ಬೆಳಗಾವಿ:ಗಡಿನಾಡಿನ ಹೆಮ್ಮೆಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ನೂತನ ಕುಲಪತಿ ಯಾರು ಆಗುತ್ತಾರೆ ಎಂಬ ಚರ್ಚೆ ಇದೀಗ ಶೈಕ್ಷಣಿಕ ಹಾಗೂ ವಿದ್ಯಾರ್ಥಿ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ರಾಜ್ಯದ ಐದು ವಿಶ್ವವಿದ್ಯಾಲಯಗಳಿಗೆ ನೂತನ ಕುಲಪತಿ ನೇಮಕ ಬಾಕಿ ಇದೆ. ಮೈಸೂರು, ಬಳ್ಳಾರಿ, ಬೆಳಗಾವಿ, ಶಿವಮೊಗ್ಗ ಮತ್ತು ಮಂಗಳೂರು ವಿಶ್ವವಿದ್ಯಾಲಯಕ್ಕೆ ಕುಲಪತಿ ಆಯ್ಕೆ ನಡೆಯಬೇಕಾಗಿದೆ. ಈ ಐದು ವಿಶ್ವವಿದ್ಯಾಲಯಗಳಿಗೆ ನೂತನ ಕುಲಪತಿಗಳ ನೇಮಕ ಮಾಡುವ ಬಗ್ಗೆ ರಾಜ್ಯಪಾಲರು ಮತ್ತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದು ಕೊನೆಗೆ ಅಂತಿಮ ಆಯ್ಕೆ ಕೆಲವೇ ದಿನಗಳಲ್ಲಿ ನಡೆಯುವ ಸಾಧ್ಯತೆ ಇದೆ. ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಕುಲಪತಿಯಾಗಲು ಪ್ರತಿಷ್ಠಿತರು ಇದೀಗ ತೆರೆಮರೆಯಲ್ಲಿ ಅಗತ್ಯವಾದ ಎಲ್ಲಾ ಕಸರತ್ತು ನಡೆಸುತ್ತಿದ್ದಾರೆ.
ಎಂ.ರಾಮಚಂದ್ರಗೌಡ ಅವರು ಜುಲೈ 4 ರ 2019 ರಿಂದ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಯಾಗಿ 2023ರ ಜುಲೈ 4 ರಂದು ಸೇವಾ ನಿವೃತ್ತಿಕೊಂಡಿದ್ದರು. ಅವರ ನಂತರ ವಿಶ್ವವಿದ್ಯಾಲಯಕ್ಕೆ ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಪ್ರೊ.ವಿ.ಎಫ್.ನಾಗಣ್ಣವರ ಪ್ರಭಾರ ಕುಲಪತಿಯಾಗಿ ನೇಮಕಗೊಂಡಿದ್ದರು.