ಯುವ ವಕೀಲರು ಸಮಾಜಕ್ಕೆ ವಿಶೇಷ ಕೊಡುಗೆ ನೀಡಲು ಜೀವನವನ್ನು ಮೀಸಲಿಡಬೇಕು : ಡಾ.ವಿಶ್ವನಾಥ ಕರೆ
ಬೆಳಗಾವಿ :
ವಕೀಲರು ತಮ್ಮ ಜ್ಞಾನ, ಮೌಲ್ಯಯುತ ಬದ್ದತೆ, ಕೌಶಲ್ಯ, ಜ್ಞಾನ, ಸಾಮಾಜಿಕ ಕಳಕಳಿ ಮುಂತಾದ ಉದಾತ್ತ ಗುಣಗಳಿಂದ ಸಮಾಜದ ಅಭಿವೃದ್ಧಿಗೆ ತಮ್ಮ ವಿಶೇಷ ಕೊಡುಗೆ ನೀಡಬೇಕು ಎಂದು ರಾಯಚೂರು ವಿಶ್ವವಿದ್ಯಾಲಯದ ಕುಲಸಚಿವ ಡಾ.ವಿಶ್ವನಾಥ ತಿಳಿಸಿದರು. ಶನಿವಾರ ನಗರದ ಕೆಎಲ್ ಇ ಸಂಸ್ಥೆಯ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯದ ವಾರ್ಷಿಕ ದಿನ ‘ಅನುಬಂಧ 2023’ ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾಜಿಕ ಪರಿವರ್ತನೆಯಲ್ಲಿ ವಕೀಲರು ಅತ್ಯಂತ ಮಹತ್ವದ ಪಾತ್ರ ನಿಭಾಯಿಸುತ್ತಾರೆ. ಈ ನಿಟ್ಟಿನಲ್ಲಿ ಯುವ ವಕೀಲರು ಸದಾ ಅಧ್ಯಯನಶೀಲರಾಗಿ ತಮ್ಮ ವೃತ್ತಿ ಜೀವನವನ್ನು ಅತ್ಯಂತ ಯಶಸ್ವಿಯಾಗಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ ಚೇರ್ಮನ್ ಹಾಗೂ ನ್ಯಾಯವಾದಿ ಅರ್.ಬಿ.ಬೆಲ್ಲದ ಮಾತನಾಡಿ, ವಕೀಲ ವೃತ್ತಿಯು ಅತ್ಯಂತ ಶ್ರೇಷ್ಠ ವೃತ್ತಿಯಾಗಿದೆ. ಬೆಳಗಾವಿಯ ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯ ನಾಡಿಗೆ ಅತ್ಯಂತ ಶ್ರೇಷ್ಠ ವಕೀಲರನ್ನು ನೀಡಿದ್ದು ಈ ನಿಟ್ಟಿನಲ್ಲಿ ತಾವು ಭವಿಷ್ಯದಲ್ಲಿ ಶ್ರೇಷ್ಠ ವಕೀಲರು ಹಾಗೂ ನ್ಯಾಯಾಧೀಶರಾಗಿ ಮಹಾವಿದ್ಯಾಲಯಕ್ಕೆ ಕೀರ್ತಿ ತರಬೇಕು ಎಂದು ಕರೆ ನೀಡಿದರು.
ಕಾಲೇಜಿನ ಜಿಮಖಾನಾ ಸಮನ್ವಯಾಧಿಕಾರಿ ಡಾ.ಉಮಾ ಹಿರೇಮಠ, ಮಹಾವಿದ್ಯಾಕ ದೈಹಿಕ ಶಿಕ್ಷಣಾಧಿಕಾರಿ ಡಾ.ರಿಚಾ ರಾವ್ ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಿಂದ
ಪಿಎಚ್ ಡಿ ಪದವಿ ಪಡೆದ ಹಿನ್ನೆಲೆಯಲ್ಲಿ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಪ್ರೊ.ಶ್ರೀನಿವಾಸ ಪಾಲಕೊಂಡ ಅವರನ್ನು ಸನ್ಮಾನಿಸಲಾಯಿತು.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ ವಿವಿಧ ಕಾನೂನು ಮಹಾವಿದ್ಯಾಲಯಗಳಲ್ಲಿ ನಡೆದ ಅಣಕು ಸ್ಪರ್ಧೆಗಳು ಹಾಗೂ ವಿವಿಧ ಕ್ರೀಡಾಕೂಟಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ವಿಶೇಷವಾಗಿ ಸನ್ಮಾನಿಸಿಲಾಯಿತು.
ವಿದ್ಯಾರ್ಥಿನಿಯರಾದ ಸುನಂದಾ ಮತ್ತು ಮಹಾಲಕ್ಷ್ಮೀ ಪ್ರಾರ್ಥಿಸಿದರು. ಪ್ರಾಚಾರ್ಯ ಡಾ.ಬಿ.ಜಯಸಿಂಹ ಸ್ವಾಗತಿಸಿ ಪರಿಚಯಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ. ಸುಪ್ರಿಯಾ ಸ್ವಾಮಿ ವರದಿ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಸಂತೋಷ ಪಾಟೀಲ ವಂದಿಸಿದರು. ಪ್ರಥಮ ಬಿ ಎ ಎಲ್ ಎಲ್ ಬಿ ವಿದ್ಯಾರ್ಥಿನಿ ತೀರ್ಥಾ ನಿರೂಪಿಸಿದರು.