ಬೆಂಗಳೂರು:
ದೇಶದಲ್ಲಿ ಎಲ್ಲಾ ವಾಹನಗಳು ಏಕರೂಪ ನೋಂದಣಿ ಸಂಖ್ಯೆ ಫಲಕ ಅಳವಡಿಸುವಂತೆ ಚಾಲನೆ ನೀಡಿದ್ದು ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರಾಷ್ಟ್ರೀಯ ರಸ್ತೆ ಸುರಕ್ಷತೆ ಸಮಿತಿ ಸದಸ್ಯ ಡಾ. ಕಮಲಜಿತ್ ಸೋಯಿ ಕರ್ನಾಟಕದ ಎಲ್ಲ ಹಳೆಯ ವಾಹನಗಳ ನಂಬರ್ಪ್ಲೇಟ್ ಬದಲಾಯಿಸಿ ಅತಿ ಸುರಕ್ಷಿತ ನೋಂದಣಿ ಫಲಕ ಅಳವಡಿಸಿಕೊಳ್ಳಬೇಕು. ಎಚ್ಎಸ್ಆರ್ಪಿ(ಹೈ ಸೆಕ್ಯುರಿಟಿ ರಿಜಿಸ್ಪ್ರೇಷನ್ ಪ್ಲೇಟ್ಸ್) ಯೋಜನೆಯು ವಾಹನದ ಸುರಕ್ಷತೆ ಮತ್ತು ಭದ್ರತೆಯನ್ನು ನೀಡುವ ಮೂಲಕ ನೇರವಾಗಿ ರಾಷ್ಟ್ರೀಯ ಭದ್ರತೆಗೆ ಕೊಡುಗೆ ನೀಡುತ್ತದೆ. ಅಲ್ಲದೇ ವಾಹನ ಸಂಬಂಧಿತ ಅಪರಾಧ ಚಟುವಟಿಕೆಗಳನ್ನು ನಿರ್ಬಂಧಿಸುತ್ತದೆ. 2019 ಏಪ್ರಿಲ್ 1ಕ್ಕಿಂತ ಮುಂಚೆ ನೋಂದಣಿಯಾದ ವಾಹನಗಳು ಎಚ್ಎಸ್ಆರ್ಪಿಗಳನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ತಿಳಿಸಿದರು.
ಅಪರಾಧ ಕೃತ್ಯಗಳಲ್ಲಿ ನಕಲಿ ನೋಂದಣಿ ಸಂಖ್ಯೆಯ ವಾಹನಗಳ ಬಳಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಈ ಬದಲಾವಣೆ ತಂದಿದ್ದು ಕರ್ನಾಟಕದ ಸಾರಿಗೆ ಇಲಾಖೆ 2023 ಆಗಸ್ಟ್ 18ರಂದು ಈ ಆದೇಶ ಹೊರಡಿಸಿದೆ. ಇದಕ್ಕೆ ನ.17ರವರೆಗೆ ಕಾಲಾವಕಾಶ ನೀಡಿದ್ದು ತಪ್ಪಿದರೆ 500ರಿಂದ 1 ಸಾವಿರ ರು.ಗಳವರೆಗೆ ದಂಡ ವಿಧಿಸಬಹುದಾಗಿದೆ ಎಂದು ಸೂಚಿಸಿದರು.
ಶೋ ರೂಂ ಅಥವಾ ಡೀಲರ್ಗಳಲ್ಲಿ ವಾಹನಗಳ ಮಾಲೀಕರು ನಂಬರ್ ಪ್ಲೇಟ್ ಬದಲಾವಣೆಗೆ ಕೋರಿಕೆ ಸಲ್ಲಿಸಬಹುದಾಗಿದ್ದು ನಾಲ್ಕು ಚಕ್ರದ ವಾಹನಗಳಿಗೆ 400ರಿಂದ 500 ರು.ಗಳವರೆಗೆ ಶುಲ್ಕ ಇರುತ್ತದೆ. ಒಂದು ವೇಳೆ ಎಚ್ಎಸ್ಆರ್ಪಿ ಅಳವಡಿಸದಿದ್ದರೆ ಮಾಲೀಕತ್ವದ ಬದಲಾವಣೆ, ವಿಳಾಸ ಬದಲಾವಣೆ, ನಕಲಿ ಆರ್ಸಿ, ವಿಮೆ ಅಪ್ಡೇಟ್, ಸಾಮರ್ಥ್ಯ ಅನುಮೋದನೆ ಇತ್ಯಾದಿ ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.