ಬೆಳಗಾವಿ :
ಸತತ ಪರಿಶ್ರಮದಿಂದ ನಾವು ಪ್ರಯತ್ನ ಪಟ್ಟು ಔನತ್ಯ ಸಾಧಿಸಬೇಕು ಎಂದು
ಮೈಸೂರಿನ ರಾಮಕೃಷ್ಣ ಮಿಷನ್ ಆಶ್ರಮದ ಪೂಜ್ಯ ಸ್ವಾಮಿ ಮಹಾಮೇಧಾನಂದಜೀ ಮಹಾರಾಜ ತಿಳಿಸಿದರು.
ಬೆಳಗಾವಿಯ ರಾಮಕೃಷ್ಣ ಮಿಷನ್ ಆಶ್ರಮದಲ್ಲಿ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣದ ಸ್ಮರಣಾರ್ಥ ಶುಕ್ರವಾರ ನಡೆದ ಯುವ ಸಮ್ಮೇಳನದಲ್ಲಿ ಅವರು
“ನನ್ನ ಯಶಸ್ಸು ದೇಶದ ಯಶಸ್ಸು” ಎಂಬ ವಿಚಾರವಾಗಿ ಮಾತನಾಡಿದರು.
ಮನುಷ್ಯನಲ್ಲಿರುವ ಪಶುತ್ವವನ್ನು ತ್ಯಾಗ ಮಾಡಿ ಸಾಧನೆ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ “ಸದೃಢ ವ್ಯಕ್ತಿತ್ವ ಸಮೃದ್ಧ ರಾಷ್ಟ್ರ” ಎಂಬ ವಿಷಯದ ಬಗ್ಗೆ ಮಾತನಾಡಿದ ಬೆಂಗಳೂರಿನ ಸಾಫ್ಟ್ ಸ್ಕಿಲ್ ಟ್ರೈನರ್ ರಮೇಶ್ ಉಮರಾಣಿ ಮಾತನಾಡಿ, ಸದೃಢ ವ್ಯಕ್ತಿತ್ವ ನಿರ್ಮಾಣಕ್ಕಾಗಿ ಭಾವಿಸಬಲ್ಲ ಹೃದಯ, ಅರಿತುಕೊಳ್ಳಬಲ್ಲ ಮೆದುಳು ಹಾಗೂ ಕಾರ್ಯ ಮಾಡುವ ಶಕ್ತಿಯುಳ್ಳ ಬಾಹುಗಳಿರಬೇಕು. ಇದಕ್ಕಾಗಿ ಅಪ್ಪಟ ಪ್ರಾಮಾಣಿಕ, ನಿಸ್ವಾರ್ಥ ಹಾಗೂ ಪರಮಪರಿಶುದ್ಧ ಆಗಿರಬೇಕು ಎಂದು ತಿಳಿಸಿದರು.
ಇಸ್ರೋ ವಿಜ್ಞಾನಿ ಎಂ.ಎಸ್. ಶ್ರೀನಿವಾಸನ್ ಮಾತನಾಡಿ, ಚಂದ್ರಯಾನ ಮೂರು ಯಶಸ್ವಿ ಕುರಿತು ತಿಳಿಸಿಕೊಟ್ಟರು.
ಸಮ್ಮೇಳನದ ಮುಖ್ಯ ಅತಿಥಿಗಳನ್ನು ಮತ್ತು ಉಪನ್ಯಾಸಕರನ್ನು ಹಾಗೂ ಸಮ್ಮೇಳನಕ್ಕೆ ಆಗಮಿಸಿದ ಬೆಳಗಾವಿಯ ವಿವಿಧ ಕಾಲೇಜುಗಳ ಯುವ ವಿದ್ಯಾರ್ಥಿ ಸಮೂಹವನ್ನು ಆಶ್ರಮದ ಕಾರ್ಯದರ್ಶಿ ಸ್ವಾಮಿ ಆತ್ಮಪ್ರಾಣಾನಂದಜೀ ಮಹಾರಾಜರು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನು ಆಡಿದರು.
ಈ ಕಾರ್ಯಕ್ರಮಕ್ಕೆ ಬೆಳಗಾವಿಯ ವಿವಿಧ ಭಾಗಗಳಿಂದ 750 ಕ್ಕೂ ಹೆಚ್ಚು ಯುವ ವಿದ್ಯಾರ್ಥಿಗಳು ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಿದರು.