ಜನ ಜೀವಾಳ ವಿಶೇಷ ಬೆಳಗಾವಿ :
ಬೆಳಗಾವಿ ಜಿಲ್ಲೆಯ ಜನಪ್ರಿಯ ಜಿಲ್ಲಾಧಿಕಾರಿಯಾಗಿ ಹೆಸರುಗಳಿಸಿದ್ದ ಎನ್. ಜಯರಾಮ್ ತಮ್ಮ ಅವಧಿಯಲ್ಲಿ ಮಾಡಿದ್ದ ಹತ್ತು ಹಲವು ಕಾರ್ಯಗಳು ಜನಮಾನಸದಲ್ಲಿ ನೆಲೆಯೂರಿವೆ. ಆದರೆ, ಅವರು ಬೆಂಗಳೂರಿಗೆ ವರ್ಗಾವಣೆಗೊಂಡ ನಂತರ ಜಾರಿಗೊಳಿಸಿದ್ದ ಹಲವು ಯೋಜನೆಗಳು ನಿಂತೇ ಹೋಗಿರುವುದು ಮಾತ್ರ ದುರದೃಷ್ಟಕರ. ಅಂತಹ ಯೋಜನೆಗಳಲ್ಲಿ ಪ್ರತಿಭಾ ಪುರಸ್ಕಾರವೂ ಒಂದು.
ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಗಣನೀಯ ಅಂಕ ಪಡೆದು ಸಾಧನೆಗೈದ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಗೌರವಿಸಲು ಆಗ ಜಿಲ್ಲಾಧಿಕಾರಿಯಾಗಿದ್ದ ಎನ್. ಜಯರಾಮ್ ನಿರ್ಧರಿಸಿದ್ದರು. ಅವರಿಗಾಗಿ ಪ್ರತಿಭಾ ಪುರಸ್ಕಾರ ಹೆಸರಿನಲ್ಲಿ ಕಾರ್ಯಕ್ರಮ ಏರ್ಪಡಿಸಿ ಸತ್ಕರಿಸಿ ಪ್ರತಿಭೆಗಳಿಗೆ ಪುರಸ್ಕಾರ ನೀಡುವ ಪರಂಪರೆ ಬೆಳೆಸಿದ್ದರು. ಆದರೆ, ಇದೀಗ ಅವರು ಜಾರಿಗೊಳಿಸಿದ್ದ ಮಹತ್ವದ ಯೋಜನೆ ಬೆಳಗಾವಿ ಜಿಲ್ಲೆಯಲ್ಲಿ ನಿಂತೇ ಹೋಗಿದೆ.
ಜಯರಾಮ್ ಅವರು ನಾಲ್ಕು ವರ್ಷಗಳ ಕಾಲ ಬೆಳಗಾವಿ ಜಿಲ್ಲೆಯ ಜನಪ್ರಿಯ ಜಿಲ್ಲಾಧಿಕಾರಿಯಾಗಿ ಜನಮಾನಸದಲ್ಲಿ ಇನ್ನಿಲ್ಲದ ಪ್ರೀತಿಗೆ ಪಾತ್ರರಾಗಿದ್ದರು. ಬೆಳಗಾವಿ ಜಿಲ್ಲೆಯಲ್ಲಿ ಕನ್ನಡ ಕಟ್ಟುವಲ್ಲಿ ತಮ್ಮದೇ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದ ಅವರು ಪ್ರತಿಭಾ ಪುರಸ್ಕಾರ, ಕರ್ನಾಟಕ ರಾಜ್ಯೋತ್ಸವ ಸೇರಿದಂತೆ ಗಡಿ ಜಿಲ್ಲೆಯ ಬೆಳವಣಿಗೆಗೆ ಪೂರಕವಾಗುವ ವಿವಿಧ ಕಾರ್ಯಕ್ರಮಗಳಿಗೆ ಬೆನ್ನೆಲುಬಾಗಿ ನಿಂತಿದ್ದರು. ಆದರೆ ಅವರು ಬೆಳಗಾವಿ ಜಿಲ್ಲೆಯಿಂದ ವರ್ಗಾವಣೆಗೊಂಡ ನಂತರ ಪುರದ ಪುಣ್ಯಂ ಪುರುಷರೂಪಿಯಿಂದ ಪೋಗುತಿದೆ ಎನ್ನುವಂತೆ ಕೆಲ ಯೋಜನೆಗಳು ಅವರ ಹಿಂದೆಯೇ ತೆರೆಮರೆಗೆ ಸರಿದಿರುವುದು ಕಳವಳಕಾರಿ ಎಂದು ಬೆಳಗಾವಿ ಬಗ್ಗೆ ಕಾಳಜಿ ಹೊಂದಿರುವ ಕೆಲ ಚಿಂತಕರು ಬೇಸರ ವ್ಯಕ್ತಪಡಿಸಿದ್ದಾರೆ.
ಏನಿದು ಕಾರ್ಯಕ್ರಮ ?: ಜಯರಾಮ್ ಬೆಳಗಾವಿ ಜಿಲ್ಲಾಧಿಕಾರಿಯಾಗಿದ್ದಾಗ ಪ್ರತಿಭೆಗಳನ್ನು ಉತ್ತೇಜಿಸಲು ಸಂಕಲ್ಪಿಸಿದ್ದರು. ಐಎಎಸ್, ಐಪಿಎಸ್, ಕೆಎಎಸ್ ಪಾಸಾದವರು ತಮ್ಮ ಪ್ರವೇಟ್ ಫಂಡ್ ಮೂಲಕ ಶೇಕಡಾ 90 ರಷ್ಟು ಅಂಕ ಪಡೆದ ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುತ್ತಿದ್ದರು. ಜೊತೆಗೆ ಆಗ ತಾನೆ ಐಎಎಸ್, ಐಪಿಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರನ್ನು ಕರೆತಂದು ವಿದ್ಯಾರ್ಥಿಗಳಿಗೆ ಅವರ ಜೀವನ ಸಾಹಸಗಾಥೆಯನ್ನು ಪರಿಚಯಿಸಿ ವಿದ್ಯಾರ್ಥಿಗಳ ಭವಿಷ್ಯದ ಜೀವನಕ್ಕೆ ದಾರಿದೀಪವಾಗುತ್ತಿದ್ದರು. ಸರಕಾರದ ಯಾವುದೇ ನೆರವಿಲ್ಲದೆ ಈ ಪ್ರತಿಭಾ ಪ್ರೋತ್ಸಾಹ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿತ್ತು.
ಪ್ರತಿಭಾವಂತ ಮಕ್ಕಳನ್ನು ಪ್ರೋತ್ಸಾಹಿಸಬೇಕು ಮತ್ತು ಪ್ರೇರಣೆ ನೀಡಬೇಕು. ವಿಶೇಷವಾಗಿ ಹಿಂದುಳಿದ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳ ಸಲುವಾಗಿ ಆ ಅಧಿಕಾರಿ ವಿಶೇಷ ಯೋಜನೆಯನ್ನು ಬೆಳಗಾವಿ ಜಿಲ್ಲೆಯಲ್ಲಿ ಕಾರ್ಯಗತಗೊಳಿಸಿದ್ದರು. ಆ ಯೋಜನೆ ಇಡೀ ರಾಜ್ಯಕ್ಕೆ ಮಾದರಿಯಂತಿದೆ.
ಜಯರಾಮ್ ಅವರು ತಮ್ಮ ಅವಧಿಯಲ್ಲಿ ಜಾರಿಗೊಳಿಸಿದ್ದ ಯೋಜನೆಗಳನ್ನು ಮತ್ತೆ ಕಾರ್ಯರೂಪಕ್ಕೆ ತರುವಲ್ಲಿ ಈಗಿನ ಅಧಿಕಾರಿ ವರ್ಗ ಮುಂದಾಗಲಿ ಎಂದು ಹಲವರು ಸಲಹೆ ನೀಡಿದ್ದಾರೆ.