ಗೀತೆಯ ಸಾರದಂತೆ ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ |…ನಿನ್ನ ಕರ್ತವ್ಯವನ್ನು ನೀನು ಮಾಡು ಪ್ರತಿಫಲ ನನಗೆ ಬಿಡು… ಎನ್ನುವ ಮಾತಿನಂತೆ ಶಿಕ್ಷಕ ವೃತ್ತಿಗೆ ನೆಚ್ಚಿಕೊಂಡ ಶಿಕ್ಷಕಿಯ ಕತೆ ಇದು.
ಬೆಳಗಾವಿ :ಪ್ರಶಸ್ತಿಗೆ ಬೆನ್ನು ಹತ್ತಿ ಹೋಗುತ್ತಿರುವ ಇಂದಿನ ದಿನಮಾನಗಳಲ್ಲಿ ಇಲ್ಲೊಬ್ಬರು ಅಪರೂಪದಲ್ಲೇ ಅಪರೂಪದ ಶಿಕ್ಷಕಿ ಮಾದರಿಯಾಗಿ ನಿಂತಿದ್ದಾರೆ. ತಮಗೆ ತಾಲೂಕು ಮಟ್ಟದ ಆದರ್ಶ ಶಿಕ್ಷಕಿ ಪ್ರಶಸ್ತಿ ಘೋಷಣೆಯಾಗಿದ್ದರೂ ಅದನ್ನು ಸ್ವೀಕರಿಸಲು ಹೋಗದೇ ಜತೆಗೆ ಪ್ರಶಸ್ತಿ ಬಂದಿರುವುದನ್ನು ಮನೆಯಲ್ಲೂ ಹೇಳದೇ ಎಲೆಮರೆಯ ಕಾಯಿಯಂತೆ ಇದ್ದು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡುವಲ್ಲಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಶ್ರೇಷ್ಠ ಶಿಕ್ಷಕರಾಗಿ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿರುವ ಮಾಜಿ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಸವಿ ನೆನಪಿಗೆ ಆದರ್ಶ ಶಿಕ್ಷಕರನ್ನು ಗೌರವಿಸಲಾಗುತ್ತಿದೆ. ರಾಧಾಕೃಷ್ಣನ್ ಅವರ ಜನ್ಮದಿನವಾದ ಸೆಪ್ಟೆಂಬರ್ 5ರಂದು ಪ್ರತಿ ವರ್ಷ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದ ಶಿಕ್ಷಕ ಪ್ರಶಸ್ತಿಯನ್ನು ನೀಡುವ ಸಂಪ್ರದಾಯ ಬೆಳೆದು ಬಂದಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಶಿಕ್ಷಕರು ನಾನಾ ಲಾಬಿಗಳ ಮೂಲಕ ವಿವಿಧ ಶಿಕ್ಷಕ ಪ್ರಶಸ್ತಿ ಪಡೆಯುವ ಮಾರ್ಗ ಅನುಸರಿಸುತ್ತಿರುವುದನ್ನು ಪ್ರಮುಖವಾಗಿ ಗಮನಿಸಬಹುದು. ಜೊತೆಗೆ ಪ್ರಶಸ್ತಿ ಪಡೆಯಲು ಬೇಕಾದ ವಾಮ ಮಾರ್ಗಗಳನ್ನು ಹಿಡಿಯಲು ಶಿಕ್ಷಕರು ಹಾಗೂ ಶಿಕ್ಷಕರನ್ನು ಪ್ರತಿನಿಧಿಸುವ ಸಂಘಟನೆಗಳು ಇರುವುದನ್ನು ಸಹಾ ಗಮನಿಸಬಹುದು. ಪ್ರಶಸ್ತಿ ಪಡೆದು ಗೌರವಿಸಿದ ಫೋಟೋವನ್ನು ಪತ್ರಿಕೆಗಳಲ್ಲಿ ಪ್ರಕಟವಾಗುವಂತೆ ನೋಡಿಕೊಳ್ಳುವ ಶಿಕ್ಷಕರಿಗೂ ಕೊರತೆ ಇಲ್ಲ. ಜೊತೆಗೆ ತಾವೇ ಹಣ ಕೊಟ್ಟು ತಮಗೆ ಸಿಕ್ಕ ಪ್ರಶಸ್ತಿಯ ಫೋಟೋವನ್ನೊಳಗೊಂಡ ಜಾಹೀರಾತನ್ನು ಹಾಕಿಕೊಳ್ಳುವ ಶಿಕ್ಷಕರಿಗೂ ಬರವಿಲ್ಲ.
ಅಂತಹ ಪರಿಪಾಠ ಇಂದು ಶಿಕ್ಷಕರಲ್ಲಿ ಬೆಳೆದು ಬಂದಿದೆ. ಆದರೆ, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ನಾರಾಯಣಕೇರಿ ಶಾಲೆಯ ಈ ಶಿಕ್ಷಕಿ ಕಳೆದ ೧೩ ವರುಷಗಳಿಂದ ವಿಜ್ಞಾನ, ಇಂಗ್ಲೀಷ್ ಶಿಕ್ಷಕಿಯಾಗಿ ಮಾಡಿರುವ ಕಾರ್ಯ ಮಾತ್ರ ಇಡೀ ಶಿಕ್ಷಕ ಸಮುದಾಯಕ್ಕೆ ಅನುಕರಣೀಯವಾಗಿದೆ. ವಿದ್ಯಾರ್ಥಿಗಳಿಗೆ ಕಲಿಸುವುದನ್ನೇ ಕಾಯಕವನ್ನಾಗಿಸಿಕೊಂಡಿರುವ ಇಂತಹ ಶಿಕ್ಷಕ ಸಂಪತ್ತು ನೂರ್ಮಡಿಸಲಿ ಎನ್ನುವುದು ‘ಜನಜೀವಾಳ”ದ ಶುಭಹಾರೈಕೆಯಾಗಿದೆ.