ ಈ ಸಂಸ್ಥೆಗೆ 10 ಕೋಟಿ ರೂ. ಕೆ.ಕೆ.ಆರ್.ಡಿ.ಬಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳಿಂದ ಒದಗಿಸಲಾಗುವುದು. ಇದರಿಂದ ಪ್ರತಿ ವರ್ಷ ಸುಮಾರು 2000 ಸ್ಪರ್ಧಾರ್ಥಿಗಳಿಗೆ ವಿವಿಧ ತರಬೇತಿ ನೀಡಲಾಗುವುದು. ಇದರ ಪರಿಣಾಮವಾಗಿ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ವಿವಿಧ ಪ್ರಮುಖ ಹುದ್ದೆಗಳಲ್ಲಿ ನೇಮಕಗೊಳ್ಳಲು ಅನುಕೂಲವಾಗಲಿದೆ.
61. ಸಾರ್ವಜನಿಕರು ತಮ್ಮ ಕುಂದುಕೊರತೆ ಅರ್ಜಿಗಳನ್ನು ಹಿಡಿದು ಸರ್ಕಾರಿ ಕಚೇರಿಗೆ ಅಲೆದಾಡುವ ಬದಲಾಗಿ ತಂತ್ರಜ್ಞಾನದ ಸಹಾಯದಿಂದ ಕ್ಯೂ.ಆರ್.ಸ್ಕ್ಯಾನ್ ಕೋಡ್ ಬಳಸಿಕೊಂಡು ಮನೆಯಿಂದಲೇ ಮೋಬೈಲ್ ಮೂಲಕವೇ ಅರ್ಜಿ ಸಲ್ಲಿಸಿ ಪರಿಹಾರ ಪಡೆಯಲೆಂದು ಕಲಬುರಗಿಯಲ್ಲಿ “ಕಲಬುರಗಿ ಕನೆಕ್ಟ್” ಎಂಬ ನೂತನ ತಂತ್ರಾಂಶಕ್ಕೆ ಚಾಲನೆ ನೀಡಿದ್ದು, ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಸಾರ್ವಜನಿಕ ಕುಂದುಕೊರತೆ ವಿಲೇವಾರಿ ನಿಟ್ಟಿನಲ್ಲಿ ಮತ್ತು ಸಾರ್ವಜನಿಕರ ಸಮಯ ಉಳಿಸಲು ಇದು ಮಾದರಿಯಾಗಿದೆ.
62. ಕಲ್ಯಾಣ ಕರ್ನಾಟಕ ಪ್ರದೇಶವು ದೇಶದಲ್ಲಿಯೇ ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದರಿಂದ ಈ ಭಾಗದ ಜನರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಮತ್ತು ಪ್ರದೇಶದ ಅಭಿವೃದ್ಧಿಗೆ ವಿಶೇಷ ಅನುದಾನ ಒದಗಿಸುವ ವಿಶೇಷ ಸ್ಥಾನಮಾನ ನೀಡಬೇಕೆಂದು ಎರಡ್ಮೂರು ದಶಕಗಳ ಹೋರಾಟದ ಫಲವಾಗಿ ಸಂವಿಧಾನಕ್ಕೆ ತಿದ್ದುಪಡಿ ಮಾಡಿ ಕಲ್ಯಾಣ ಕರ್ನಾಟಕ ಭಾಗಕ್ಕೆ 371(ಜೆ) ಕಾಯ್ದೆ ಜಾರಿಯಾಗಿದೆ.
63. 371 (ಜೆ) ಕಾಯ್ದೆ ಜಾರಿಗೆ ರಾಷ್ಟ್ರಪತಿಗಳು ಅಂಕಿತ ನೀಡಿದ ಕೂಡಲೇ ಅಂದು 2013 ರಲ್ಲಿ ರಾಜ್ಯದಲ್ಲಿದ್ದ ನಮ್ಮ ಸರ್ಕಾರ ಕೂಡಲೆ ಪ್ರದೇಶ ಮಂಡಳಿ ರಚಿಸಿದಲ್ಲದೆ, ಉದ್ಯೋಗ ಮತ್ತು ಶಿಕ್ಷಣದಲ್ಲಿ ಸ್ಥಳೀಯರನ್ನು ಮೀಸಲಾತಿ ಸೌಲಭ್ಯ ಒದಗಿಸುವ ಸರ್ಕಾರಿ ಆದೇಶ ಹೊರಡಿಸುವ ಮೂಲಕ ಈ ಭಾಗದ ಅಭಿವೃದ್ಧಿಯ ಹೊಸ ಶಕೆಗೆ ಚಾಲನೆ ನೀಡಲಾಗಿತ್ತು.
64. 371 (ಜೆ) ಕಾಯ್ದೆ ಜಾರಿಯಾಗಿ ಇದೀಗ 10 ವರ್ಷ ತುಂಬಿದೆ. ಶತ ಶತಮಾನಗಳಿಂದ ಪ್ರಾಕೃತಿಕ, ಸಾಮಾಜಿಕ ಹಾಗೂ ರಾಜಕೀಯ ಕಾರಣಗಳಿಂದ ಹಿಂದುಳಿದ ಪ್ರದೇಶದ ಅಭಿವೃದ್ಧಿಯನ್ನು ದಿನ ಬೆಳಗಾಗುವುದರೊಳಗೆ ಸಾಧಿಸಲು ಸಾಧ್ಯವಿಲ್ಲ. ಬಹು ಆಯಾಮದ ಬಡತನ ನಿವಾರಣೆ, ಮೂಲಸೌಕರ್ಯ ಅಭಿವೃದ್ಧಿ, ಸಾಮಾಜಿಕ ಜಾಗೃತಿ ಹೀಗೆ ವಿವಿಧ ಆಯಾಮಗಳಲ್ಲಿ ಸರ್ಕಾರ ಆದ್ಯತೆ ನೀಡಿ ಕೆಲಸ ಮಾಡಬೇಕಾಗುತ್ತದೆ. ಕೇವಲ ಅನುದಾನ ಒದಗಿಸುವುದು ಮುಖ್ಯವಲ್ಲ. ಅನುದಾನದ ಬಳಕೆ ಯಾವರೀತಿ ಮಾಡಿಕೊಳ್ಳಲಾಗುತ್ತದೆ ಎನ್ನುವುದೂ ಮುಖ್ಯ.
65. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ 2013-14 ರಿಂದ 2023-24ರ ವರೆಗೆ ಸರ್ಕಾರದಿಂದ ಒಟ್ಟಾರೆ 14,878.33 ಕೋಟಿ ರೂ. ಅನುದಾನ ಹಂಚಿಕೆ ಮಾಡಿ 10,228.80 ಕೋಟಿ ರೂ. ಬಿಡುಗಡೆ ಮಾಡಿದೆ. ಇದರಲ್ಲಿ 8,520.74 ಕೋಟಿ ರೂ. ಖರ್ಚು ಮಾಡಲಾಗಿದೆ. ಬಿಡುಗಡೆಯಾದ ಅನುದಾನಕ್ಕೆ ಶೇ.83 ರಷ್ಟು ಆರ್ಥಿಕ ಪ್ರಗತಿ ಸಾಧಿಸಿದೆ. ಒಟ್ಟಾರೆ 29,215 ಕಾಮಗಾರಿಗಳು ಕೈಗೆತ್ತಿಕೊಂಡು 24,563 ಕಾಮಗಾರಿ ಪೂರ್ಣಗೊಳಿಸಿದ್ದು, 4,652 ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಕಾಮಗಾರಿಗಳು ಪ್ರದೇಶದ ಚಿತ್ರ ಬದಲಿಸಿವೆ ಎಂದರೆ ತಪ್ಪಾಗಲಾರದು.
66. ಕೆ.ಕೆ.ಆರ್.ಡಿ.ಬಿ. ಇನ್ನಷ್ಟು ದಕ್ಷತೆಯಿಂದ, ಪಾರದರ್ಶಕವಾಗಿ ಹಾಗೂ ಅಗತ್ಯತೆಗಳನ್ನು ಆಧರಿಸಿ ಯೋಜನೆಗಳ ಅನುಷ್ಠಾನಗೊಳಿಸುವ ಅಗತ್ಯವನ್ನು ನಮ್ಮ ಸರ್ಕಾರ ಮನಗಂಡಿದೆ. ಈ ನಿಟ್ಟಿನಲ್ಲಿ ಮಂಡಳಿಯ ಅಧ್ಯಕ್ಷರಾದ ಅಜಯ್ ಸಿಂಗ್ ಹಾಗೂ ಮಂಡಳಿಯ ಕಾರ್ಯಕ್ರಮದ ಮೇಲುಸ್ತುವಾರಿಗೆ ರಚಿಸಲಾದ ಸಚಿವ ಸಂಪುಟ ಉಪಸಮಿತಿಯ ಅಧ್ಯಕ್ಷ ಸಚಿವ ಪ್ರಿಯಾಂಕ್ ಖರ್ಗೆ ಅವರು ಪರಿಣಾಮಕಾರಿಯಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಾರೆನ್ನುವ ವಿಶ್ವಾಸ ನನಗಿದೆ.
67. ಕಾಯ್ದೆ ಆರಂಭದಿಂದ ಕಳೆದ ಆಗಸ್ಟ್ ಅಂತ್ಯಕ್ಕೆ ವಿವಿಧ ಇಲಾಖೆಗಳಲ್ಲಿ ಈ ಭಾಗದವರಿಗೆ ಒಟ್ಟು 98,889 ಹುದ್ದೆ ನೇರ ನೇಮಕಾತಿಗೆ ಗುರುತಿಸಿದ್ದು, ಅದರಲ್ಲಿ 70,738 ಭರ್ತಿಯಾಗಿವೆ. ಮುಂಬಡ್ತಿ ಮೀಸಲಿಗೆ ಗುರುತಿಸಿದ 33,371 ಹುದ್ದೆಗಳ ಪೈಕಿ 23,101 ಜನರಿಗೆ ಮುಂಬಡ್ತಿ ನೀಡಲಾಗಿದೆ. ಇನ್ನು ಖಾಲಿ ಉಳಿದ ಹುದ್ದೆಗಳ ನೇರ ನೇಮಕಾತಿ ಮತ್ತು ಮುಂಬಡ್ತಿಗೆ ಹಂತ ಹಂತವಾಗಿ ಕ್ರಮ ವಹಿಸಲಾಗುವುದು.
68. ಕಲ್ಯಾಣ ಕರ್ನಾಟಕದ ಭಾಗದ ಉನ್ನತ ಶಿಕ್ಷಣ, ತಾಂತ್ರಿಕ, ವೈದ್ಯಕೀಯ ಶಿಕ್ಷಣ ಹಾಗೂ ಇತರೆ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಶೇ.70 ರಷ್ಟು ಸ್ಥಾನಗಳನ್ನು ಮತ್ತು ರಾಜ್ಯದ ಉಳಿದ ಇತರೆ ಭಾಗಗದಲ್ಲಿ ಶೇ.8 ರಷ್ಟು ಸ್ಥಾನಗಳನ್ನು ಸ್ಥಳೀಯ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಇದರ ಪರಿಣಾಮ 2014-15 ರಿಂದ 2022-23ನೇ ಶೈಕ್ಷಣಿಕ ಸಾಲಿನ ವರೆಗೆ 6,795 ಅಭ್ಯರ್ಥಿಗಳು ವೈದ್ಯಕೀಯ, 1,388 ಅಭ್ಯರ್ಥಿಗಳು ದಂತ ವೈದ್ಯಕೀಯ, 3448 ಅಭ್ಯರ್ಥಿಗಳು ಹೋಮಿಯೋಪತಿ, 22,219 ಅಭ್ಯರ್ಥಿಗಳು ಇಂಜಿನೀಯರಿಂಗ್, 3,808 ಅಭ್ಯರ್ಥಿಗಳು ಕೃಷಿ ಸಂಬಂಧಿತ, 1,593 ಅಭ್ಯರ್ಥಿಗಳು ಬಿ.ಫಾರ್ಮಸಿ/ ಡಿ.ಫಾರ್ಮಸಿ ಸೇರಿದಂತೆ ಒಟ್ಟಾರೆ 10 ವರ್ಷದಲ್ಲಿ ಪ್ರದೇಶದ 39,251 ಅಭ್ಯರ್ಥಿಗಳು ಮೀಸಲಾತಿ ಸೌಲಭ್ಯದಿಂದ ಉನ್ನತ ಶಿಕ್ಷಣ ಪಡೆದುಕೊಂಡಿದ್ದಾರೆ.
69. ರಾಜ್ಯದಲ್ಲಿ ವಾಯುಯಾನ ಕ್ಷೇತ್ರಕ್ಕೆ ಈಶಾನ್ಯ ಭಾಗ ಸೇರ್ಪಡೆ ಮಾಡುವ ಉದ್ದೇಶದಿಂದ ಕೆ.ಕೆ.ಆರ್.ಡಿ.ಬಿ. ಮಂಡಳಿಯ 58.52 ಕೋಟಿ ರೂ. ಅನುದಾನ ನೆರವಿನಿಂದ ಒಟ್ಟಾರೆ 181 ಕೋಟಿ ರೂ. ವೆಚ್ಚದಲ್ಲಿ ಕಲಬುರಗಿಯಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಿದ್ದು, ಗಗನದಲ್ಲಿ ಹಾರಾಡಬೇಕೆಂಬ ಇಲ್ಲಿನವರ ಕನಸು ನನಸಾಗಿದೆ. ಇದರಿಂದ ಈ ಭಾಗದ ಕೈಗಾರಿಕೆ, ಶಿಕ್ಷಣ, ಕೃಷಿ, ಆರೋಗ್ಯ ಕ್ಷೇತ್ರ ಅಭಿವೃದ್ಧಿಗೆ ನೆರವಾಗಿದೆ.
70. ಬೆಂಗಳೂರಿನಿಂದ ಹೊರಗೆ ಹೆಚ್ಚು ಉದ್ಯೋಗಾವಕಾಶ ಸೃಜಿಸುವ ಮೂಲಕ ಅಭಿವೃದ್ಧಿಗೆ ಉತ್ತೇಜನ ನೀಡಲು ಮತ್ತು ಸುಸ್ಥಿರ ಬದುಕು ರೂಪಿಸಲು ಸರ್ಕಾರವು ಘೋಷಿಸಿರುವ ಕೈಗಾರಿಕಾ ಟೌನ್ ಶಿಪ್ ಅಭಿವೃದ್ಧಿ ಪಡಿಸುವ ಯೋಜನೆಯಡಿ ಕಲಬುರಗಿ ಮತ್ತು ಬಳ್ಳಾರಿ ನಗರಗಳೂ ಸೇರಿವೆ. ಕೈಗಾರಿಕೆಗಳ ಸ್ಥಾಪನೆಯನ್ನು ಕೇಂದ್ರವಾಗಿಸಿಕೊಂಡ ಈ ಉಪನಗರಗಳು ಸುಸ್ಥಿರತೆಯನ್ನು ಹೊಂದಿದ್ದು, ನಾಗರಿಕ ಸೌಲಭ್ಯಗಳು, ಶಾಲೆ, ಆರೋಗ್ಯ ಸೇವಾ ಸೌಲಭ್ಯಗಳನ್ನು ಸ್ಥಳೀಯವಾಗಿಯೇ ಒದಗಿಸಲಾಗುವುದು.
71. ಕಲಬುರಗಿ, ಕೊಪ್ಪಳಗಳಲ್ಲಿ ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಹಾಗೂ ಯಾದಗಿರಿಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಿದ್ದು, ಈ ಭಾಗದ ವಿದ್ಯಾರ್ಥಿಗಳು ವೈದ್ಯರಾಗಿ ಹೊರಹೊಮ್ಮುತ್ತಿದ್ದಾರೆ.
72. ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಕುರಿತಂತೆ ಕೇಂದ್ರ ಸರ್ಕಾರದೊಂದಿಗೆ ನಿರಂತರ ಅನುಪಾಲನೆ ನಡೆಯುತ್ತಿದೆ.
73. ಅಭಿವೃದ್ಧಿ ಎಂದರೆ ಕೇವಲ ಹೆದ್ದಾರಿ, ರಸ್ತೆ, ದೊಡ್ಡ ದೊಡ್ಡ ಕಟ್ಟಡಗಳು ಮಾತ್ರವಲ್ಲ; ಜನರಿಗೆ ಉತ್ತಮ ಶಿಕ್ಷಣ, ಆರೋಗ್ಯ ಸೇವೆ, ಆರ್ಥಿಕ ಹಾಗೂ ಸಾಮಾಜಿಕ ಭದ್ರತಾ ಭಾವವೂ ಮುಖ್ಯವಾಗುತ್ತದೆ. ನಮ್ಮ ಸರ್ಕಾರ ಈ ನಿಟ್ಟಿನಲ್ಲಿ ಆದ್ಯತೆ ನೀಡಿ ಕಾರ್ಯನಿರ್ವಹಿಸುತ್ತದೆ.
74. ಹೈದರಾಬಾದ್ ಕರ್ನಾಟಕವನ್ನು ದಾಸ್ಯದ ಸಂಕೋಲೆಯಿಂದ ಬಿಡಿಸಿದ ಸರ್ದಾರ್ ವಲ್ಲಭ ಭಾಯಿ ಪಟೇಲರು “ದೇಶದ ಪ್ರತಿಯೊಬ್ಬ ನಾಗರಿಕನೂ ಈ ದೇಶ ಸ್ವತಂತ್ರವಾಗಿದೆ ಹಾಗೂ ಈ ಸ್ವಾತಂತ್ರ್ಯವನ್ನು ರಕ್ಷಿಸುವುದು ಆತನ ಜವಾಬ್ದಾರಿ ಎಂಬುದನ್ನು ಅರಿತುಕೊಳ್ಳಬೇಕು” ಎಂದಿದ್ದಾರೆ.
75. ಅಂತೆಯೇ ಇಂದು ದೇಶದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ವಾಕ್ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ ಮೊದಲಾದವುಗಳ ರಕ್ಷಣೆಗೆ ಪ್ರತಿಯೊಬ್ಬನೂ ಮುಂದಾಗಬೇಕಾಗಿದೆ. ಸಮಾಜದಲ್ಲಿ ಶಾಂತಿ, ಸೌಹಾರ್ದ ಕದಡುವ ಶಕ್ತಿಗಳ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕಾಗಿದೆ. ಇದಕ್ಕಾಗಿ ನಾವು-ನೀವೆಲ್ಲರೂ ಜೊತೆಗೆಯಾಗಿ ಮುನ್ನಡೆಯಬೇಕು.
76. ಕಲ್ಯಾಣ ಕರ್ನಾಟಕವನ್ನು ಅಕ್ಷರಶಃ ಕಲ್ಯಾಣ ರಾಜ್ಯವಾಗಿ ಮಾಡುವ ನಮ್ಮ ಸಂಕಲ್ಪ ಪ್ರಶ್ನಾತೀತ. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಫಲಿತಾಂಶ ಕೇಂದ್ರಿತ ಕಾರ್ಯಕ್ರಮ ಅನುಷ್ಠಾನದ ಮೂಲಕ ಅಭಿವೃದ್ಧಿಗೆ ಹೊಸ ಭಾಷ್ಯ ಬರೆಯಲು ಮುಂದಾಗಿದ್ದೇವೆ. ನಿಮ್ಮ ಸಹಕಾರ ನಮಗಿರಲಿ.
ಕಲ್ಯಾಣ ಕರ್ನಾಟಕ ಭಾಗ ಅಭಿವೃದ್ಧಿಯಾಗದ ಹೊರತು ರಾಜ್ಯದ ಅಭಿವೃಧ್ಧಿ ಅಸಾಧ್ಯ. ಇಲ್ಲಿನ ಜನರ ತಲಾ ಆದಾಯ ವೃದ್ಧಿ ಜೊತೆಗೆ ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಸುಧಾರಣೆ ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿ ನಮ್ಮ ಗುರಿಯಾಗಿದೆ. ದೇಶದ ಏಕತೆ ಮತ್ತು ಸಮಗ್ರತೆ ಕಾಪಾಡಲು ಬದ್ಧರಾಗಿರೋಣ. ಮಾನವೀಯ ಕಾಳಜಿ, ಸರ್ವಜನರ ಹಿತವನ್ನೇ ಬಯಸುವ ಕರ್ನಾಟಕ ಅಭಿವೃದ್ಧಿ ಮಾದರಿಯನ್ನು ಯಶಸ್ವಿಗೊಳಿಸೋಣ ಎಂದು ಹೇಳಿದರು.
*ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲ್ಯಾಣ ಕರ್ನಾಟಕ ಉತ್ಸವ ಸಂಭ್ರಮದ ದಿನವೇ ಶಂಕುಸ್ಥಾಪನೆ ನೆರವೇರಿಸಿದ ಮತ್ತು ಉದ್ಘಾಟಿಸಿದ ಕಾರ್ಯಕ್ರಮಗಳ ಪಟ್ಟಿ ಮತ್ತು ಯೋಜನೆಗಳ ಮೊತ್ತ*
*KKRDB Works Details*
ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಂದ ಕಲ್ಯಾಣ ಕರ್ನಾಟಕ ಏಳೂ ಜಿಲ್ಲೆಗಳಲ್ಲಿ
KKRDB ವತಿಯಿಂದ 145.51 ಕೋಟಿ ರೂ ವೆಚ್ಚದ ಕಾಮಗಾರಿಗಳಿಗೆ ಅಡಿಗಲ್ಲು ಹಾಗೂ 60.05 ಕೋಟಿ ರೂ ವೆಚ್ಚದ ಕಾಮಗಾರಿಗಳ ಉದ್ಘಾಟನೆ.
*ಲೋಕೋಪಯೋಗಿ ಇಲಾಖೆ*
ಒಟ್ಟು 139.36 ಕೋಟಿ ರೂ ವೆಚ್ಚದ 33 ಕಾಮಗಾರಿಗಳಿಗೆ ಅಡಿಗಲ್ಲು ಹಾಗೂ ಒಟ್ಟು 50.81 ಕೋಟಿ ರೂ ವೆಚ್ಚದ 38 ಕಾಮಗಾರಿಗಳ ಉದ್ಘಾಟನೆ
*ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ*
ಒಟ್ಟು 6.15 ಕೋಟಿ ರೂ ವೆಚ್ಚದ 41 ಕಾಮಗಾರಿಗಳಿಗೆ ಅಡಿಗಲ್ಲು ಹಾಗೂ ಒಟ್ಟು 74 ಲಕ್ಷ ರೂ ವೆಚ್ಚದ 2 ಕಾಮಗಾರಿಗಳ ಉದ್ಘಾಟನೆ
*KRIDL*
ಒಟ್ಟು 5.03 ಕೋಟಿ ರೂ ವೆಚ್ಚದ 12 ಕಾಮಗಾರಿಗಳ ಉದ್ಘಾಟನೆ
*ನಿರ್ಮಿತಿ ಕೇಂದ್ರ*
ಒಟ್ಟು 4.47 ಕೋಟಿ ರೂ ವೆಚ್ಚದ 26 ಅಂಗನವಾಡಿ ಕಟ್ಟಡಗಳ ಉದ್ಘಾಟನೆ
ಕಲ್ಯಾಣ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಕಂಕಣಬದ್ಧವಾಗಿ ಕೆಲಸ ಮಾಡುತ್ತಿದೆ.
*Kalaburagi District Works Details*
ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ವೇಳೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಂದ ಕಲಬುರಗಿ ಜಿಲ್ಲೆಯ 182.93 ಕೋಟಿ
ವೆಚ್ಚದ ಕಾಮಗಾರಿಗಳಿಗೆ ಅಡಿಗಲ್ಲು ಹಾಗೂ 50.77 ಕೋಟಿ
ವೆಚ್ಚದ ಕಾಮಗಾರಿಗಳ ಉದ್ಘಾಟನೆ
*ಕೆ.ಪಿ.ಟಿ.ಸಿ.ಎಲ್ ಕಲಬುರಗಿ*
*ಆಳಂದ ತಾಲೂಕು*
ಗಣಗಾಪೂರ ಹೊಸದಾಗಿ ಪ್ರಸ್ತಾಪಿಸಲಾದ 2 x 100
ಒಗಿಂ 220/110 ಕೆ.ವಿ ವಿದ್ಯುತ್ ಸ್ವೀಕರಣಾ ಕೇಂದ್ರ (ನಿಂಬರಗಾ)
ವೆಚ್ಚ : 17,011.50 ಲಕ್ಷ ರೂ
*ಕಲಬುರಗಿ ತಾಲೂಕು*
ಉದನೂರ ಹೊಸದಾಗಿ ಪ್ರಸ್ತಾಪಿಸಲಾದ 2 x 10
ಒಗಿಂ 110/11 ಕೆ.ವಿ ವಿದ್ಯುತ್ ಉಪ ಕೇಂದ್ರ ಉದನೂರ
ವೆಚ್ಚ : 1,282.12 ಲಕ್ಷ ರೂ
*ಒಟ್ಟು : 18,293.62 ಲಕ್ಷ ರೂ*
ವೆಚ್ಚದ ಕಾಮಗಾರಿಗಳಿಗೆ ಅಡಿಗಲ್ಲು
*ಜೆಸ್ಕಾಂ ಕಲಬುರಗಿ*
*ಯಡ್ರಾಮಿ ತಾಲೂಕು*
ಜೆಸ್ಕಾಂ ವತಿಯಿಂದ ಕೈಗೊಂಡ ಕಾರ್ಯ ಮತ್ತು ಪಾಲನೆ ಉಪ ವಿಭಾಗ ಕಛೇರಿ
*57.41 ಲಕ್ಷ ರೂ*
ವೆಚ್ಚದ ಕಾಮಗಾರಿಯ ಉದ್ಘಾಟನೆ
*ಕೆ.ಪಿ.ಟಿ.ಸಿ.ಎಲ್ ಕಲಬುರಗಿ*
*ಆಳಂದ ತಾಲೂಕು*
ರುದ್ರವಾಡಿ – ಹೊಸದಾಗಿ ಪ್ರಸ್ತಾಪಿಸಲಾದ 1 * 10
MVA, 110/11 KV ವಿದ್ಯುತ್ ಉಪ ಕೇಂದ್ರ. (ಭಂಗರಗಾ)
*878.89 ಲಕ್ಷ ರೂ*
ವೆಚ್ಚದ ಕಾಮಗಾರಿಯ ಉದ್ಘಾಟನೆ
*ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಲಬುರಗಿ*
*ಚಿತ್ತಾಪುರ ತಾಲೂಕು ರಾವೂರ ಗ್ರಾಮ*
ಮೊರಾರ್ಜಿ ದೇಸಾಯಿ ವಸತಿ
ಶಾಲೆ, ಸಿಬ್ಬಂದಿಗಳ ವಸತಿ ಗೃಹ ಹಾಗೂ ಅಗತ್ಯ ಮೂಲಭೂತ
ಸೌಕರ್ಯಗಳ ಕಾಮಗಾರಿ (2ನೇ ಹಂತ)
850.00 ಲಕ್ಷ ರೂ
ವೆಚ್ಚದ ಕಾಮಗಾರಿಯ ಉದ್ಘಾಟನೆ
*ಜಿಲ್ಲಾ ಕೈಗಾರಿಕಾ ಕೇಂದ್ರ, ಕಲಬುರಗಿ*
ಕಲಬುರಗಿ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ ಜಿಲ್ಲಾ ಕೈಗಾರಿಕಾ ಕೇಂದ್ರ ಕಾರ್ಯಲಯದ ಕಟ್ಟಡ
*407.00 ಲಕ್ಷ ರೂ*
ವೆಚ್ಚದ ಕಾಮಗಾರಿಯ ಉದ್ಘಾಟನೆ
*ಸಮಾಜ ಕಲ್ಯಾಣ ಇಲಾಖೆ ಕಲಬುರಗಿ*
ಆಳಂದ ತಾಲೂಕಿನ ಖಜೂರಿ ಗ್ರಾಮದಲ್ಲಿ ಅಂಬೇಡ್ಕರ ಭವನ ನಿರ್ಮಾಣ
ವೆಚ್ಚ : *50.00 ಲಕ್ಷ ರೂ*
ಆಳಂದ ತಾಲೂಕಿನ ಖಜೂರಿ ಗ್ರಾಮದಲ್ಲಿ ಇಂದಿರಾ ಗಾಂಧಿ ವಸತಿ ಶಾಲೆ
ನಿರ್ಮಾಣ
ವೆಚ್ಚ : *1,800.00 ಲಕ್ಷ ರೂ*
*ಒಟ್ಟು : 1,850 ಲಕ್ಷ ರೂ*
ವೆಚ್ಚದ ಕಾಮಗಾರಿಯ ಉದ್ಘಾಟನೆ
*ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಕಲಬುರಗಿ*
ಕಲಬುರಗಿ ತಾಲೂಕಿನ ಮಿಣಜಗಿ ಗ್ರಾಮದ ಗಾಯರಾಣ ಸರ್ವೆ ನಂ.23
ರಲ್ಲಿ ಸರ್ಕಾರಿ ಗೋಶಾಲೆ ಕಟ್ಟಡ ಮತ್ತು ಕಾಂಪೌಂಡ್ ನಿರ್ಮಾಣ
(ಎಮ್.ಎಸ್.ಗ್ರೀಲ್)
*84.32 ಲಕ್ಷ ರೂ*
ವೆಚ್ಚದ ಕಾಮಗಾರಿಯ ಉದ್ಘಾಟನೆ
*ಕೆ.ಕೆ.ಆರ್.ಟಿ.ಸಿ*
ಕೆ.ಕೆ.ಆರ್.ಟಿ.ಸಿ ವತಿಯಿಂದ ಹೊಸ ಸ್ಲೀಪರ್ ಬಸ್ ಖರೀದಿ ಯೋಜನೆ
*1,800.35 ಲಕ್ಷ ರೂ*
ವೆಚ್ಚದ ಯೋಜನೆ ಉದ್ಘಾಟನೆ
ಕಲಬುರಗಿ ಜಿಲ್ಲೆಯ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದೆ.